Ad Widget

“ಅನ್ಯಾಯದ ವಿರುದ್ಧ ಧ್ವನಿ ಎತ್ತುವುದೇ ಕಲೆ, ಸಾಹಿತ್ಯದ ಮೂಲ ಧ್ಯೇಯ” – ಡಾ. ಲಕ್ಷ್ಮೀಶ ತೋಳ್ಪಾಡಿ ; “ಡಾ. ಕೇನಾಜೆ ಸಂವೇದನಾಶೀಲ ಬರಹಗಾರ” : ಅತಿಥಿಗಳ ಅಭಿಮತ  ; ಡಾ. ಸುಂದರ ಕೇನಾಜೆ ಅವರ “ಮಾತಿಲ್ಲದ ಮಾತು” ಕೃತಿ ಬಿಡುಗಡೆ ಹಾಗೂ ಅವರ ಪುಸ್ತಕಗಳ ಪ್ರದರ್ಶನ

ಸುಳ್ಯ : “ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಸಾಮಾಜಿಕ ನ್ಯಾಯ ದೊರಕಿಸಿಕೊಡುವುದೇ ಕಲೆ ಮತ್ತು ಸಾಹಿತ್ಯದ ಮೂಲ ಧ್ಯೇಯ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಾಧ್ಯವಾಗದಿದ್ದರೆ ಸ್ವಸ್ಥ ಸಮಾಜ ಕಟ್ಟಲು ಸಾಧ್ಯವಿಲ್ಲ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹಾಗೂ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಸುಳ್ಯ ಪ್ರೆಸ್ ಕ್ಲಬ್, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ ತಾಲೂಕು ಘಟಕದ ಆಶ್ರಯದಲ್ಲಿ
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಜ.31ರಂದು ನಡೆದ ಸಮಾರಂಭದಲ್ಲಿ
ಲೇಖಕ, ಸಂಶೋಧಕ ಡಾ.ಸುಂದರ ಕೇನಾಜೆಯವರ “ಮಾತಿಲ್ಲದ ಮಾತು” ಅಂಕಣ ಬರಹಗಳ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. “ಸಮಾಜದಲ್ಲಿ ಕಂಡ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ಅದನ್ನು ಎದುರಿಸುವ ಶಕ್ತಿಯನ್ನು ಸಾಹಿತ್ಯ ಮತ್ತು ಕಲೆಗಳು ಪ್ರದರ್ಶಿಸಬೇಕು. ವಾಸ್ತವವನ್ನು ಬಿಂಬಿಸದಿದ್ದರೆ ಅಂತಹಾ ಸಾಹಿತ್ಯ ಮತ್ತು ಕಲೆ ಅಪ್ರಸ್ತುತವಾಗುತ್ತದೆ‌. ವಾಸ್ತವವನ್ನು ಸ್ಪಷ್ಟವಾಗಿ ಚಿತ್ರಿಸುವ ಮೂಲಕ ಕೇರಳ ಮತ್ತು ಬಂಗಾಳದ ಸಿನಿಮಾಗಳು ಹೆಚ್ಚು ಅರ್ಥವತ್ತಾಗಿ ಜನಮಾನಸಕ್ಕೆ ಹತ್ತಿರವಾಗುತ್ತದೆ” ಎಂದು ಅವರು ಉದಾಹರಿಸಿದರು. “ಒಬ್ಬ ಸಾಹಿತಿ ಒಂದು ಪದ ಸೃಷ್ಠಿಸಿದರೆ ಅದು ಹೊಸ ಆಲೋಚನಾ ಕ್ರಮವನ್ನೂ, ಹೊಸ ಜನಾಂಗವನ್ನು ಸೃಷ್ಠಿಸಿದಂತೆ. ಡಾ.ಸುಂದರ ಕೇನಾಜೆಯವರು ತಮ್ಮ ಕೃತಿಯ ಹಾಗೂ ಸೃಜನಶೀಲ ಬರಹದ ಮೂಲಕ ವಸ್ತುವಿಗೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಿದ್ದಾರೆ. ತಮ್ಮ ಸಂವೇದನಾಶೀಲ ಅಧ್ಯಯನ ಮತ್ತು ಕ್ರಿಯಾಶೀಲ ಕ್ಷೇತ್ರ ಕಾರ್ಯದ ಮೂಲಕ ತಮ್ಮ  ಅನುಭವವನ್ನು ಧಾರೆಯೆರೆದು ಉತ್ತಮ ಬರಹಗಳನ್ನು ಸೃಜಿಸಿದ್ದಾರೆ” ಎಂದು ಅವರು ಹೇಳಿದರು. “ಕ್ಷೇತ್ರ ಕಾರ್ಯ, ಅಧ್ಯಯನಶೀಲತೆ ಇಲ್ಲದ ಸಾಹಿತ್ಯ ಅಡಿಪಾಯ ಇಲ್ಲದ ಕಟ್ಟಡದಂತೆ” ಎಂದು ಅವರು ಹೇಳಿದರು.

ಕೃತಿಯ ಕುರಿತು ಮಾತನಾಡಿದ
ವ್ಯಂಗ್ಯಚಿತ್ರಕಾರ, ವಿಮರ್ಶಕ ದಿನೇಶ್ ಕುಕ್ಕುಜಡ್ಕ “ಆಳವಾದ ಅಧ್ಯಯನದ ಮೂಲಕ ತಮ್ಮ ಅಂಕಣ ಬರಹಗಳನ್ನು ಬರೆದಿದ್ದಾರೆ. ಪ್ರತಿಯೊಂದು ಬರವಣಿಗೆಯ ಹಿಂದೆಯೂ ಅವರ ತುಡಿತ ಮತ್ತು ನಿಷ್ಠಾವಂತಿಕೆ ಎದ್ದು ಕಾಣುತ್ತದೆ. ಒಂದೊಂದು ಅಂಕಣಗಳೂ ಒಂದೊಂದು ಅನುಭವದ ಸಂಗ್ರಹ” ಎಂದು ಹೇಳಿದರು.

ಲೇಖಕ ಡಾ.ಸುಂದರ ಕೇನಾಜೆ ಮಾತನಾಡಿ ತಮ್ಮ ಅಂಕಣ ಬರಹದ ಕುರಿತ ಅನುಭವಗಳನ್ನು ಬಿಚ್ಚಿಟ್ಟರು.

ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪ್ಪಳ್ಳ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಅಧ್ಯಕ್ಷ ಯಶ್ವಿತ್ ಕಾಳಂಮನೆ ಮಾತನಾಡಿದರು.

ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಂತಕೃಷ್ಣ ಚಾಕೋಟೆ ವಂದಿಸಿದರು. ಕೆ.ಆರ್.ಗೋಪಾಲಕೃಷ್ಣ ಆರಂಭ ಗೀತೆ ಹಾಡಿದರು. ಉಪನ್ಯಾಸಕಿ ಪಿ.ಬಿ. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕಗಳ ಪ್ರದರ್ಶನ
ಡಾ.ಸುಂದರ ಕೇನಾಜೆ ಅವರು ಈ ಹಿಂದೆ ಪ್ರಕಟಿಸಿದ 22 ಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. “ಮಾತಿಲ್ಲದ ಮಾತು” 23ನೇ ಕೃತಿಯಾಗಿ ಬಿಡುಗಡೆಗೊಂಡಿತು.
ಮೂರು ಕಥಾ ಸಂಕಲನ, ಎಂಟು ಸಂಶೋಧನಾ ಕೃತಿ, ಒಂದು ಪ್ರಬಂಧ ಸಂಕಲನ, ಎರಡು ವ್ಯಕ್ತಿಚಿತ್ರ, ಏಳು ಸಂಪಾದಿತ ಕೃತಿಗಳನ್ನು ಡಾ.ಕೇನಾಜೆ ಪ್ರಕಟಿಸಿದ್ದಾರೆ.
ನೂರ ಎಂಬತ್ತು ಪುಟಗಳ ಮಾತಿಲ್ಲದ ಮಾತು ಕೃತಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಪ್ರಾದೇಶಿಕ ಚರಿತ್ರೆ, ಜಾನಪದ, ಕಲಾವಿಮರ್ಶೆ, ಮನೋವಿಜ್ಞಾನ, ಶಿಕ್ಷಣ, ವ್ಯಕ್ತಿ ಮತ್ತು ಕೃತಿ ಪರಿಚಯ ಎನ್ನುವ ವೈವಿದ್ಯ ವಸ್ತು ಬರಹಗಳಿವೆ. ಅಧ್ಯಯನ, ಅನುಭವ ಮತ್ತು ಕ್ಷೇತ್ರ ಕಾರ್ಯದ ಮಾಹಿತಿಯನ್ನು ಒಳಗೊಂಡ ಬರಹಗಳು ಅಡಗಿದೆ. ಮೈಸೂರಿನ ಮಡಿಲು ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಹಿರಿಯ ಪತ್ರಕರ್ತ ಮುಳ್ಳೂರು ರಾಜು ಮುನ್ನುಡಿಯ ಮಾತುಗಳನ್ನೂ ಕನ್ನಡದ ಖ್ಯಾತ ಸಾಹಿತಿ ಹಾಗೂ ಬರಹಗಾರರ ಅಭಿಪ್ರಾಯಗಳ ಬೆನ್ನುಡಿಯ ಕೆಲವು ವಾಕ್ಯಗಳನ್ನೂ ನೀಡಲಾಗಿದೆ.

ಗಮನ ಸೆಳೆದ ಉಪಹಾರ ವ್ಯವಸ್ಥೆ : ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಸ್ಥಳದಲ್ಲಿಯೇ ತಿಂಡಿ, ತಿನಿಸುಗಳನ್ನು ಕಾಯಿಸಿ ಬಿಸಿ ಬಿಸಿ ಉಪಾಹಾರ ಬಡಿಸಲಾಯಿತು. ಓನಿಯನ್ ಪಕೋಡ, ಗೆಣಸು ಪೋಡಿ, ಬಾಳೆ ಹಣ್ಣು ಪೋಡಿ, ಕ್ಯಾಪ್ಸಿಕಂ ಪೋಡಿ ಮತ್ತಿತರ ಚಾಟ್ಸ್ ತಿಂಡಿಗಳು ಗಮನ ಸೆಳೆದು ಆಗಮಿಸಿದವರ‌ ಮೆಚ್ಚುಗೆ ಗಳಿಸಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading