ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿ ದಿನೇ ದಿನೇ ಏರಿಕೆಯಾಗುತ್ತಿದೆ. ಇಂತಹ ಭೀತಿಯ ನಡುವೆಯೂ ಶಾಲಾ-ಕಾಲೇಜುಗಳು ಆಗಸ್ಟ್ ನಿಂದ ಆರಂಭಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದ್ರೇ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಶೇ.80ರಷ್ಟು ಪೋಷಕರು ಸದ್ಯಕ್ಕೆ ಶಾಲಾ-ಕಾಲೇಜು ಆರಂಭಿಸೋದು ಬೇಡ ಎಂಬುದಾಗಿ ಬಲವಾಗಿ ಅಭಿಪ್ರಾಯ ಪಟ್ಟ ಹಿನ್ನಲೆಯಲ್ಲಿ ರಾಜ್ಯದಲ್ಲಿ ದಸರಾ ರಜೆಯವರೆಗೂ ಶಾಲಾ-ಕಾಲೇಜು ಆರಂಭವಾಗುವುದಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲಿಯೇ ರಾಜ್ಯ ಸರ್ಕಾರ ಕೂಡ ಅಧಿಕೃತ ಆದೇಶ ಹೊರಡಿಸಲಿದೆ.
ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭದ ಬಗ್ಗೆ ಶಿಕ್ಷಣ ಇಲಾಖೆ ಪೋಷಕರು, ಶಿಕ್ಷಣ ತಜ್ಞರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿತ್ತು. ಇಂತಹ ಅಭಿಪ್ರಾಯ ಸಂಗ್ರಹದಲ್ಲಿ ಶೇ.80ರಷ್ಟು ಅಧಿಕ ಪೋಷಕರು ಸದ್ಯದ ಪರಿಸ್ಥಿತಿಯಲ್ಲಿ ಶಾಲಾ-ಕಾಲೇಜುಗಳನ್ನು ತೆರೆಯಲೇ ಬಾರದೆಂಬ ಬಲವಾದ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಒಂದು ವೇಳೆ ಶಾಲಾ-ಕಾಲೇಜು ಆಗಸ್ಟ್ ನಲ್ಲಿ ತೆರೆದ ನಂತ್ರ ಅಪ್ಪಿ ತಪ್ಪಿ ಯಾವುದೇ ಒಂದು ಮಗುವಿಗೂ ಕೊರೋನಾ ಸೋಂಕು ತಗುಲಿದರೂ, ಇಡೀ ಶಾಲೆಯಲ್ಲಿನ ಮಕ್ಕಳಿಗೆ ಹಬ್ಬಲಿದೆ ಎಂಬ ಭೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ 1 ರಿಂದ 5ನೇ ತರಗತಿಯ ಮಕ್ಕಳಿಗೆ ಸೋಂಕು ತಗುಲಿದ್ದೇ ಆದಲ್ಲಿ ಬದುಕುಳಿಯುವುದೇ ಕಷ್ಟ. ಹೀಗಾಗಿ ಶಾಲಾ-ಕಾಲೇಜು ತೆರೆಯೋದು ಬೇಡ. ನೀವು ತೆರೆದರೂ ನಾವು ನಮ್ಮ ಮಕ್ಕಳನ್ನು ಶಾಲೆಗಳಿಗೆ ಕಳಿಸೋದಿಲ್ಲ ಎಂಬುದಾಗಿ ಖಡಕ್ ನಿರ್ಧಾರವನ್ನು ತಿಳಿಸಿದ್ದಾರೆ.
ಆದರೇ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಶೇ.20ರಷ್ಟು ಪೋಷಕರು, ಅನುದಾನಿತ, ಅನುದಾನ ರಹಿತ, ಖಾಸಗೀ ಶಾಲೆಯ ಆಡಳಿತ ಮಂಡಳಿಯವರು ಮಾತ್ರ ಶಾಲೆಗಳನ್ನು ತೆರೆಯಲು ಆಗ್ರಹಿಸಿದ್ದಾರೆ. ಅಲ್ಲದೇ ಆಗಸ್ಟ್ ನಿಂದ ಶಾಲೆಗಳನ್ನು ಆರಂಭಿಸುವಂತೆ ತೆರೆ ಮರೆಯಲ್ಲಿ ಒತ್ತಡ ಕೂಡ ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಆದ್ರೇ ಸರ್ಕಾರ ಈ ಎಲ್ಲಾ ಅಭಿಪ್ರಾಯ ಸಂಗ್ರಹಣೆ ನಂತ್ರ ಯಾವ ತೀರ್ಮಾನ ಕೈಗೊಳ್ಳಲಿದೆ. ಆಗಸ್ಟ್ ನಲ್ಲಿ ಶಾಲಾ-ಕಾಲೇಜು ತೆರೆಯುತ್ತಾ.? ಅಥವಾ ದಸರಾ ರಜೆಯವರೆಗೆ ಶಾಲಾ-ಕಾಲೇಜು ತೆರೆಯೋದು ಮುಂದೂಡತ್ತಾ ಎಂಬುದನ್ನು ಕಾದು ನೋಡಬೇಕಿದೆ.