ಶಾಲೆಗಳನ್ನು ಪ್ರಾರಂಭಿಸಬೇಕೆ ? ಬೇಡವೇ ? ಅಥವಾ ಯಾವಾಗ ಪ್ರಾರಂಭಿಸಬೇಕು ? ಹೇಗೆ ಪ್ರಾರಂಭಿಸಬೇಕು ? ಅದಕ್ಕೆ ರೂಪಿಸಬೇಕಾದ ನಿಯಮಗಳೇನು ? ಆನ್ ಲೈನ್ ಶಿಕ್ಷಣ ಎಷ್ಟು ಸೂಕ್ತ ? ಯಾವ ವಯಸ್ಸಿನವರೆಗೆ ಆನ್ ಲೈನ್ ಶಿಕ್ಷಣ ಆರಂಭಿಸಬೇಕು ?
ಈ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ.
ಈ ಪ್ರಶ್ನೆಗಳಿಗೆ ಉತ್ತರಗಳು ಸಹ ಅಷ್ಟು ಸುಲಭವಲ್ಲ. ಕೊರೋನಾ ಅಥವಾ ಕೋವಿಡ್ 19 ಮಹಾಮಾರಿ ದಿನೇ ದಿನೇ ಹೆಚ್ಚಾಗುತ್ತಿರುವಾಗ ಎಲ್ಲರಿಗೂ ಗೊಂದಲ ಸಹಜ.
ಇಡೀ ವ್ಯವಸ್ಥೆಯನ್ನು ಗಮನಿಸಿದಾಗ ಶಿಕ್ಷಣದ ವಿಷಯದಲ್ಲಿ ತುಂಬಾ ಆಯ್ಕೆಗಳೇನು ಇಲ್ಲ.
1) ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿಯುವವರೆಗೂ ನೇರ ಕ್ಲಾಸ್ ರೂಂ ಶಿಕ್ಷಣ ನಿಲ್ಲಿಸಬೇಕು ಎಂಬ ಒಂದು ಸಲಹೆಯಿದೆ.
ಇದು ತುಂಬಾ ಕಷ್ಟ ಮತ್ತು ವಾಸ್ತವವಾಗಿ ಮಕ್ಕಳ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರಬಹುದು. ಏಕೆಂದರೆ ಕೊರೋನಾ ಮುಕ್ತ ರಾಜ್ಯವಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಬಹಳ ದಿನಗಳು ಹಿಡಿಯಬಹುದು. ಅಲ್ಲಿಯವರೆಗೂ ಶಾಲೆಗಳನ್ನು ಬಂದ್ ಮಾಡುವುದು ಸರಿಯಾದ ನಿರ್ಧಾರವಲ್ಲ. ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ದಿವಾಳಿಯಾಗಬಹುದು. ಮುಂದೆ ಹೊಸ ರೀತಿಯ ಶಾಲೆಗಳು ಪ್ರಾರಂಭವಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಶಾಲೆಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆರಂಭಿಸದಿದ್ದರೆ ಸಿಬ್ಬಂದಿ,ಕಟ್ಟಡ ಸೇರಿ ಅದನ್ನು ನಿರ್ವಹಿಸುವುದು ಹೇಗೆ. ಖಾಸಗಿಯವರು ಕೊರೋನಾ ಬರುವ ಮೊದಲು ಶ್ರೀಮಂತ ರೀತಿಯ ದುಬಾರಿ ವ್ಯವಸ್ಥೆಗೆ ಹೊಂದಿಕೊಂಡಿದ್ದರು. ದಿಡೀರನೇ ಬದಲಾವಣೆ ಕಷ್ಟ.
2) ಆನ್ ಲೈನ್ ಶಿಕ್ಷಣವನ್ನು ಪರಿಚಯಿಸುವುದು.
ಮೇಲ್ನೋಟಕ್ಕೆ ಇದು ಉತ್ತಮ ಎನಿಸಬಹುದು. ಆದರೆ ಪ್ರಾರಂಭದ ಅನೇಕ ತೊಂದರೆಗಳು ಎದುರಾಗುತ್ತದೆ. ಆರ್ಥಿಕವಾಗಿ ಬಹಳಷ್ಟು ಪೋಷಕರಿಗೆ ಹೊಡೆತ ಬೀಳುತ್ತದೆ. ತಾಂತ್ರಿಕವಾಗಿ ಅಷ್ಟೊಂದು ಅನುಕೂಲಗಳು ಇಲ್ಲ. ಬಹಳಷ್ಟು ಜನರ ಮನೆಯ ವಾತಾವರಣ ಇದಕ್ಕೆ ಪೂರಕವಾಗಿಲ್ಲ. ಶಿಕ್ಷಣದ ಗುಣಮಟ್ಟ ಕೆಲವು ವರ್ಷಗಳ ಮಟ್ಟಿಗೆ ಕಡಿಮೆ ಆಗಬಹುದು. ಹತ್ತು ವರ್ಷದ ಒಳಗಿನ ಮಕ್ಕಳಿಗೆ ಇದು ಅಪಾಯಕಾರಿ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಹೀಗೆ ಕೆಲವು ಪ್ರಾಯೋಗಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಕೆಲವು ಶಾಲೆಗಳು ಇದನ್ನು ಆರಂಭಿಸುವೆ. ಇಲ್ಲಿ ಕೆಲವು ಬಡ ಮಕ್ಕಳಿಗೆ, ಪೋಷಕರ ಪ್ರೀತಿ ಮತ್ತು ಕಾಳಜಿ ವಂಚಿತರಾದವರಿಗೆ ಅನ್ಯಾಯವಾಗುತ್ತದೆ.
3) ಬಹಳಷ್ಟು ಶಿಸ್ತಿನ ನೀತಿ ನಿಯಮಗಳನ್ನು ರೂಪಿಸಿ ಶಾಲೆ ಆರಂಭಿಸುವುದು.
ಇಲ್ಲಿ ರಿಸ್ಕ್ ಇದ್ದೇ ಇರುತ್ತದೆ. ಫಲಿತಾಂಶ ಮತ್ತು ಪರಿಣಾಮ ಹೀಗೆ ಆಗಬಹುದು ಎಂಬ ಖಚಿತತೆ ಇಲ್ಲ. ಉತ್ತಮ ಅಥವಾ ಕೆಟ್ಟದ್ದು ಅಥವಾ ಅತ್ಯಂತ ತಪ್ಪು ನಿರ್ಧಾರ ಆದರೂ ಆಗಬಹುದು. ಒಂದು ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳಬೇಕು. ಅದರ ಜವಾಬ್ದಾರಿ ಹೊರುವವರು ಯಾರು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹತ್ತನೆಯ ತರಗತಿಯ ಮಕ್ಕಳವರೆಗೆ ಸಾಮಾಜಿಕ ಅಂತರ ಅದು ಇದು ಮುಂತಾದ ಎಲ್ಲಾ ಶಿಸ್ತುಗಳ ಪಾಲನೆ ಕಷ್ಟ. ಒಂದು ಮಗುವಿಗೆ ವೈರಸ್ ತಗುಲಿದರೆ ಇಡೀ ಶಾಲೆಯನ್ನು ಕ್ವಾರೆಂಟೈನ್ ಮಾಡುವುದು ಕಷ್ಟ.
4) ಶೈಕ್ಷಣಿಕ ವರ್ಷವನ್ನು ಕಡಿತಗೊಳಿಸುವುದು, ಪಠ್ಯವನ್ನು ಮಿತಿಗೊಳಿಸುವುದು ಮುಂತಾದ ಪರ್ಯಾಯ ಮಾರ್ಗಗಳು ಇವೆ. ಆದರೆ ಎಲ್ಲವೂ ಒಂದು ಅಂದಾಜಿನ ಲೆಕ್ಕಾಚಾರ ಮಾತ್ರ. ಕೊರೋನಾ ಹಾವಳಿ ಯಾವ ತಿರುವನ್ನು ಬೇಕಾದರೂ ಪಡೆಯಬಹುದು. ಯಾರಿಗೂ ಸ್ಪಷ್ಟತೆ ಇಲ್ಲ. ಅದರೊಂದಿಗೆ ಬಹಳ ದಿನಗಳು ಬದುಕಬೇಕಾಗಿದೆ ಎಂಬ ವರದಿಗಳು ಇವೆ.
ಇಂತಹ ಸನ್ನಿವೇಶದಲ್ಲಿ ಈ ವಿಷಯವನ್ನು ಸಾರ್ವಜನಿಕ ಚರ್ಚೆಗೆ ಬಿಡುವುದು ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ಎಲ್ಲರೂ ತಮ್ಮ ಅನುಕೂಲ ಅನಾನುಕೂಲ ನೋಡಿಕೊಂಡು ತಮ್ಮ ಮಿತಿಯಲ್ಲಿ ಮಾತನಾಡುತ್ತಾರೆ. ಇರುವ ಕೆಲವು ಆಯ್ಕೆಗಳಲ್ಲಿ ಒಂದನ್ನು ಸೂಚಿಸುತ್ತಾರೆ. ಪರಿಣಾಮ ಫಲಿತಾಂಶ ಏನು ಬೇಕಾದರೂ ಆಗಬಹುದು.
ಅದಕ್ಕೆ ಬದಲಾಗಿ ಡಾಕ್ಟರುಗಳು, ಶಿಕ್ಷಣ ತಜ್ಞರು, ಮಾನಸಿಕ ಆರೋಗ್ಯ ತಜ್ಞರು, ಆಡಳಿತ ಮತ್ತು ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಒಂದು ಸಮಿತಿ ಮಾಡಿ ಅದರ ಸಲಹೆಯಂತೆ ಮುನ್ನಡೆಯುವುದು ಇರುವುದರಲ್ಲಿ ಉತ್ತಮ. ಏಕೆಂದರೆ ವಿಶ್ವ ಆರೋಗ್ಯ ಸಂಸ್ಥೆಯೇ ಕೊರೋನಾ ವೈರಸ್ ಬಗ್ಗೆ ಇನ್ನೂ ಗೊಂದಲದಲ್ಲಿದೆ. ಆದ್ದರಿಂದ ಏನೇ ಮಾಡಿದರು ಅದೊಂದು ರಿಸ್ಕ್ ಆದರೆ ಅದನ್ನು ಈಗ ತೆಗೆದುಕೊಳ್ಳಲೇ ಬೇಕಿದೆ.
ಒಂದು ವೇಳೆ ಶಾಲೆ ಪ್ರಾರಂಭವಾಗಿ ಕೆಲವು ಮಕ್ಕಳಿಗೆ ಸೋಂಕು ಹರಡಬಹುದು. ಆಗಲೂ ಗಾಬರಿಯಾಗಬಾರದು ಅಥವಾ ಇಡೀ ವ್ಯವಸ್ಥೆ ಒಂದು ನಿರ್ಧಾರ ಮಾಡಿ ಕನಿಷ್ಠ ಐದನೇ ತರಗತಿಯ ವರೆಗೆ ದೇಶಾದ್ಯಂತ ಈ ಶೈಕ್ಷಣಿಕ ವರ್ಷ ರದ್ದುಪಡಿಸಬೇಕು. ಅದಕ್ಕೆ ಪರ್ಯಾಯವಾಗಿ ( ಸ್ವಲ್ಪ ಮಟ್ಟಿಗೆ ಕೆಲವು ಪೋಷಕರಿಗೆ ತೊಂದರೆ ಯಾದರೂ ) ಪುಸ್ತಕಗಳನ್ನು ಮನೆಗೆ ಒದಗಿಸಿ ಪೋಷಕರು ಅಥವಾ ಹಿತೈಷಿಗಳು ಅಥವಾ ಸ್ಥಳೀಯ ಸ್ವಯಂ ಸೇವಕ ವಿದ್ಯಾವಂತರು ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಪಾಠ ಮಾಡಿ ಮುಂದಿನ ವರ್ಷ ಪರೀಕ್ಷೆ ಮಾಡಬಹುದು. ಇದೂ ಸಹ ಸಂಪೂರ್ಣ ಅಗತ್ಯತೆ ಪೂರೈಸುವುದಿಲ್ಲ. ಆದರೆ ಏನಾದರೂ ಮಾಡಲೇ ಬೇಕಲ್ಲವೇ ?
5 ನೇ ತರಗತಿಯ ಮೇಲಿನ ಅನುಕೂಲ ಇರುವವರಿಗೆ ಆನ್ ಲೈನ್ ಮತ್ತು ಸ್ಥಳೀಯ ಹಾಗು ಆನ್ ಲೈನ್ ವ್ಯವಸ್ಥೆ ಇಲ್ಲದವರಿಗೆ ಅವರವರ ಇಚ್ಛೆಯಂತೆ ಕ್ಲಾಸ್ ರೂಂ ಶಿಕ್ಷಣ ಪ್ರಾರಂಭಿಸಬೇಕು. ವೈರಸ್ ತಗುಲಿದರೆ ಅದನ್ನು ಎದುರಿಸಬೇಕು ಅಷ್ಟೇ.
ಜೀವ ಮತ್ತು ಜೀವನದ ಆಯ್ಕೆಯಂತೆ ಶಾಲೆ ಮತ್ತು ಮಕ್ಕಳ ಭವಿಷ್ಯ ಎರಡರ ಮಧ್ಯೆ ತೂಗುಯ್ಯಾಲೆ ನಡೆಯುತ್ತಲೇ ಇದೆ. ಅಸಹಜ ಪರಿಸ್ಥಿತಿಯಲ್ಲಿ ಸಹಜ ತೀರ್ಮಾನದ ನಿರೀಕ್ಷೆ ಮಾಡಲಾಗದು. ನಮ್ಮೆಲ್ಲರ ಪ್ರಾತಿನಿಧಿಕ ಸರ್ಕಾರ ತಜ್ಞರ ಸಲಹೆಯಂತೆ ಒಂದು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಮತ್ತು ಅನಿವಾರ್ಯವಾಗಿ ನಾವು ಅದಕ್ಕೆ ಒಗ್ಗಿಕೊಳ್ಳಬೇಕು. ಅದರಿಂದ ಒಳ್ಳೆಯದಾದರೆ ಸಮಸ್ಯೆ ಇಲ್ಲ. ದುಷ್ಪರಿಣಾಮಗಳಾದರೆ ಗೊಣಗದೆ ಎದುರಿಸಬೇಕಷ್ಟೆ. ಕೊರೋನಾ ಕಲಿಸಿದ ಪಾಠವಿದು. ಕೊರಗುವಿಕೆಗೆ ಹೆಚ್ಚಿನ ಅವಕಾಶ ಕೊಡಬಾರದು. ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಕಡೆಗಣಿಸಬಾರದು.
ಕೊರೋನಾ ಸೋಂಕಿನ ಭಯ ನಮ್ಮ ಬದುಕು ಹಾದಿ ತಪ್ಪಲು ಬಿಡಬಾರದು.ಲೆಕ್ಕಾಚಾರದ ರಿಸ್ಕ್ ತೆಗೆದುಕೊಳ್ಳಲೇ ಬೇಕು.
✍️ವಿವೇಕಾನಂದ.. ಹೆಚ್.ಕೆ.