ಕೊರೊನಾ ಲಾಕ್ ಡೌನ್ ಬಳಿಕ ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ರೇಟ್ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ ಇಂದು 59 ಪೈಸೆ ಹಾಗೂ ಡೀಸೆಲಿಗೆ 58 ಪೈಸೆ ಏರಿದ್ದು ರಾಜಧಾನಿ ದೆಹಲಿಯಲ್ಲಿ ಕ್ರಮವಾಗಿ ಪೆಟ್ರೋಲಿಗೆ 75.16 ರೂಪಾಯಿ ಹಾಗೂ ಡೀಸೆಲಿಗೆ 73.39 ರೂಪಾಯಿ ಆಗಿದೆ.
ಹಾಗೆಯೇ ಮುಂಬೈನಲ್ಲಿ ಈ ದರ ಕ್ರಮವಾಗಿ 82.10 ಹಾಗೂ 72.03 ಆಗಿದ್ದರೆ, ಬೆಂಗಳೂರಿನಲ್ಲಿ 77.59 ಹಾಗೂ 69.58 ಆಗಿ ಏರಿಕೆಯಾಗಿದೆ. ರಾಜ್ಯವಾರು ತೆರಿಗೆ ವ್ಯತ್ಯಾಸ ಇರುವ ಕಾರಣ ಈ ದರ ರಾಜ್ಯಕ್ಕೆ ತಕ್ಕಂತೆ ವ್ಯತ್ಯಾಸವೂ ಆಗುತ್ತೆ. ಮಂಗಳೂರಿನಲ್ಲಿ ಇವತ್ತು ಪೆಟ್ರೋಲ್ ಲೀಟರಿಗೆ 76 ರೂ. ಇದ್ದರೆ, ಡೀಸೆಲ್ ದರ 69 ರೂ. ಇದೆ. ಲಾಕ್ ಡೌನ್ ನಂತರದ ಕಳೆದ ಏಳು ದಿನಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲಿಗೆ ಲೀಟರಿಗೆ ನಾಲ್ಕು ರೂಪಾಯಿನಷ್ಟು ಬೆಲೆ ಏರಿದೆ.
ಬೆಲೆ ಏರಿಕೆಗೆ ಕಾರಣವೇನು?.
ಲಾಕ್ ಡೌನ್ನಲ್ಲಿ ಜನ ಕಂಗಾಲಾಗಿರುವ ನಡುವಲ್ಲಿ ಒಂದೇ ಸಮನೆ ಪೆಟ್ರೋಲ್ ರೇಟ್ ಏರಿಸುತ್ತಿರುವುದು ಸಾರ್ವಜನಿಕರ ಚಿಂತೆಗೆ ಕಾರಣವಾಗಿದೆ.
ನಿಜಕ್ಕಾದರೆ ಕೇಂದ್ರ ಸರಕಾರ ಈಗ ಯಾವುದೇ ಹೆಚ್ಚುವರಿ ಟ್ಯಾಕ್ಸ್ ವಿಧಿಸಿಲ್ಲ. ನಾಲ್ಕು ತಿಂಗಳ ಹಿಂದಿನ ಅವಧಿಗೆ ಹೋಲಿಸಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯೇ ಇದೆ. ಹೀಗಿದ್ದರೂ ಆಯಿಲ್ ಕಂಪನಿಗಳು ದರ ಏರಿಸಿದ್ದು ಯಾಕೆ ಅನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಆದರೆ, ಲಾಕ್ ಡೌನ್ ತ್ರೀ ಅವಧಿಯ ಮೇ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರ ಆದಾಯ ಸಂಗ್ರಹದ ಗುರಿಯಿಟ್ಟುಕೊಂಡು ತೈಲದ ಮೇಲಿನ ಎಕ್ಸೈಸ್ ಟ್ಯಾಕ್ಸ್ ಏರಿಸಿತ್ತು. ಪೆಟ್ರೋಲ್ ಲೀಟರಿಗೆ 13 ರೂ. ಮತ್ತು ಡೀಸೆಲಿಗೆ 10 ರೂ. ನಷ್ಟು ಕೇಂದ್ರ ತೆರಿಗೆಯನ್ನು ಒಮ್ಮೆಲೇ ಹೆಚ್ಚಿಸಿತ್ತು. ಲಾಕ್ ಡೌನ್ ಟೈಮಲ್ಲಿ ಘೋಷಿಸಿದ್ದ ಪರಿಹಾರ ಕ್ರಮಗಳಿಗೆ ಪರ್ಯಾಯವಾಗಿ ತೈಲ ದರ ರೂಪದಲ್ಲಿ ಆದಾಯ ಸಂಗ್ರಹಕ್ಕೆ ಇಳಿದಿತ್ತು. ಆದರೆ, ಒಮ್ಮೆಲೇ ಅಷ್ಟು ದೊಡ್ಡ ಮಟ್ಟದ ತೆರಿಗೆ ಹೆಚ್ಚಳವಾದರೂ ಅದರ ಬಿಸಿ ಜನರಿಗೆ ತಟ್ಟಿರಲಿಲ್ಲ. ಲಾಕ್ಡೌನ್ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲೂ ತೈಲದ ಬೆಲೆ ವಿಪರೀತ ಕುಸಿದಿತ್ತು. ಒಂದು ಹಂತದಲ್ಲಿ ಕಚ್ಚಾತೈಲ ಬ್ಯಾರೆಲ್ ಬೆಲೆ 20 ಡಾಲರ್ ಗಿಂತಲೂ ಕಡಿಮೆಗೆ ಇಳಿಕೆಯಾಗಿತ್ತು. ಇದೇ ವೇಳೆ, ಲಾಕ್ ಡೌನ್ ಕಾರಣ ದೇಶದಲ್ಲಿ ತೈಲದ ಬಳಕೆ ತುಂಬ ಕಡಿಮೆ ಇದ್ದ ಕಾರಣ ಆಯಿಲ್ ಕಂಪೆನಿಗಳು ತೆರಿಗೆ ಹೆಚ್ಚಳದ ಬರೆಯನ್ನು ಜನರಿಗೆ ವರ್ಗಾಯಿಸಿರಲಿಲ್ಲ.
ಇದೀಗ ಕೊರೊನಾ ಅನ್ ಲಾಕ್ ಕಾರಣ ಬಹುತೇಕ ಕೈಗಾರಿಕೆಗಳು ಮತ್ತು ಜನರಿಂದ ಬೇಡಿಕೆ, ವಹಿವಾಟುಗಳು ಹೆಚ್ಚಿದ್ದರಿಂದ ತೈಲದ ಬಳಕೆಯೂ ಏರಿಕೆಯಾಗಿದೆ. ಅತ್ತ ಕಚ್ಚಾ ಬೈಲದ ಬೆಲೆಯೂ ತುಸು ಏರುಗತಿಗೆ ಹೊರಳುತ್ತಿದೆ. ಪೂರೈಕೆ ಮತ್ತು ಬೇಡಿಕೆಯ ಸಮತೋಲನ ಸಾಧಿಸಲು ಆಯಿಲ್ ಕಂಪೆನಿಗಳು ಈಗ ಪೈಸೆಗಳ ಲೆಕ್ಕದಲ್ಲಿ ದಿನವೂ ತೈಲದ ದರವನ್ನು ಏರಿಸಲು ಆರಂಭಿಸಿವೆ. ಹೀಗಾಗಿ ತೈಲ ದರ ಏರಿಕೆಯ ಬಿಸಿ ಇನ್ನು ಕೈಸುಡುವ ಹಂತಕ್ಕೂ ಹೋಗುವ ಅಪಾಯ ಇಲ್ಲ ಎನ್ನುವಂತಿಲ್ಲ. ಇದೇ ಕಾರಣಕ್ಕೆ 82 ದಿನಗಳ ನಂತರ ತೈಲದ ದರ ಏರುಗತಿಯಲ್ಲಿದೆ.