ಗುತ್ತಿಗಾರು.ಜೂ.೨೦: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಮೂಲಕ ಆನ್‌ಲೈನ್ ಸೇವೆ ಬುಕ್ ಮಾಡುತ್ತಿದ್ದಾರೆಂದು ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ .ಸಂಸ್ಥೆಗೆ ರಾಜ್ಯ ಸರ್ಕಾರ, ದೇವಸ್ಥಾನಗಳ ಆನ್‌ಲೈನ್ ಸೇವೆ ನಡೆಸಲು ಗುತ್ತಿಗೆ ನೀಡಿದೆ ಎಂಬ ಆರೋಪ ಕೇಳಿ ಬಂದಿದ್ದು ಈ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಆನ್‌ಲೈನ್ ಸೇವೆಗೆ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಗುತ್ತಿಗಾರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಇತ್ತೀಚೆಗಷ್ಟೇ ರಾಜ್ಯದ ೫೪ ದೇವಸ್ಥಾನಗಳಿಗೆ ಆನ್‌ಲೈನ್ ಸೇವೆಗೆ ನಿರ್ಧರಿಸಿದ್ದ ರಾಜ್ಯ ಸರಕಾರ ಇದರ ನಿರ್ವಹಣೆಯನ್ನು ಫ್ಯೂರ್ ಪ್ರೇಯರ್ ಎಂಬ ಕಂಪೆನಿಗೆ ಗುತ್ತಿಗೆ ನೀಡಿತ್ತು. ವ್ಯಕ್ತಿಯೊಬ್ಬರು ನಿರ್ವಹಿಸುತಿರುವ ಈ ವೆಬ್‌ಸೈಟ್ ಸುಬ್ರಹ್ಮಣ್ಯದಲ್ಲಿ ನಡೆಸಲಾಗುತ್ತಿರುವ ಸೇವೆಗಳನ್ನು ಅಕ್ರಮವಾಗಿ ಬುಕ್ ಮಾಡಿ ದೇವಸ್ಥಾನಕ್ಕೆ ವಂಚನೆ ನಡೆಸುತ್ತಿರುವ ಆರೋಪ ಎದುರಿಸುತ್ತಿತ್ತು. ಈ ಕಂಪೆನಿ ಸೇರಿದಂತೆ ಮೂರು ವೆಬ್‌ಸೈಟ್ ವಿರುದ್ಧ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು. ೨೦೧೮ ಅ.೧೬ರಂದು ಕುಕ್ಕೆ ಸುಬ್ರಹ್ಮಣ್ಯದ ಕಾರ್ಯನಿರ್ವಹಣಾಧಿಕಾರಿ, ಸೈಬರ್ ಕ್ರೈಂ ವಿಭಾಗಕ್ಕೆ ಮೂರು ವೆಬ್‌ಸೈಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಈಗ ಹೈಕೋರ್ಟ್‌ನಲ್ಲಿದ್ದು, ಆರೋಪಿ ಸ್ಥಾನದಲ್ಲಿರುವ ಅರ್ಜುನ್ ರಂಗಾ ವಿರುದ್ಧದ ಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಗತಿ ಪರಿಶೀಲನಾ ಸಭೆಗೆ ಬಂದಿದ್ದಾಗ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ವೇದಿಕೆಯ ಶಿವರಾಮ ರೈ ನೇತೃತ್ವದಲ್ಲಿ ನಿಯೋಗವು ಸಚಿವರನ್ನು ಭೇಟಿ ಮಾಡಿ ಈ ಸಂಸ್ಥೆಗೆ ಆನ್‌ಲೈನ್ ಸೇವೆ ಅವಕಾಶ ನೀಡಿರುವುದು ಸರಿಯಲ್ಲ. ಇದನ್ನು ಬದಲಾಯಿಸಬೇಕು ಎಂದು ಮನವಿ ಮಾಡಿದ್ದರು.
ಇಂದು ಕಾರ್ಯಕ್ರಮ ನಿಮಿತ್ತ ಗುತ್ತಿಗಾರಿಗೆ ಬಂದಿದ್ದ ಸಚಿವರು ಕ್ಷೇತ್ರದ ಅನ್ ಲೈನ್ ಸೇವೆಗೆ ಪ್ರತ್ಯೇಕ ವೆಬ್ ಸೈಟ್ ತೆರೆಯುವುದಾಗಿ ತಿಳಿಸಿದ್ದಾರೆ.
- Sunday
- November 24th, 2024