Ad Widget

ಹರಿಹರ ಪಳ್ಳತ್ತಡ್ಕ : ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ “ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ” ಸಂಪನ್ನ ; ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಭಕ್ತಿ ಸಡಗರದಿಂದ ನಡೆದ ಜಾತ್ರೋತ್ಸವ

ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಫೆ.20 ಶುಕ್ರವಾರದಿಂದ ಫೆ.22 ಆದಿತ್ಯವಾರದವರೆಗೆ “ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ”ವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಜಾತ್ರೋತ್ಸವದ ಮೊದಲನೇ ದಿನವಾದ ಫೆ.20 ಶುಕ್ರವಾರದಂದು ಬೆಳಿಗ್ಗೆ ಹಸಿರು ಕಾಣಿಕೆ ಸಮರ್ಪಣೆ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ತಂತ್ರಿಗಳ ಆಗಮನ, ರಾತ್ರಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಜೊತೆಗೆ ಸಂಜೆ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಪಿಲೇಶ್ವರ ಮ್ಯೂಸಿಕ್ ತಂಡ ಇವರಿಂದ ಪಿಟೀಲು, ಕೊಳಲು ಹಾಗೂ ಚೆಂಡೆವಾದನ ನಡೆಯಿತು. ನಂತರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಲಕ್ಷ್ಮೀಶ ಗಬ್ಲಡ್ಕ ಅವರಿಂದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನಂತರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರುಗಳಾದ ಡಾ. ಚಂದ್ರಶೇಖರ ಕಿರಿಭಾಗ ಮತ್ತು ರಾಮಕೃಷ್ಣ ಕುದ್ಕುಳಿ, ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಹರಿಹರ ಪಳ್ಳತ್ತಡ್ಕ ಮೆಸ್ಕಾಂ ನ ವಿಜಯ ಕುಮಾರ್, ಪ್ರಶಾಂತ್ ಪೂಜಾರಿ, ನಿತ್ಯಾನಂದ.ವೈ ಹಾಗೂ ಸುಬ್ರಹ್ಮಣ್ಯ ಮೆಸ್ಕಾಂ ನ ದೇವಪ್ಪ ಇವರುಗಳನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಅಶೋಕ್ ನೆಕ್ರಾಜೆ, ಕುಲ್ಕುಂದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರವೀಂದ್ರ ಕುಮಾರ್ ರುದ್ರಪಾದ, ಹರಿಹರ ಪಳ್ಳತ್ತಡ್ಕ ಶ್ರೀ ಹರಿಹರೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು ಹಾಗೂ ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ಉಪಸ್ಥಿತರಿದ್ದರು. ವಿನುಪ್ ಮಲ್ಲಾರ ಸ್ವಾಗತಿಸಿ ಜಗದೀಶ್ ಪಡ್ಪು ಧನ್ಯವಾದ ಸಮರ್ಪಿಸಿದರು. ನಿತ್ಯಾನಂದ ಭೀಮಗುಳಿ ಕಾರ್ಯಕ್ರಮ ನಿರೂಪಿಸಿದರು. ಜಾತ್ರೋತ್ಸವದ ಎರಡನೇ ದಿನವಾದ ಫೆ.21 ಶನಿವಾರದಂದು ಬೆಳಿಗ್ಗೆ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮದ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೀಪಾರಾಧನೆ, ಚೆಂಡೆವಾದನ, ರಾತ್ರಿ ಮಹಾಪೂಜೆ, ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಹಾಗೂ ರಾಜಾಂಗಣ ಪ್ರಸಾದ ನಡೆಯಿತು. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಬ್ರಹ್ಮಣ್ಯ ವಲಯ ಹಾಗೂ ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಐನೆಕಿದು, ಬಾಳುಗೋಡು ಗ್ರಾಮಗಳ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಬಾಲಚಂದ್ರ ಪೆರಾಜೆ ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ನಂತರ ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾ ಸಂಘದಿಂದ “ಕದಂಬ ಕೌಶಿಕೆ” ಯಕ್ಷಗಾನ ಬಯಲಾಟ ನಡೆಯಿತು. ಜಾತ್ರೋತ್ಸವದ ಮೂರನೇ ಹಾಗೂ ಕೊನೆಯ ದಿನವಾದ ಫೆ.22 ಭಾನುವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯುವುದರೊಂದಿಗೆ ಶ್ರೀ ಹರಿಹರೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರ-ಪರವೂರ ಭಕ್ತಾದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading