ಕೊಡಿಯಾಲ ಗ್ರಾಮದ ಕಲ್ಪತ್ತಬೈಲು ಶಾಲಾ ರಸ್ತೆ ತೀರ ಹದಗೆಟ್ಟಿದ್ದು ಸಂಚಾರಕ್ಕೆ ಅಸಾಧ್ಯವಾಗಿದೆ. ರಸ್ತೆಗೆ ಗುತ್ತಿಗೆದಾರರು ಮಣ್ಣು ಹಾಕಿ ಹೋಗಿದ್ದಾರೆ. ಈಗ ಕೆಸರಿನಿಂದಾಗಿ ನಡೆದಾಡಲೂ ಹರಸಾಹಸ ಪಡುವಂತಾಗಿದೆ. ಈ ರಸ್ತೆಯಿಂದ ಸುಮಾರು 500 ಮನೆಗಳಿಗೆ ಸಂಪರ್ಕವಿದ್ದು ಅವರೆಲ್ಲಾ ಇದೇ ರಸ್ತೆಯಲ್ಲಿ ಸಂಚರಿಸುವಂತಾಗಿದೆ. ಬೆಳ್ಳಾರೆಗೆ ಇಲ್ಲಿಂದ ಸುಮಾರು 6-7 ಕೀ.ಮೀ. ಇದೆ. ಶಾಸಕರಿಗೆ ಈ ರಸ್ತೆ ಬಗ್ಗೆ ತಿಳಿದಿದೆ. ಬೇರೆ ಕಡೆಗಳಲ್ಲೆಲ್ಲಾ ಡಾಮರು ,ಕಾಂಕ್ರೀಟ್ ರಸ್ತೆ ಮಾಡಿದ್ದಾರೆ. ನಮ್ಮ ವಾರ್ಡ್ ಕಲ್ಪತ್ತಬೈಲನ್ನು ಮಾತ್ರ ಕಡೆಗಣಿಸಲಾಗಿದೆ. ಗ್ರಾಮ ಪಂಚಾಯತ್ ಇನ್ನಾದರೂ ನಮ್ಮ ರಸ್ತೆಗೆ ಕೆಸರು ಇರುವ ಕಡೆಗಳಲ್ಲಿ ಮರಳು ಹಾಕಿ ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಹಿತ ರಸ್ತೆಯ ದುರಾವಸ್ತೆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲು ಪ್ರಯತ್ನಿಸಿದ್ದಾರೆ.
ಈ ಬಗ್ಗೆ ಕೊಡಿಯಾಲ ಗ್ರಾ.ಪ..ಅಧ್ಯಕ್ಷರನ್ನು ಸಂಪರ್ಕಿಸಿದಾಗ ಅವರು ಈ ರಸ್ತೆಗೆ ಶಾಸಕರು 10 ಲಕ್ಷ ಅನುದಾನ ಇರಿಸಿದ್ದಾರೆ. ಕೊರೊನದಿಂದಾಗಿ ವಿಳಂಬವಾಗಿದೆ. ಅನುದಾನ ಎಲ್ಲಿಗೂ ಹೋಗುವುದಿಲ್ಲ ಕೆಲಸ ಆಗಿಯೇ ಆಗುತ್ತದೆ. ಮರಿಕೈ ರಸ್ತೆಗೆ ಕೂಡ ೧೦ ಲಕ್ಷ ಅನುದಾನ ಇರಿಸಿದ್ದಾರೆ ಎಂದರು. ಕಲ್ಪತ್ತಬೈಲು ರಸ್ತೆ ಒಂದು ಕಡೆ ಮಾತ್ರ ಬರೆ ಕುಸಿದು ಕೆಸರಾಗಿದೆ. ವಾಹನ ಸಂಚಾರಕ್ಕೆ ತೊಂದರೇ ಆಗುವಷ್ಟೂ ಹದಗೆಟ್ಟಿಲ್ಲ ಎಂದು ಅಮರ ಸುದ್ದಿಗೆ ತಿಳಿಸಿದ್ದಾರೆ .