ಸುಳ್ಯದಿಂದ ಪೆರಾಜೆ ಗ್ರಾಮದ ಅರಮನೆಪಾರೆ ಮೂಲಕ ಬಿಳಿಯಾರಿಗೆ ಹಾದು ಹೋಗುತ್ತಿರುವ ವಿದ್ಯುತ್ ಎಚ್ ಟಿ ಲೈನ್ ಸ್ಥಳೀಯ ಜನತೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಕಳೆದ 2 ವರ್ಷಗಳ ಹಿಂದೆ ಈ ವಿದ್ಯುತ್ ತಂತಿಯನ್ನು ಅಳವಡಿಸಲಾಗಿದ್ದು ತಂತಿಯು ಹಾದು ಹೋಗುವ ಸ್ಥಳದಲ್ಲಿ ಅರಮನೆಪಾರೆಯ 15 ಕ್ಕೂ ಹೆಚ್ಚು ಕುಟುಂಬಗಳು ಭಯದಲ್ಲಿದ್ದಾರೆ. ಈ ಪರಿಸರದಲ್ಲಿ ಕಳೆದ 40 ವರ್ಷಗಳಿಂದ ಸಣ್ಣಪುಟ್ಟ ಮನೆ ನಿರ್ಮಿಸಿ ಸುಮಾರು 15ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ. ಇದೀಗ ವಿದ್ಯುತ್ ಲೈನ್ ನಿಂದಾಗಿ ಅಪಾರ ನಷ್ಟಗಳು ಉಂಟಾಗಿದ್ದು ಮನೆಯ ಅಂಗಳದಲ್ಲಿ ಸಣ್ಣ ಪುಟ್ಟ ಮಕ್ಕಳು ಆಟವಾಡಲು ಭಯಪಡುವ ಪರಿಸ್ಥಿತಿ ಉಂಟಾಗಿದೆ. ಸಣ್ಣ ಪುಟ್ಟ ಸಿಡಿಲಿನ ಸಂದರ್ಭದಲ್ಲಿ ಗೃಹ ಉಪಕರಣ ಸಾಮಾಗ್ರಿಗಳಾದ ಟಿವಿ, ಫ್ಯಾನ್, ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗುತ್ತಿದೆ.ಇದೀಗ ಮಳೆಗಾಲ ಆರಂಭವಾಗಿದ್ದು ತಂತಿಗೆ ತಾಗಿಕೊಂಡು ಮರದ ಗೆಲ್ಲುಗಳು ಸ್ಪರ್ಶಿಸುವಾಗ ಬೃಹತ್ ಶಬ್ದದೊಂದಿಗೆ ಬೆಂಕಿಯ ಜ್ವಾಲೆಗಳು ಉಂಟಾಗುತ್ತಿದೆ.ಇದರಿಂದ ಸ್ಥಳೀಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಕೂಡಲೇ ಇದಕ್ಕೆ ಸ್ಪಂದಿಸಿ ತಂತಿಗಳಿಗೆ ರಕ್ಷಾಕವಚ ಅಳವಡಿಸಿಕೊಡುವ ಬಗ್ಗೆ ಸ್ಥಳೀಯ ನಿವಾಸಿಗಳು ಸಹಿ ಸಂಗ್ರಹ ಮಾಡಿದ ಮನವಿಯನ್ನು ಸಂಬಂಧಪಟ್ಟ ಇಲಾಖೆಗೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
- Thursday
- November 21st, 2024