ಸುಳ್ಯ ನಗರ ಪಂಚಾಯತಿಗೆ ನುಂಗಲಾರದ ತುತ್ತಾಗಿ ಮಾರ್ಪಾಡಾಗಿರುವ ಕಸದ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ.
ಕಸದ ರಾಶಿಯ ಮಧ್ಯೆ ನಗರ ಪಂಚಾಯತ್ ಕಚೇರಿ ಇದ್ದು ಇದರಿಂದ ವಿವಿಧ ಸಂಘ-ಸಂಸ್ಥೆಗಳು, ಸ್ಥಳೀಯ ನಿವಾಸಿಗಳು ,ರಾಜಕೀಯ ಪಕ್ಷಗಳು, ನಗರ ಪಂಚಾಯತಿ ಆವರಣದಿಂದ ಕಸವನ್ನು ಬೇರೆಡೆಗೆ ಕೊಂಡೊಯ್ಯುವಂತೆ ಮನವಿಗಳನ್ನು, ಪ್ರತಿಭಟನೆಗಳನ್ನು, ಪತ್ರಿಕೆಗಳಲ್ಲಿ ಹೇಳಿಕೆಯನ್ನು ನೀಡುವ ವಿಷಯ ಎಲ್ಲರಿಗೂ ತಿಳಿದ ವಿಚಾರ. ಈ ವಿಷಯದಲ್ಲಿ ನಗರ ಪಂಚಾಯತ್ ಮುಖ್ಯ ಅಧಿಕಾರಿ ಮತ್ತಡಿ ಅವರು ಕಳೆದ 2 ,3 ದಿನಗಳ ಹಿಂದೆ ಕಸವನ್ನು ಬೇರೆಡೆಗೆ ಸ್ಥಳಾಂತರಿಸುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ ಜೂನ್ 18 ರಿಂದ ನಗರ ಪಂಚಾಯತಿನ ಆವರಣದಿಂದ ಕಸವನ್ನು ಕೊಂಡೊಯ್ಯುವ ಪ್ರಕ್ರಿಯೆ ಚಾಲನೆಗೊಂಡಿತು.
ಅಬ್ಬಾ ಕೊನೆಗೂ ಕಸದ ವಿಷಯದಲ್ಲಿ ಮುಕ್ತಿ ಲಭಿಸಿದೆ ಎಂದು ನಿಟ್ಟುಸಿರು ಬಿಡುವ ಮುನ್ನವೇ ಕಸವನ್ನು ಸುರಿಯಲು ಕೊಂಡೊಯ್ದಿದ್ದ ಸ್ಥಳದಲ್ಲಿ ಜೂನ್ 20ರಂದು ಪ್ರತಿಭಟನೆಯ ಕಾವು ಮತ್ತೆ ಜೋರಾಯಿತು. ಕಸದ ಲಾರಿ ಕಲ್ಚರ್ಪೆಗೆ ಆರು ತಿಂಗಳ ನಂತರ ಬರುವುದನ್ನು ತಿಳಿದ ಆಲೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿ ಸುಮಾರು 40ಕ್ಕೂ ಹೆಚ್ಚು ಸ್ಥಳೀಯರು ಮತ್ತು ಪ್ರತಿಭಟನಾಕಾರರು ಸ್ಥಳದಲ್ಲಿ ಜಮಾಯಿಸಿದರು. ಮರದ ದಿಮ್ಮಿಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ವಾಹನಕ್ಕೆಪ್ರವೇಶ ನೀಡದಂತೆ ಮುಂಜಾಗ್ರತೆ ವಹಿಸಿದ್ದರು. ವಿಷಯ ತಿಳಿದ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದವರು ಇಂದು ಕಸದ ವಾಹನವನ್ನು ಕಲ್ಚರ್ಪೆಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಒಟ್ಟಿನಲ್ಲಿ ಪಂಚಾಯತಿಯ ಮುಂಭಾಗದಲ್ಲಿದ್ದ ಕಸದ ರಾಶಿಯಿಂದ ಐದಾರು ಟ್ರ್ಯಾಕ್ಟರ್ ಕಸ ಕಲ್ಚರ್ಪೆಗೆ ಸೇರಿತು. ಆದರೆ ಕಸ ತೆರವುಗೊಳಿಸುವ ನಗರ ಪಂಚಾಯತಿಯ ಕನಸು ಕನಸಾಗಿಯೇ ಉಳಿಯಿತು. ಅವೈಜ್ಞಾನಿಕವಾಗಿ ಚಿಂತಿಸುವುದನ್ನು ನಿಲ್ಲಿಸಿ ಶಾಶ್ವತವಾಗಿ ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳದೇ ನಗರ ಪಂಚಾಯತಿಗೆ ಬೇರೆ ದಿಕ್ಕೇ ಇಲ್ಲ ಎಂಬುದಂತೂ ಸತ್ಯದ ಮಾತು ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿದೆ.
ಪ್ರತಿಭಟನಾ ಸ್ಥಳದಲ್ಲಿ ಗ್ರಾಪಂ ಅಧ್ಯಕ್ಷ ಹರೀಶ್ ರಂಗತಮಲೆ ,ಸದಸ್ಯ ಯೂಸುಫ್ ಅಂಜಿ ಕಾರ್ ,ಮಾಜಿ ಅಧ್ಯಕ್ಷ ರಾಧಾಕೃಷ್ಣ ಪರಿವಾರಕಾನ, ನಾ ಪಂ ಮಾಜಿ ಸದಸ್ಯ ಗೋಕುಲ್ ದಾಸ್, ಆಲೆಟ್ಟಿ ಸಹಕಾರಿ ಸಂಘದ ಅಧ್ಯಕ್ಷ ಶ್ರೀಪತಿ ಭಟ್ ,ಉದ್ಯಮಿ ಜಗದೀಶ್ ಸರಳಿ ಕುಂಜ, ಅಶೋಕ್ ಪೀಚೆ, ಸ್ಥಳೀಯ ನಿವಾಸಿಗಳಾದ ಜನಾರ್ಧನ ಕಲ್ಚರ್ಪೆ, ಬಾಲಚಂದ್ರ, ವೆಂಕಟೇಶ ,ನವೀನ, ನಾರಾಯಣ, ವೆಂಕಟೇಶ್ ಕೆಬಿ , ಸುದೇಶ್ಅರಂಬೂರು, ಕೃಷ್ಣನಾಯ್ಕ್,ಅನಸ್ ಮೊದಲಾದವರು ಉಪಸ್ಥಿತರಿದ್ದರು.
ವರದಿ ಹಸೈನಾರ್ ಜಯನಗರ