Ad Widget

“ಫೆ.08 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾಲೂಕು ಭಜನೋತ್ಸವ” : ಯೋಜನಾಧಿಕಾರಿ ಮಾಧವ ಗೌಡ ಹೇಳಿಕೆ ; ಕ್ಷೇತ್ರದಲ್ಲಿ ಭಜಕರಿಂದ ಭಜನಾ ಸಂಕೀರ್ತನೆ ಮತ್ತು ಕುಣಿತ ಭಜನೆ

ಸುಬ್ರಹ್ಮಣ್ಯ : “ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಫೆ.08ರಂದು ತಾಲೂಕು ಭಜನೋತ್ಸವ ನಡೆಯಲಿದೆ. ಸಂಜೆ ಸುಮಾರು 100ಕ್ಕೂ ಅಧಿಕ ತಂಡಗಳಿಂದ ಸಾವಿರಕ್ಕೂ ಮಿಕ್ಕಿ ಭಜಕರಿಂದ ಕುಣಿತ ಭಜನೆ ಪ್ರದರ್ಶಿತವಾಗಲಿದೆ. ಮಧ್ಯಾಹ್ನ 120ಕ್ಕೂ ಅಧಿಕ ಭಜನಾ ತಂಡಗಳಿಂದ ಕುಳಿತು ಭಜನೆ ಬಳಿಕ ಕುಣಿತ ಭಜನೆ ನಡೆಯಲಿದೆ” ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಾ.ಹೆಗ್ಗಡೆ ಅವರ ಮಾರ್ಗದರ್ಶನ : “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ತಾಲೂಕು, ತಾಲೂಕು ಭಜನೋತ್ಸವ ಸಮಿತಿ ಸುಬ್ರಹ್ಮಣ್ಯ ವಲಯದ ಸಹಯೋಗದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ.ವಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಭಜನೋತ್ಸವ ನಡೆಯಲಿದೆ” ಎಂದರು.

ವೈಭವದ ಮೆರವಣಿಗೆ : “ಬೆಳಿಗ್ಗೆ ಕಾಶಿಕಟ್ಟೆ ಶ್ರೀ ಮಹಾಗಣಪತಿ ಸನ್ನಿಧಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತನಕ ಚೆಂಡೆ, ವಾದ್ಯಘೋಷ ಮತ್ತು ವಿವಿಧ ಧಾರ್ಮಿಕ ವೇಷ ಭೂಷಣ ಹಾಗೂ ಭಜಕರ ಕುಣಿತ ಭಜನೆಯೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ” ಎಂದರು.

ಉದ್ಘಾಟನೆ : “ನಂತರ ರಥಬೀದಿ ಸಭಾಂಗಣದಲ್ಲಿ ತಾಲೂಕು ಭಜನೋತ್ಸವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಉದ್ಘಾಟಿಸಲಿದ್ದಾರೆ. ತಾಲೂಕು ಭಜನೋತ್ಸವ ಸಮಿತಿ ಅಧ್ಯಕ್ಷರಾದ ಡಾ. ರವಿ ಕಕ್ಕೆಪದವು ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್.ಎಸ್.ಇಂಜಾಡಿ, ಸುಬ್ರಹ್ಮಣ್ಯ ಪೋಲೀಸ್ ಠಾಣೆಯ ಠಾಣಾಧಿಕಾರಿಗಳಾದ ಆಂಜನೇಯ ರೆಡ್ಡಿ, ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ, ಭಜನಾ ಪರಿಷತ್ ರಾಜ್ಯ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷರಾದ ಸುಜಾತಾ ಕಲ್ಲಾಜೆ ಮತ್ತಿತರರು ಮುಖ್ಯ ಅತಿಥಿಗಳಾಗಿದ್ದಾರೆ” ಎಂದರು.

ಸಮಾರೋಪ : “ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಜನೋತ್ಸವ ಸಮಿತಿ ಗೌರವ ಅಧ್ಯಕ್ಷರಾದ ಗಿರಿಧರ ಸ್ಕಂದ ವಹಿಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ, ಯೋಜನೆಯ ಜಿಲ್ಲಾ ನಿರ್ದೇಶಕರಾದ ಬಾಬು ನಾಯ್ಕ, ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ, ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ದಿವಾನರಾದ ಸುದರ್ಶನ ಜೋಯಿಸರು ಮತ್ತಿತರರು ಮುಖ್ಯಅತಿಥಿಗಳಾಗಿದ್ದಾರೆ. ಸಮಾರಂಭದಲ್ಲಿ ಭಜನಾ ಸಾಧಕರನ್ನು ಸನ್ಮಾನಿಸಲಾಗುವುದು” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಭಜನೋತ್ಸವ ಸಮಿತಿ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು, ಗೌರವಾಧ್ಯಕ್ಷರಾದ ಗಿರಿಧರ ಸ್ಕಂಧ, ಉಪಾಧ್ಯಕ್ಷರಾದ ಗಿರೀಶ್ ಆಚಾರ್ಯ ಪೈಲಾಜೆ, ಚಂದ್ರಶೇಖರ ಬಸವನಮೂಲೆ, ಕಾರ್ಯದರ್ಶಿ ಬಾಲಕೃಷ್ಣ ಗೌಡ.ಕೆ, ಜತೆ ಕಾರ್ಯದರ್ಶಿ ಸತೀಶ್.ಟಿ.ಎನ್, ಪ್ರಚಾರ ಸಮಿತಿ ಸಂಚಾಲಕರಾದ ರತ್ನಾಕರ ಸುಬ್ರಹ್ಮಣ್ಯ, ಮೆರವಣಿಗೆ ಸಮಿತಿ ಸಂಚಾಲಕರಾದ ಸಂತೋಷ್ ಕುಲ್ಕುಂದ, ಸುಬ್ರಹ್ಮಣ್ಯ ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಕೊಂದಾಳಲ, ಸೇವಾಪ್ರತಿನಿಧಿಗಳಾದ ಹರಿಣಾಕ್ಷಿ ಮಾಣಿಬೈಲು, ಶೈಲಜಾ ಕುಲ್ಕುಂದ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading