From Dr naresh mulleria Facebook wall
ಬಿಗಡಾಯಿಸುತ್ತಿರುವ ಕೊರೊನ ಗಡಿ ಸಮಸ್ಯೆ
ಕೊರೋನಾ ಆಗಮನದಿಂದ ನಮ್ಮ ಬದುಕಿನಲ್ಲಿ ಕೆಲವು ಸಕಾರಾತ್ಮಕ ಕೆಲವು ನಕಾರಾತ್ಮಕ ಬದಲಾವಣೆಗಳಾಗಿವೆ. ಕೇರಳ- ಕಾಸರಗೋಡು- ಕರ್ನಾಟಕ ಸಂಬಂಧ ಹಳಸಿದ್ದು ದುರದೃಷ್ಟಕರ ಬೆಳವಣಿಗೆಗಳಲ್ಲಿ ಒಂದು. ಕೇರಳ ಸರಕಾರ ಕಳೆದ ಅರುವತ್ತನಾಲ್ಕು ವರ್ಷಗಳಿಂದ ಕಾಸರಗೋಡನ್ನು ನಿರ್ಲಕ್ಷಿಸಿದ್ದು ಸತ್ಯ. ಆದರೆ ಕೇರಳ ರಾಜ್ಯ ರಚನೆಯಾಗುವ ಮೊದಲೇ ಕಾಸರಗೋಡಿನ ಬಹುಪಾಲು ಜನತೆ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ವ್ಯಾವಹಾರಿಕವಾಗಿ ಕನ್ನಡಿಗರಾಗಿದ್ದು ಕರ್ನಾಟಕದ ಮಂಗಳೂರಿನೊಂದಿಗೆ ಸಂಬಂಧಗಳನ್ನು ಸ್ಥಾಪಿಸಿಕೊಂಡಿದ್ದರು. ಕೇರಳ ರಾಜ್ಯ ರಚನೆಯಾದ ಬಳಿಕವೂ ಕರ್ನಾಟಕಕ್ಕೆ ಸೇರಬೇಕೆಂದು ಹೋರಾಟ ನಡೆಸಿಕೊಂಡು ಬಂದಿದ್ದರಲ್ಲದೆ ಹಲವು ಪ್ರತಿಕೂಲ ಪರಿಸ್ಥಿತಿಗಳ ನಡುವೆ ಕನ್ನಡ ಕಲಿಯುತ್ತಿದ್ದರು. ತರಕಾರಿ ದಿನಸಿಯಿಂದ ತೊಡಗಿ ಅಡಿಕೆಯಂತಹ ಕೃಷಿ ಉತ್ಪನ್ನಗಳ ವ್ಯಾಪಾರ, ಶಿಕ್ಷಣ ಧಾರ್ಮಿಕ ವೈದ್ಯಕೀಯ ಉದ್ಯೋಗ ಸಂಬಂಧಿ ಅಗತ್ಯಗಳಿಗೂ ಮಂಗಳೂರನ್ನು ಆಶ್ರಯಿಸಿದ್ದರು. ಕಾಸರಗೋಡಿನ ಜನತೆ ಮಂಗಳೂರು ಪುತ್ತೂರು ಸುಳ್ಯ ಪ್ರದೇಶಗಳ ಜನರೊಂದಿಗೆ ವೈವಾಹಿಕ ಸಂಬಂಧಗಳನ್ನು ಬೆಳೆಸುತ್ತಿದ್ದರು. ದ.ಕ ಜನರು ಕೂಡ ಹಲವು ಅಗತ್ಯಗಳಿಗಾಗಿ ಕಾಸರಗೋಡನ್ನು ಅವಲಂಬಿಸಿದ್ದರು. ಕಾಸರಗೋಡು ಕೂಡ ದ.ಕ ದಂತೆ ತುಳುನಾಡಿನ ಭಾಗ, ಬಹುಭಾಷೆ ಸಂಸ್ಕೃತಿಗಳ ನೆಲೆವೀಡು. ಕರ್ನಾಟಕದ ರಾಜಕಾರಣಿಗಳು ಕಾಸರಗೋಡಿಗೆ ಬಂದು ಚುನಾವಣಾಪ್ರಚಾರ ನಡೆಸುತ್ತಿದ್ದರು. ರಾಜಕೀಯವಾಗಿ ಕಾಸರಗೋಡು ಕೇರಳದಲ್ಲಿದ್ದರೂ ಸಾಂಸ್ಕೃತಿಕವಾಗಿ ಕನ್ನಡದ ನೆಲ ಎನ್ನುತ್ತಿದ್ದರು. ಕರ್ನಾಟಕ ಸರಕಾರ ಕಾಸರಗೋಡಿನ ಕನ್ನಡಿಗರಿಗೆ ಕೆಲವು ಸವಲತ್ತುಗಳನ್ನು ನೀಡಿ ಅಲ್ಪಸ್ವಲ್ಪ ನೆರವಾಗುತ್ತಿದ್ದುದು ಕೂಡ ನಿಜ.
ಆದರೆ ಕೊರೋನಾ ಆಗಮನದಿಂದ ಉಂಟಾದ ಗಡಿಮುಚ್ಚುಗಡೆ ಈ ಸಂಬಂಧಗಳು ಹಳಸುವಂತೆ ಮಾಡಿತು. ಕಾಸರಗೋಡಿನಲ್ಲಿ ಆಗ ಕೊರೋನಾ ಕೇಸುಗಳಿದ್ದುದು ನಿಜ. ಆದರೆ ಕಾಸರಗೋಡಿನ ಜನರನ್ನೆಲ್ಲ ಕೋವಿಡ್ ಪೀಡಿತರೆಂಬಂತೆ ಚಿತ್ರಿಸಲಾಯಿತು. ಇಂತಹ ಧೋರಣೆ ತೆಂಕಣ ಕೇರಳದಲ್ಲಿ ಕೂಡ ಇದ್ದರೂ ಕರ್ನಾಟಕ ಸರಕಾರ ಮತ್ತು ಮಂಗಳೂರು ಜಿಲ್ಲಾಡಳಿತ ತಳೆದ ನಿಲುವು ಕಾಸರಗೋಡಿನ ಜನರಿಗೆ ಹಲವು ಅನನುಕೂಲತೆಗಳನ್ನುಂಟುಮಾಡಿತು. ಕೋವಿಡರಲ್ಲದ ಆದರೆ ಇತರ ಆರೋಗ್ಯ ಸಮಸ್ಯೆಗಳಿಂದ ಕೂಡಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳನ್ನು ಕೂಡ ತಲಪಾಡಿ ಗಡಿದಾಟಿ ಮಂಗಳೂರಿನ ಆಸ್ಪತ್ರೆಗಳಿಗೆ ಸೇರಿಸದಿದ್ದುದು ಅಮಾನವೀಯವೆನ್ನದೆ ವಿಧಿಯಿಲ್ಲ. ಇದರ ಹಿಂದೆ ಕೇರಳ ಕರ್ನಾಟಕ ಸರಕಾರಗಳ, ಕೆಲವು ರಾಜಕೀಯ ಪಕ್ಷಗಳ, ಮುಖಂಡರ ಮತ್ತು ಕಾರ್ಯಕರ್ತರ ನಡುವಿನ ಪ್ರತೀಕಾರ ಸಾಧನೆ, ಪ್ರತಿಷ್ಠೆ, ರಾಜಕೀಯ ಕಾರಣ, ಕೋಮುಸಂಬಂಧಿ ಪೂರ್ವಾಗ್ರಹಗಳು ಇದೆಯೆಂದು ಅನುಮಾನಿಸುವಂತಾಯಿತು. ಚಿಕಿತ್ಸೆ ದೊರೆಯದೆ ಕಾಸರಗೋಡಿನ ಕೆಲವು ಮಂದಿ ಪ್ರಾಣ ಕಳೆದುಕೊಂಡರು. ಮುಂದೆ ಕಾಸರಗೋಡಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕಡಿಮೆಯಾದವು. ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಸಹಿತ ಎರಡು ಆಸ್ಪತ್ರೆಗಳ ನಿರ್ಮಾಣ ವ್ಯವಸ್ಥೆಯಲ್ಲಿ ಸ್ವಲ್ಪ ಪ್ರಗತಿ ಕಂಡುಬಂತು. ಆದರೆ ತಲಪಾಡಿಯ ಗಡಿಮುಚ್ಚಿದ ಕಾರಣದಿಂದ ದಕ್ಷಿಣ ಕನ್ನಡದಲ್ಲಿ ಆಗಲೀ ಕರ್ನಾಟಕದಲ್ಲಾಗಲೀ ಕೊರೋನಾ ಕಡಿಮೆಯಾಗಲಿಲ್ಲ. ಮಹಾರಾಷ್ಟ್ರ ಮತ್ತಿತರ ರಾಜ್ಯಗಳ ಗಡಿಯಲ್ಲೂ ಇಂತಹ ಕಟ್ಟುನಿಟ್ಟಿನ ಗಡಿಮಾರ್ಗ ತಡೆಯ ಕ್ರಮಗಳನ್ನು ಕೈಗೊಳ್ಳಲಿಲ್ಲ. ಕೊರೋನಾ ಸೋಂಕು ತಡೆಗಟ್ಟುವ ವಿಷಯದಲ್ಲಿ ಕರ್ನಾಟಕ ಹೇಳಿಕೊಳ್ಳುವ ಪ್ರಗತಿ ಸಾಧಿಸಿದಂತಿಲ್ಲ.
ಹಾಗಾದರೆ ಕಾಸರಗೋಡು- ದ.ಕ ಜನತೆಯ ಪರಂಪರಾಗತ ಸಂಬಂಧಗಳನ್ನು ಮರೆತು ತುರ್ತು ಅಗತ್ಯಗಳಿಗೂ ಜನರನ್ನು ಹೋಗಗೊಡದೆ ಗಡಿತಡೆ ನಿರ್ಮಿಸಿದ ರಾಜಕೀಯ ಹಿತಾಸಕ್ತಿಗಳಿಗೆ ಏನು ಸಾಧಿಸಿದಂತಾಯಿತು?
೧. ಮಾನವೀಯತೆಯನ್ನು ಮರೆತು ವರ್ತಿಸಿದವರೆಂಬ ಕೆಟ್ಟ ಹೆಸರು.
೨. ಕೇರಳ- ಕರ್ನಾಟಕ, ಕಾಸರಗೋಡು- ಕರ್ನಾಟಕ ಜನರ ಸಂಬಂಧವನ್ನು ಹಳಸುವಂತೆ ಮಾಡಿದ್ದು.
೩. ಕಾಸರಗೋಡಿನ ಕನ್ನಡಿಗರನ್ನು ವ್ಯಾವಹಾರಿಕ ಹಾಗೂ ಮಾನಸಿಕ ಸಂಕಷ್ಟಗಳಿಗೆ ಈಡುಮಾಡಿದ್ದು.
೪. ಕಾಸರಗೋಡಿನವರು ಕನ್ನಡ ಎಂದು ಹೋರಾಡುವುದರಲ್ಲಿ ಅರ್ಥವಿಲ್ಲ, ಕಾಸರಗೋಡಿನವರಿಗೆ ಕೇರಳವೇ ಗತಿ ಎಂಬ ನಿಲುವಿನವರಿಗೆ ಪ್ರೋತ್ಸಾಹ ನೀಡಿದ್ದು. ಕಾಸರಗೋಡಿನ ಕನ್ನಡ ಧ್ವನಿಯನ್ನು ನಿಷ್ಠುರವಾಗಿ ಅಡಗಿಸಿ ” ನೀವು ನಮ್ಮವರಲ್ಲ, ಹೊರಗಿನವರು'” ಎಂಬಂತೆ ಬಿಂಬಿಸುವ ವಾತಾವರಣವನ್ನು ನಿರ್ಮಿಸಿದ್ದು.
೫. ಕಾಸರಗೋಡು ಹಾಗೂ ಕೇರಳದಲ್ಲಿ ಕರ್ನಾಟಕ ವಿರೋಧಿ ಭಾವನೆಯನ್ನು ಉತ್ತೇಜಿಸಿದ್ದು.
ಕರ್ನಾಟಕದ ರಾಜಕಾರಣಿಗಳು ಇನ್ನು ಮುಂದೆ ಯಾವ ಮುಖಹೊತ್ತುಕೊಂಡು ಕಾಸರಗೋಡಿಗೆ ಬಂದು ಚುನಾವಣಾಪ್ರಚಾರ ನಡೆಸುತ್ತಾರೆ ಎಂದು ಇಲ್ಲಿನ ಜನ ಕೇಳುವಂತಾಗಿದೆ. ಕೋವಿಡರಲ್ಲದ ಇತರ ಗಂಭೀರ ರೋಗಿಗಳಿಗೂ ತಲಪಾಡಿ ಗಡಿಮುಚ್ಚಿದ್ದು ರಾಜಕೀಯವಾಗಿ ರಾಜತಾಂತ್ರಿಕವಾಗಿ ಅಪ್ರಬುದ್ಧ ತೀರ್ಮಾನವೆನ್ನದೆ ನಿರ್ವಾಹವಿಲ್ಲ.
ಕಾಸರಗೋಡಿಗೆ ಮಂಗಳೂರು ಸಮೀಪದ ನಗರ. ಹಲವು ಮಂದಿ ಪ್ರತಿದಿನ ಉದ್ಯೋಗ ವ್ಯಾಪಾರ ಆರೋಗ್ಯ ಶಿಕ್ಷಣ ಮೊದಲಾದ ಅಗತ್ಯಗಳಿಗೆ ಪರಸ್ಪರ ಹೋಗಿಬಂದು ಮಾಡುತ್ತಿದ್ದಾರೆ. ಅವರೆಲ್ಲರಿಗೂ ತಲಪಾಡಿಯ ಮಾನವನಿರ್ಮಿತ ಗಡಿರೇಖೆ ಬದುಕಿಗೆ ಎಳೆದ ಬರೆಯಂತಾಗಿದೆ.
ಈಗ ಕೂಡ ದ.ಕ ಜಿಲ್ಲಾಡಳಿತ ನಿಲುವನ್ನು ಸಡಲಿಸದೆ ಜನರ ತಾತ್ಸಾರಕ್ಕೊಳಗಾಗುತ್ತಿದೆ.
ದ.ಕ ಜಿಲ್ಲಾಡಳಿತ ತನ್ನ ನಿಲುವನ್ನು ಬದಲಾಯಿಸಿಕೊಂಡು ವಿವೇಚನೆಯಿಂದ ವರ್ತಿಸುವುದು ಅಗತ್ಯ.