Ad Widget

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರೆಭಾಷೆ “ರಾಷ್ಟ್ರೀಯ ವಿಚಾರ ಸಂಕಿರಣ” – “ಭಾಷೆ ಉಳಿಯಬೇಕಾದರೆ ಸಾಹಿತ್ಯ ಬೆಳೆಯಬೇಕು” : ಡಾ. ಕೆ.ವಿ ಚಿದಾನಂದ ; “ಅರೆಭಾಷೆ ರಾಜ್ಯದಿಂದಾಚೆ ಬೆಳೆದು‌ ನಿಲ್ಲಬೇಕು” : ಸದಾನಂ‌ದ ಮಾವಜಿ

ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ “ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ” ಫೆ.24ರಂದು ಕಾಲೇಜಿನ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ಮಾತನಾಡುತ್ತಾ, “ಭಾಷೆಗಳು ಉಳಿಯಬೇಕಾದರೆ ಅದನ್ನು ಹೆಚ್ಚೆಚ್ಚು ಬಳಸಬೇಕು, ಮುಂದಿನ ತಲೆಮಾರಿಗೆ ಪಸರಿಸುವ ಕೆಲಸ ಆಗಬೇಕು. ಆಧುನೀಕರಣದಿಂದ ಭಾಷೆ ನಾಶ ಆಗದಂತೆ ನೋಡಿಕೊಳ್ಳಬೇಕು” ಎಂದು ಹೇಳಿದರು. “ಅರೆಭಾಷೆ ಅಕಾಡೆಮಿ ಸ್ಥಾಪನೆಯಾದ ಬಳಿಕ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ” ಎಂದು ಅಭಿಪ್ರಾಯಪಟ್ಟರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, “ಅರೆಭಾಷೆ ರಾಜ್ಯದಿಂದಾಚೆ ಬೆಳೆದು‌ ನಿಲ್ಲಬೇಕು, ಅದು ದೇಶ ಭಾಷೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಅಕಾಡೆಮಿ ಈಗ ಬಹಳಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ” ಎಂದು ಹೇಳಿದರು. “ಭಾಷೆಯನ್ನು ಉಳಿಸುವ ಮೂಲಕ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಮಾಡೋಣ, ಅದನ್ನು ಮುಂದಿನ ಪೀಳಿಗೆಗೆ ಪಸರಿಸುವ ಕೆಲಸ ನಮ್ಮೆಲ್ಲರಿಂದಾಗಬೇಕು” ಎಂದು ಅವರು ಅಭಿಪ್ರಾಯಪಟ್ಟರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌ನ ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ.ಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ಸದಸ್ಯರಾದ ಡಾ. ಎನ್.ಎ ಜ್ಞಾನೇಶ್, ಚಂದ್ರಶೇಖರ ಪೇರಾಲು, ಗೋಪಾಲ ಪೆರಾಜೆ, ಚಂದ್ರಾವತಿ ಬಡ್ಡಡ್ಕ, ಕುದ್ಪಾಜೆ ಪ್ರಕಾಶ್, ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ಪಿ.ರೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ.ರುದ್ರಕುಮಾರ್ ಎಂ.ಎಂ.ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅರೆಭಾಷೆ ಅಕಾಡೆಮಿ ಸದಸ್ಯರಾದ ತೇಜಕುಮಾರ್ ಕುಡೆಕಲ್ಲು, ಲೋಕೇಶ್ ಊರುಬೈಲು, ವಿನೋದ್ ಮೂಡಗದ್ದೆ, ಲತಾ ಪ್ರಸಾದ್ ಕುದ್ಪಾಜೆ, ಪೂರ್ವಾಧ್ಯಕ್ಷರಾದ ಪಿ.ಸಿ ಜಯರಾಮ, ಲಕ್ಷ್ಮಿ ನಾರಾಯಣ ಕಜೆಗದ್ದೆ ಭಾಗವಹಿಸಿದ್ದರು. ಈ ವಿಚಾರ ಸಂಕಿರಣಕ್ಕೆ ಕೊಡಗಿನ ಮಡಿಕೇರಿ ಮತ್ತು ವಿರಾಜ್‌ಪೇಟೆ, ಕಾಸರಗೋಡು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯದಿಂದ ಪ್ರತಿನಿಧಿಗಳು ಅಗಮಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading