ಮೊಹಿಯದ್ದ್ದೀನ್ ಜುಮಾ ಮಸೀದಿ ಅತ್ತಿಕರಮಜಲು ಪಾಜಪಳ್ಳ, ಬಾಳಿಲ ಇದರ ಅಧೀನ ಸಂಸ್ಥೆಯಾದ ಮಿನ್ನತುಲ್ ಹುದಾ ಯಂಗ್ ಗೈಸ್ ಅತ್ತಿಕರಮಜಲು, ಬಾಳಿಲ ಈ ಸಂಘಟನೆಯ ಯುವಕರ ಕಾರ್ಯವನ್ನು ಮೆಚ್ಚಲೇಬೇಕು.
ಅನೇಕ ಧಾರ್ಮಿಕ, ಸಾಮಾಜಿಕ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಮಿನ್ನತುಲ್ ಹುದಾ ಸಂಘಟನೆ ಕೊರೊನ ಲಾಕ್ ಡೌನ್ ಸಂಧರ್ಭದಲ್ಲಿ ಅನೇಕ ಶ್ಲಾಘನೀಯ ಸೇವೆಗೈದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಇದೇ ಸಂಘಟನೆಯ ವತಿಯಿಂದ ಮತ್ತು ದಾನಿಗಳ ಸಹಕಾರದಿಂದ ಪರಿಶಿಷ್ಟ ಜಾತಿ ಗೆ ಸೇರಿದ ಬಡ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಸುಳ್ಯ ತಾಲೂಕಿನ ಬಾಳಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಜಪಳ್ಳದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಸುಂದರ ಯಾನೆ ಕರಿಯ ಎಂಬ ಯುವಕ ತನ್ನ ಕುಟುಂಬ ಸಮೇತ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದರು.
ಇವರ ವಾಸಸ್ಥಳದ ಸರಿಯಾದ ದಾಖಲೆ ಪತ್ರಗಳಾಗಲಿ ಅಥವಾ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಯಾವುದೂ ಕೂಡಾ ಇವರಲ್ಲಿ ಇಲ್ಲ. ವಾಸಿಸಲು ಯೋಗ್ಯವಲ್ಲದ, ಗಾಳಿ, ಮಳೆ ಬಂದರೆ ನೆಲಸಮಗೊಳ್ಳಬಹುದಾಗಿದ್ದ ಒಂದು ಪುಟ್ಟ ಗುಡಿಸಲಾಗಿತ್ತು ಇವರ ವಾಸಸ್ಥಾನ.ಮನೆಯ ಯಜಮಾನ ಸುಂದರ ಎಂಬವರು ಇತ್ತೀಚೆಗೆ ತೀರಿಕೊಂಡಿದ್ದು ಮನೆಯಲ್ಲಿ ಸುಂದರನ ಹೆಂಡತಿ ಮತ್ತು ಅತ್ತೆ ಮಾತ್ರ ಆ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಒಂದೊತ್ತಿನ ಊಟಕ್ಕೆ ಕಷ್ಟ ಪಡುವ ಈ ಕುಟುಂಬ ಬೀಡಿ ಕಟ್ಟಿ ಬಹಳ ಕಷ್ಟದಿಂದ ದಿನದೂಡುತ್ತಿದ್ದರು. ಮತ್ತು ಮಳೆಗಾಲದಲ್ಲಿ ಖಂಡಿತವಾಗಿಯೂ ಆ ಮನೆಯಲ್ಲಿ ನೆಲೆಸುವುದು ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡು ಮಿನ್ನತುಲ್ ಹುದಾ ಪದಾಧಿಕಾರಿಗಳು ಆ ಮನೆಗೆ ಭೇಟಿಕೊಟ್ಟು ವಾಸ್ತವಾಂಶವನ್ನು ಅರಿತು ಸಧ್ಯದಲ್ಲೇ ಮಳೆಗಾಲ ಆರಂಭಗೊಳ್ಳುವುದರಿಂದ ಹೊಸ ಮನೆ ನಿರ್ಮಿಸಿ ಕೊಡುವುದು ಅಸಾಧ್ಯವಾಗಿರುವುದರಿಂದ ಇದ್ದ ಮನೆಯ ಮೇಲ್ಛಾವಣಿ ತೆಗೆದು ಗೋಡೆಯನ್ನು ಸ್ವಲ್ಪ ಎತ್ತರಿಸಿ, ಮನೆಗೆ ಹೊಸ ಕಿಟಕಿ ಬಾಗಿಲು ಅಳವಡಿಸಿ ಮೇಲ್ಛಾವಣಿಗೆ ಸಿಮೆಂಟ್ ಶೀಟು ಅಳವಡಿಸುವ ಬಗ್ಗೆ ಆಲೋಚಿಸಿ ಅದಕ್ಕೆ ಬೇಕಾಗಿರುವ ಮೊತ್ತವನ್ನು ಹೊಂದಿಸಿಕೊಂಡು ಕೂಡಲೇ ಕಾರ್ಯಪ್ರವರ್ತರಾದರು.ಕೆಲವೇ ದಿನಗಳಲ್ಲಿ ಮನೆಯ ಕಟ್ಟಡದ ಎಲ್ಲಾ ಕೆಲಸಗಳು ಪೂರ್ತಿಗೊಂಡು ಆ ಬಡಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಇದರ ಜೊತೆಗೆ ಸೌಹಾರ್ದತೆಯ ಜೀವಂತಿಕೆಗೆ ಸಾಕ್ಷಿಯಾಗಿ ಸಾರ್ವಜನಿಕರಿಂದ ಪ್ರಶಂಸೆಗೆ ಕೂಡಾ ಪಾತ್ರರಾಗಿದ್ದಾರೆ.
ಮಿನ್ನತುಲ್ ಹುದಾ ಯಂಗ್ ಗೈಸ್ ಇದರ ಅಧ್ಯಕ್ಷರಾದ ಶರೀಫ್ ಫ್ರಂಟ್ ಲೈನ್, ಬಾಳಿಲ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶರೀಫ್ ಭಾರತ್ ಬಾಳಿಲ ,ನ್ಯೂ ಸ್ಟಾರ್ ಅಯ್ಯನಕಟ್ಟೆ ಇದರ ಅಧ್ಯಕ್ಷರಾದ ಅಜೀಜ್ ಅಯ್ಯನಕಟ್ಟೆ,ಮಿನ್ನತುಲ್ ಹುದಾ ಸಮೀತಿ ಸದಸ್ಯರಾದ ಅಬ್ದುಲ್ಲ ಪಿ.ಹೆಚ್, ಫಾರೂಕ್ ಬಾಳಿಲ, ಹೈದರ್ ಬಾಳಿಲ, ಮುಂತಾದವರು ಉಪಸ್ಥಿತರಿದ್ದರು.