ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್ ಗೆ ಕೆನರಾ ಬ್ಯಾಂಕ್ ವತಿಯಿಂದ ಕಾರನ್ನು ಗಿಫ್ಟ್ ಮಾಡಲಾಗಿದ್ದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ನಾಲ್ಕು ದಿನಗಳ ಹಿಂದೆ ಮಂಗಳೂರಿನ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳೇ ಸ್ವತಃ ಕಾರನ್ನು ಸ್ಮಾರ್ಟ್ ಸಿಟಿ ಎಂಡಿ ಮಹಮ್ಮದ್ ನಜೀರ್ ಗೆ ಹಸ್ತಾಂತರ ಮಾಡಿದ್ದಾರೆ.
“ಸ್ಮಾರ್ಟ್_ಸಿಟಿ” ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ. ಯೋಜನೆ ಮುಖ್ಯಸ್ಥರಾಗಿ ಐಎಎಸ್ ದರ್ಜೆಯ ಅಧಿಕಾರಿಯನ್ನೇ ನೇಮಕ ಮಾಡಬೇಕೆಂದು ಪ್ರಧಾನಿ ಸೂಚನೆ ಇದ್ದರೂ, ಮಂಗಳೂರಿನಲ್ಲಿ ಮಾತ್ರ ಕೆಎಎಸ್ ದರ್ಜೆಯೂ ಅಲ್ಲದ ವ್ಯಕ್ತಿಯನ್ನು ಸ್ಮಾರ್ಟ್ ಸಿಟಿ ಯೋಜನೆಯ ಎಂಡಿ ಮಾಡಲಾಗಿದೆ ಎನ್ನಲಾಗಿದೆ ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಆಗಿದ್ದ ಎಂಬ “ಅರ್ಹತೆ” ಆಧಾರದಲ್ಲಿ ಸ್ಮಾರ್ಟ್ ಸಿಟಿ ಎಂಡಿಯಾಗಿರುವ ವ್ಯಕ್ತಿಗೆ ಈಗ ಕೇಂದ್ರ ಸರಕಾರದ ಅಧೀನದ ಬ್ಯಾಂಕಿನಿಂದಲೇ ಕಾರು ಗಿಫ್ಟ್ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬ್ಯಾಂಕ್ ಮೂಲದಿಂದ ತಿಳಿದ ಮಾಹಿತಿ ಪ್ರಕಾರ, ಕೆನರಾ ಬ್ಯಾಂಕಿನಲ್ಲಿ ಸ್ಮಾರ್ಟ್ ಸಿಟಿಗೆಂದು ಬಂದಿರುವ 200 ಕೋಟಿ ರೂಪಾಯಿ ಅನುದಾನದ ಹಣವನ್ನು ಎಫ್ ಡಿ ಇಡಲಾಗಿದೆ.
ಇಂಥ ದೊಡ್ಡ ಮೊತ್ತದ ಎಫ್ ಡಿ ಮಾಡಿರುವುದಕ್ಕಾಗಿ ಸ್ಮಾರ್ಟ್ ಸಿಟಿ ಎಂಡಿಗೆ ಕೆನರಾ ಬ್ಯಾಂಕ್ ಪ್ರಮುಖರು ಸೇರಿ ಕಾರನ್ನು ಸ್ಪಾನ್ಸರ್ ಮಾಡಿದ್ದಾರಂತೆ
ಎರ್ಟಿಕಾ ನ್ಯೂ ಮಾಡೆಲ್ ಕಾರು ಇದಾಗಿದ್ದು ಹಿಂಭಾಗದಲ್ಲಿ ಕೆನರಾ ಬ್ಯಾಂಕಿನಿಂದ ಸ್ಪಾನ್ಸರ್ ಅಂತಲೇ ಬರೆಯಲಾಗಿದೆ. ಆದರೆ, ಒಬ್ಬ ಸರಕಾರಿ ಅಧಿಕಾರಿಗೆ ಯಾವುದೇ ರೀತಿಯಲ್ಲಿ ಗಿಫ್ಟ್ ನೀಡುವಂತಿಲ್ಲ.
ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕರಿಗೆ ಕಾರನ್ನು ಸ್ಪಾನ್ಸರ್ ಮಾಡಿದ್ದು ಎಂದರೂ, ಸಾರ್ವಜನಿಕ ರಂಗದ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಮಾಡಿದ್ದು ಕಾನೂನು ಉಲ್ಲಂಘನೆಯಾಗುತ್ತದೆ. ಬ್ಯಾಂಕಿನ ಸಿಎಸ್ ಆರ್ ಫಂಡನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಾತ್ರ ಹೂಡಿಕೆ ಮಾಡಬಹುದು.
ತಪ್ಪಿದಲ್ಲಿ ಸಾರ್ವಜನಿಕರಿಗೆ ಉಪಯೋಗ ಆಗಬಲ್ಲ ರಸ್ತೆ ಡಿವೈಡರ್ ನಿರ್ಮಾಣ, ಪೊಲೀಸ್ ಬ್ಯಾರಿಕೇಡ್, ಪಾರ್ಕ್ ದುರಸ್ತಿ, ಶೌಚಾಲಯ, ಸರಕಾರಿ ಕಚೇರಿ ದುರಸ್ತಿಯಂಥ ಕೆಲಸಗಳನ್ನು ಮಾತ್ರ ಮಾಡಬಹುದಾಗಿದೆ.
ಯಾವುದೇ ಒಬ್ಬ ಅಧಿಕಾರಸ್ಥ ವ್ಯಕ್ತಿಗೆ ಕಾರನ್ನು ಗಿಫ್ಟ್ ಮಾಡುವುದು ಲಂಚಕ್ಕೆ ಸಮಾನವಾಗುತ್ತದೆ. ಇಂಥದ್ರಲ್ಲಿ ಮಂಗಳೂರು ಸ್ಮಾರ್ಟ್ ಸಿಟಿಯ ಸ್ಮಾರ್ಟ್ ಎಂಡಿಗೆ ಕಾರು ಗಿಫ್ಟ್ ಮಾಡಿರುವುದರ ಹಿಂದಿನ ಮರ್ಮವೇನು ಅನ್ನುವುದು ಸಾರ್ವಜನಿಕರಿಗೆ ತಿಳಿಯಬೇಕಿದೆ.
ಸ್ಮಾರ್ಟ್ ಸಿಟಿ ಯೋಜನೆ ಕೇಂದ್ರ ಮತ್ತು ರಾಜ್ಯ ಸರಕಾರದ ಜಂಟಿ ಪಾಲುದಾರಿಕೆಯ ಯೋಜನೆಯಾಗಿದ್ದು ಮಂಗಳೂರಿನಲ್ಲಿ ಅನುಷ್ಠಾನ ಹಂತದಲ್ಲಿದೆ.