ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್‍ಡೌನ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಉಳಿದಿರುವ ಶಾಲಾ-ಕಾಲೇಜು ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.
ಮನೆಯಲ್ಲೇ ಇರುವ ಮಕ್ಕಳಿಗೆ ಪಠ್ಯಪುಸ್ತಕ ನೀಡುವ ಮೂಲಕ ಓದು ಬರಹದ ಕಡೆ ಗಮನ ಹರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಮಾಡಿದ್ದು , ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ರಾಜ್ಯಾದ್ಯಂತ ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿಯೇ ಉಳಿದಿದ್ದಾರೆ. ಅತ್ತ ಶಾಲೆಗಳು ಪ್ರಾರಂಭವಾಗಿಲ್ಲ. ಇತ್ತ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬುದು ತೋಚುತ್ತಿಲ್ಲ.
ಹೀಗಾಗಿ ಭವಿಷ್ಯದ ದೃಷ್ಟಿಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಪಠ್ಯಪುಸ್ತಕಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸೋಂಕು ನಿವಾರಣೆಯಾದ ನಂತರ ಶಾಲೆಗಳನ್ನು ಆರಂಭಿಸಬೇಕೆಂಬ ಒತ್ತಾಯ ಪೋಷಕರಿಂದ ಕೇಳಿ ಬಂದಿದೆ.ಸದ್ಯಕ್ಕೆ ಶಾಲೆ ಆರಂಭಿಸದಿರಲು ಸರ್ಕಾರ ಚಿಂತನೆ ನಡೆಸಿದೆ. 5 ನೇ ತರಗತಿಯವರೆಗೆ ಆನ್‍ಲೈನ್ ಶಾಲೆಯನ್ನು ಕೂಡ ರದ್ದುಪಡಿಸಿದೆ.
ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಹಾಗೂ ಪಠ್ಯಪುಸ್ತಕ ಸಂಘ ಬಹುತೇಕ ಪಠ್ಯಪುಸ್ತಕಗಳನ್ನು ಜಿಲ್ಲಾ ಕೇಂದ್ರಗಳಿಗೆ ಹೇಳಲಾಗಿದೆದ್ದು , ಶೀಘ್ರವೇ ವಿದ್ಯಾರ್ಥಿಗಳಿಗೆ ತಲುಪಿಸಲಾಗುವುದು ಎಂದು ತಿಳಿದು ಬಂದಿದೆ. ಮನೆಯಲ್ಲೇ ಉಳಿದಿರುವ ವಿದ್ಯಾರ್ಥಿಗಳು ಓದು ಬರಹದತ್ತ ಗಮನ ಹರಿಸಲಿ ಎಂಬ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.