Ad Widget

ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ನಡೆದ “28ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ” ; “ಸಾಹಿತ್ಯ ಕ್ಷೇತ್ರದಲ್ಲಿ ಸುಳ್ಯದ ಮಣ್ಣಿಗೊಂದು ವಿಶಿಷ್ಟ ಸೊಗಡಿದೆ” : ಕೆ.ಆರ್.ತೇಜಕುಮಾರ್ ಬಡ್ಡಡ್ಕ ; ಕೃತಿ ಬಿಡುಗಡೆ, ಸಾಹಿತ್ಯ ಅವಲೋಕನ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ “ಕನ್ನಡ ಕಸ್ತೂರಿ ಸನ್ಮಾನ”

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ “ಸುಳ್ಯ ತಾಲೂಕು ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ ; “ಸಾಹಿತ್ಯ ಕ್ಷೇತ್ರದಲ್ಲಿ ಸುಳ್ಯದ ಮಣ್ಣಿಗೊಂದು ವಿಶಿಷ್ಟ ಸೊಗಡಿದೆ” : ಕೆ.ಆರ್.ತೇಜಕುಮಾರ್ ಬಡ್ಡಡ್ಕ ; ಕೃತಿ ಬಿಡುಗಡೆ, ಸಾಹಿತ್ಯ ಅವಲೋಕನ, ಕವಿಗೋಷ್ಠಿ, ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ “ಕನ್ನಡ ಕಸ್ತೂರಿ ಸನ್ಮಾನ”

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ, 28ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದರ ಆಶ್ರಯದಲ್ಲಿ ಡಿ.30 ಮಂಗಳವಾರದಂದು ಡಾ| ಪೈಲೂರು ಗೋಪಾಲಕೃಷ್ಣ ವೇದಿಕೆ, ಅಬಸಮ ಸಭಾಂಗಣ, ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಇಲ್ಲಿ “ಸುಳ್ಯ ತಾಲೂಕು ಮಟ್ಟದ 28ನೇ ಕನ್ನಡ ಸಾಹಿತ್ಯ ಸಮ್ಮೇಳನ”ವು ಸಡಗರ-ಸಂಭ್ರಮದಿಂದ ನೆರವೇರಿತು. ಹಿರಿಯ ಸಾಹಿತಿಗಳಾದ ಕೆ.ಆರ್ ತೇಜಕುಮಾರ್ ಬಡ್ಡಡ್ಕ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.

ಬೆಳಿಗ್ಗೆ ಕುಕ್ಕುಜಡ್ಕ ಪೇಟೆಯಿಂದ ನಡೆದ “ಕನ್ನಡ ಭುವನೇಶ್ವರಿಯ ಮೆರವಣಿಗೆ”ಗೆ ಮಾಜಿ ಸಚಿವರಾದ ಎಸ್.ಅಂಗಾರ ಮೆರವಣಿಗೆಗೆ ಚಾಲನೆ ನೀಡಿದರು.
ಅರುಣಕುಮಾರ ಮುಂಡಾಜೆ, ಬಾಲಸುಬ್ರಹ್ಮಣ್ಯ ಕೊಚ್ಚಡ್ಕ, ಚಂದ್ರಪ್ರಕಾಶ್ ಪಡ್ಪು, ಧನ್ಯರಾಜ್ ಮೂಕಮಲೆ, ಶ್ರೀಮತಿ ಹೇಮಾವತಿ ತಂಟೆಪ್ಪಾಡಿ ಹಾಗೂ ಸತೀಶ್ ಪಿಲಿಕಜೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ನಂತರ ಅಮರಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಾನಕಿ ಕಂದಡ್ಕ ರಾಷ್ಟ್ರಧ್ವಜರೋಹಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಪರಿಷತ್ತಿನ ಧ್ವಜಾರೋಹಣ ಹಾಗೂ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರಾದ ಮಿಥುನ್.ಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ನಂತರ ಸುಳ್ಯ ತಾಲೂಕು ತಹಶೀಲ್ದಾರರಾದ ಶ್ರೀಮತಿ ಮಂಜುಳಾ.ಎಂ ವಸ್ತು ಪ್ರದರ್ಶನ ಹಾಗೂ ಪುಸ್ತಕ ಪ್ರದರ್ಶನ ಮಳಿಗೆಗಳ ಉದ್ಘಾಟನೆಯನ್ನು ನೆರವೇರಿಸಿದರು.
ಹರಿಪ್ರಸಾದ್.ಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸಾಹಿತಿಗಳಾದ ಕೆ.ಪಿ ಸುರೇಶ್ ಕಂಜರ್ಪಣೆ ಸಮ್ಮೇಳನವನ್ನು ಉದ್ಘಾಟಿಸಿದರು. ಉದ್ಘಾಟಿಸಿ ಮಾತನಾಡಿದ ಸುರೇಶ್ ಕಂಜರ್ಪಣೆ ರವರು “ಹೊಸ ತಲೆಮಾರನ್ನು ಸಾಹಿತ್ಯ, ಕಲೆಯೆಡೆಗೆ ಆಕರ್ಷಿತವಾಗುವ ಮತ್ತು ಪ್ರೇರೇಪಿಸುವಂತೆ ಶಿಕ್ಷಣ, ಸಾಹಿತ್ಯ ಬೇಕು. ಆಗ ಮಾತ್ರ ನಮ್ಮ ಸಾಹಿತ್ಯ, ಕಲೆ, ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸಲು ಸಾಧ್ಯ. ಸೃಜನಶೀಲ ಮನಸ್ಸಿಗೆ ನೀರೆರೆಯುವ ಕೆಲಸ ಆಗಬೇಕು. ಸುಳ್ಯ ತಾಲೂಕಿನಲ್ಲಿ 16 ಶಾಲೆಗಳು ಸೇರಿ ರಾಜ್ಯದಲ್ಲಿ 3200 ಶಾಲೆಗಳು ಶತಮಾನ ಕಂಡಿದೆ. ಆ ಶಾಲೆಗಳ ವೈಭವವನ್ನು ಮತ್ತೆ ಮರುಕಳಿಸಬೇಕು. ಉಳಿದ ದೇಶಗಳಲ್ಲಿ ಅವರದ್ದೇ ಭಾಷೆಗಳಲ್ಲಿ ಸಂಶೋಧನೆ, ಸಾಧನೆ ಮಾಡುತ್ತಿದ್ದರೆ, ಭಾರತ ಮಾತ್ರ ಇನ್ನೂ ಇಂಗ್ಲೀಷ್ ಎಂಬ ವಸಾಹತುಶಾಹಿ ದಾಸ್ಯ ಮಾನಸಿಕತೆಗೆ ಒಳಗಾಗಿದೆ. ಈ ಮಾನಸಿಕತೆಯಿಂದ ಹೊರ ಬಂದು ನಮ್ಮ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆಯನ್ನು ಯುವ ತಲೆಮಾರಿಗೆ ತಿಳಿಸಿ ನಮ್ಮ ಬೇರುಗಳನ್ನು ಗಟ್ಟಿಗೊಳಿಸಬೇಕು” ಎಂದರು.

ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ರವರು ಮಾತನಾಡಿ “ಸುಳ್ಯ ತಾಲೂಕು ಸಮೃದ್ಧ ಸಾಹಿತ್ಯ ನೆಲ, ಈ ಸಾಹಿತ್ಯ ಪರಂಪರೆ ಮುಂದುವರಿಯಲು ಯುವ ಜನತೆಯಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯಬೇಕು, ಹೊಸ ಹೊಸ ಸಾಹಿತ್ಯ ರಚನೆಯಾಗಬೇಕು. ಸಾಹಿತ್ಯ ಸಮಾಜವನ್ನು ಪರಿವರ್ತನೆ ಮಾಡುತ್ತದೆ. ಸಮಾಜವನ್ನು ಎಲ್ಲಾ ಪಿಡುಗುಗಳಿಂದಲೂ ದೂರ ಮಾಡಿ ಸುಶಿಕ್ಷಿತವಾಗಿರಿಸಲು, ಸಂರಕ್ಷಣೆ ಮಾಡಲು ಸಾಹಿತ್ಯ ಪೂರಕ” ಎಂದು ಹೇಳಿದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹೊಸ ಕೃತಿಗಳನ್ನು ಬಿಡುಗಡೆಗೊಳಿಸಿ “ಸಾಹಿತಿಗಳ ತವರೂರು ಚೊಕ್ಕಾಡಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಅತ್ಯಂತ ಅರ್ಥ ಪೂರ್ಣ. ಓದುಗರ ಸಂಖ್ಯೆ ಹೆಚ್ಚಾಗಬೇಕು ಆಗ ಪುಸ್ತಕಗಳ ರಚನೆ, ಸಾಹಿತಿಗಳ ಸೃಷ್ಠಿ ಇನ್ನಷ್ಟು ಹೆಚ್ಚಾಗಲು ಸಾಧ್ಯ” ಎಂದು ಹೇಳಿದರು.
ನಂತರ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ತಮ್ಮ ಮಾತುಗಳನ್ನಾಡಿದರು.

ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಎಸ್.ಆಂಗಾರ, ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು ಹಾಗೂ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಕೃಷ್ಣಪ್ರಸಾದ್ ಮಾಡಬಾಕಿಲು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಶ್ರೀನಾಥ್ ಆಶಯ ನುಡಿಗಳನ್ನಾಡಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಪ್ರಸ್ತಾವನೆ ನೆರವೇರಿಸಿದರು.
ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಿದರು.
ಸಾಹಿತಿಗಳಾದ ಎ.ಕೆ ಹಿಮಕರ ಸಮ್ಮೇಳನಾಧ್ಯಕ್ಷರ ಪರಿಚಯ ನೆರವೇರಿಸಿ ನಿವೃತ್ತ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೂಂತಾರು ಸ್ಮರಣ ಸಂಚಿಕೆ ಸಂಪಾದಕರ ನುಡಿಗಳನ್ನಾಡಿದರು.
ರಾಧಾಕೃಷ್ಣ ಬೊಳ್ಳೂರು ಸ್ವಾಗತಿಸಿ ಕೃಷ್ಣಪ್ರಸಾದ್ ಮಾಡಬಾಕಿಲು ವಂದನಾರ್ಪಣೆ ನೆರವೇರಿಸಿದರು.
ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಣೆ ಮಾಡಿ ಸಂಕೀರ್ಣ ಚೊಕ್ಕಾಡಿ, ಚರಿಷ್ಮಾ ಕಡಪಳ ಹಾಗೂ ಶ್ರೀಮತಿ ಭವ್ಯ.ಪಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸಮ್ಮೇಳನದಲ್ಲಿ ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರ “ಮಜಲಿನಾಚೆ” ಕವನಸಂಕಲನ ಹಾಗೂ ಮಮತಾ ರವೀಶ್ ಪಡ್ಡಂಬೈಲು ರವರ “ಗುಬ್ಬಿ ದನಿ” ಕವನ ಸಂಕಲನ ಬಿಡುಗಡೆಗೊಂಡಿತು.

ಅಪರಾಹ್ನ ಸಾಹಿತಿಗಳಾದ ಸಂಜೀವ ಕುದ್ಪಾಜೆ ಸಮ್ಮೇಳನಾಧ್ಯಕ್ಷರ ಸಾಹಿತ್ಯ ಅವಲೋಕನ ಹಾಗೂ ಸಾಹಿತ್ಯ ಪರಿಚಯ ಮಾಡಿದರು.
ಬಾಬು ಗೌಡ ಅಚ್ರಪ್ಪಾಡಿ ಸ್ವಾಗತಿಸಿ ಹಾಗೂ ಕುಶಾಲಪ್ಪ ತುಂಬತ್ತಾಜೆ ಧನ್ಯವಾದ ಸಮರ್ಪಿಸಿದರು.
ಚೈತನ್ಯ.ಕೆ‌.ಎನ್ ಕಾರ್ಯಕ್ರಮ ನಿರೂಪಿಸಿ ಅಬ್ದುಲ್ಲಾ ಅರಂತೋಡು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ನಂತರ ಸಾಹಿತಿಗಳು ಹಾಗೂ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರಾದ ಡಾ| ಶಾಲಿನಿ.ಡಿ.ಎಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಪರಿಮಳ ಐವರ್ನಾಡು, ಮಮತಾ ಸುಧೀರ್ ಚಿದ್ಗಲ್, ರೇಣುಕಾ.ಆರ್ ನಾವಲಗಿ, ಅನುರಾಧಾ ಶಿವಪ್ರಕಾಶ್, ಮಾನ್ಯಶ್ರೀ.ಕೆ.ಎಂ ಪುಳಿಕುಕ್ಕು, ಅಶ್ವಿನಿ ಕೋಡಿಬೈಲು, ಮುಸ್ತಾಫ ಬೆಳ್ಳಾರೆ, ಗಾಯತ್ರಿ ರಾಜೀವ್ ಸ್ನೇಹಗಿರಿ, ಅಕ್ಷಯ ಕಾಂತಬೈಲು, ಸುಮತಿ.ಕೆ ಕಾನತ್ತಿಲ ಹಾಗೂ ದೀಪಶ್ರೀ ಅಡ್ತಲೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಶಾಲಿನಿ.ಡಿ.ಎಲ್ ರವರು “ನಮ್ಮಲ್ಲಿರುವ ಭಾವನೆಗಳಿಗೆ ಉಸಿರು ನೀಡಿದಾಗ ಕವಿತೆಗಳು ಹುಟ್ಟಿಕೊಳ್ಳುತ್ತವೆ. ಅವು ಅಮೂಲ್ಯವಾಗಿ ಜನರಿಗೆ ಮುಟ್ಟಬೇಕಾದರೆ ಪುಸ್ತಕ ರೂಪದಲ್ಲಿ ಹೊರಬರಬೇಕು. ಕವಿಗೋಷ್ಠಿಗಳ ಮೂಲಕ ಜನಮಾನಸಕ್ಕೆ ಮುಟ್ಟಬೇಕು” ಎಂದರು.
ರಮೇಶ್ ನೀರಬಿದಿರೆ ಸ್ವಾಗತಿಸಿ ರೂಪವಾಣಿ.ಬಿ ಧನ್ಯವಾದ ಸಮರ್ಪಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ಯೋಗೀಶ್ ಹೊಸೊಳಿಕೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ನಂತರ ಚೊಕ್ಕಾಡಿ ವಿದ್ಯಾಸಂಸ್ಥೆಗಳು ಕುಕ್ಕುಜಡ್ಕ ಮತ್ತು ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಕೇಶವ.ಸಿ.ಎ ಸ್ವಾಗತಿಸಿ ದೇವಪ್ಪ ಹೈದಂಗೂರು ಕಾರ್ಯಕ್ರಮ ನಿರೂಪಿಸಿ ಸಾವಿತ್ರಿ ಕಣೇಮರಡ್ಕ ಧನ್ಯವಾದ ಸಮರ್ಪಿಸಿದರು.
ಜಯರಾಮ್ ಶೆಟ್ಟಿ ದುಗ್ಗಲಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ನಂತರ ಖ್ಯಾತ ಯಕ್ಷಗಾನ ಅರ್ಥಧಾರಿಗಳಾದ ಜಬ್ಬಾರ್ ಸಮೋ ಸಂಪಾಜೆ ಅಧ್ಯಕ್ಷತೆಯಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ರಾಜೇಶ್ ತೋಳ್ಪಾಡಿ “ಮಕ್ಕಳ ಕವಿತೆಗೆ ಹೊಸ ದಿಕ್ಕು” ಎಂಬ ವಿಷಯದ ಕುರಿತು ಮತ್ತು ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ಅರವಿಂದ ಚೊಕ್ಕಾಡಿ “ವರ್ತಮಾನದ ಪಠ್ಯಪುಸ್ತಕಗಳಲ್ಲಿ ಇತಿಹಾಸದ ಪರಿಕಲ್ಪನೆಗಳು” ಎಂಬ ವಿಷಯದ ಕುರಿತು ವಿಚಾರ ಮಂಡನೆ ಮಾಡಿದರು.
ಚಂದ್ರಾವತಿ ಬಡ್ಡಡ್ಕ ಸ್ವಾಗತಿಸಿ ಚರಿಷ್ಮಾ ಕಡಪಳ ಧನ್ಯವಾದ ಸಮರ್ಪಿಸಿದರು.
ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿ ಗೋಪಿನಾಥ್ ಮೆತ್ತಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ನಂತರ ನಡೆದ “ಕಾವ್ಯ-ಕುಂಚ ಗಾಯನ”ವನ್ನು ಗಾಯಕರಾದ ರಮೇಶ್ ಮೆಟ್ಟಿನಡ್ಕ, ಕು. ಶುಬಾಶ್ರೀ ಬೆಳ್ಳಾರೆ ಹಾಗೂ ಕುಂಚ ಮೋನಪ್ಪ.ಹೆಚ್.ಎಸ್, ಪ್ರಜ್ವಲ್ ಬಾಳುಗೋಡು ನೆರವೇರಿಸಿದರು.
ಗಾಯಕರಾದ ಕೆ.ಆರ್ ಗೋಪಾಲಕೃಷ್ಣ ಗಾಯನ ನಿರ್ವಹಣೆ ಮಾಡಿದರು.
ಅರುಣ್ ಕುಮಾರ್ ಮುಂಡಾಜೆ ಸ್ವಾಗತಿಸಿ ಶರೀಫ್ ಜಟ್ಟಿಪಳ್ಳ ಧನ್ಯವಾದ ಸಮರ್ಪಿಸಿದರು.
ಶಶ್ಮಿ ಭಟ್ ಕಾರ್ಯಕ್ರಮ ನಿರೂಪಿಸಿ ಧನ್ಯರಾಜ್ ಮೂಕಮಲೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಅಪರಾಹ್ನ ನಡೆದ ಸಮಾರೋಪ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ| ಎಂ.ಪಿ ಶ್ರೀನಾಥ್ ರವರು ವಹಿಸಿದ್ದರು.
ಖ್ಯಾತ ಸಾಹಿತಿಗಳಾದ ಡಾ| ನಾ.ಸೋಮೇಶ್ವರ ಸಮಾರೋಪ ಭಾಷಣ ಮಾಡಿದರು.
ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ.) ಇದರ ಅಧ್ಯಕ್ಷರಾದ ಡಾ| ಕೆ.ವಿ ಚಿದಾನಂದ ಸಾಧಕರನ್ನು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕೇಶವ ಕರ್ಮಾಜೆ ಹಾಗೂ ಖ್ಯಾತ ವ್ಯಂಗ್ಯ ಚಿತ್ರಕಾರರಾದ ದಿನೇಶ್ ಕುಕ್ಕುಜಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರ ನುಡಿಯನ್ನು ಮಾತನಾಡಿದ ಹಿರಿಯ ಸಾಹಿತಿಗಳಾದ ಕೆ.ಆರ್ ತೇಜಕುಮಾರ್ ಬಡ್ಡಡ್ಕ ರವರು “ನಮ್ಮ ಸುಳ್ಯವೆಂಬುವುದು ದಟ್ಟ ಹಸಿರಿನ ಅರಣ್ಯಭರಿತ ಪ್ರಕೃತಿಯ ಚೆಲುವಿನ ನಾಡು. ಅದೇ ಕಾರಣವಿರಬೇಕು ಇಲ್ಲಿಯ ಸಾಹಿತಿಗಳ ಕೃತಿಗಳಲ್ಲಿ ಪರಿಸರದ ಹಸಿರಿನ ಜೀವಂತಿಕೆ ದಟ್ಟವಾಗಿ ಕಂಡುಬರುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಸುಳ್ಯದ ಮಣ್ಣಿಗೊಂದು ವಿಶಿಷ್ಟ ಸೊಗಡಿದೆ. ಅದಕ್ಕೆ ಹಲವಾರು ಕಾರಣಗಳಿವೆ. ಅದು ಪೂಮಲೆಯ ಸುಮದ ಸೌರಭವಿರಬಹುದು. ಬಂಟಮಲೆಯ ನಿಬಿಡಾರಣ್ಯದ ಹಸುರ ದಟ್ಟನೆಯ ನೋಟವಿರಬಹುದು. ಕುಮಾರ ಪರ್ವತದ ಗಿರಿಶ್ರೇಣಿಗಳ ಉತ್ತುಂಗದ ನಿಲುವಿರಬಹುದು. ಬಿಟ್ಟಕಣ್ಣಿನಿಂದ ದಿಟ್ಟಿಸಿ ನೋಡುತ್ತಾ ಈ ಭವ್ಯ ಪ್ರಕೃತಿಯನ್ನು ಆರಾಧಿಸುತ್ತಾ ಆಸ್ವಾದಿಸುವ ಪ್ರತಿಯೊಬ್ಬನೂ ಭಾವುಕನಾಗುತ್ತಾನೆ. ಹೃದಯದೊಳಗೆ ವಿಸ್ಮಯಗಳನ್ನು ಸೃಷ್ಟಿಸಿಕೊಂಡು ಸಾಹಿತಿಯಾಗುತ್ತಾನೆ. ಇದು ಈ ಮಣ್ಣಿನ ಸತ್ವ. ಇದೀಗ ಆಧುನಿಕತೆಯ ವೈಜ್ಞಾನಿಕ ದಟ್ಟನೆಯು ತನ್ನ ಆವಿಷ್ಕಾರಗಳೊಂದಿಗೆ ವಿಸ್ಮಯಗಳನ್ನು ಸೃಷ್ಟಿಸುತ್ತಾ ವಿಕೃತಿಗಳಿಗೂ ಕಾರಣವಾಗುತ್ತಿರುವ ಆತಂಕದಿಂದ ನಾವು ಹೊರತಾಗಿಲ್ಲ ” ಎಂದ ಅವರು “ಪ್ರಾಕೃತಿಕ ದಟ್ಟಣೆಯು ವಿರಳವಾಗುತ್ತಿರುವಂತೆ ನಾವುಗಳು ವಿಕಾಸದಿಂದ ವಿನಾಶದೆಡೆಗೆ ಸಾವಧಾನದ ಹೆಜ್ಜೆ ಇರಿಸುತ್ತಿದ್ದೇವೆ. ಭಾಷೆಗಳ ಅಳಿವಿನೊಂದಿಗೆ ಸಂಸ್ಕೃತಿಗಳೂ ನಾಶವಾಗುತ್ತಿವೆ. ಈ ಸತ್ಯವನ್ನರಿಯಲು ನಾವು ದೂರದತ್ತ ದೃಷ್ಟಿ ಬೀರುವ ಅಗತ್ಯವಿಲ್ಲ. ನಮ್ಮ ಸುತ್ತ ನೋಡಿದರೆ ಅದು ಅರ್ಥವಾಗಬಲ್ಲದು. ನಮ್ಮೂರ ಸಾಹಿತ್ಯದ ಉನ್ನತಿಗೆ ಕಾರಣವಾಗಿದ್ದು ಇಲ್ಲಿನ ಜನರಾಡುವ ವಿಭಿನ್ನ ಭಾಷೆಗಳ ಸೊಗಡೆಂಬುದರಲ್ಲಿ ಸಂಶಯವಿಲ್ಲ. ಅದೆಲ್ಲ ನಮ್ಮೂರ ಭಾಷೆಗಳೀಗ ವಿರಳವಾಗುತ್ತಿದೆ. ಇಲ್ಲಿನ ಪ್ರಾದೇಶಿಕ ಭಾಷೆಗಳು ಕ್ಷೀಣಿಸುತ್ತಾ ಸಾಗುತ್ತಿವೆ. ಆಳುವ ಸರ್ಕಾರಗಳು ಇಂದು ಅಕಾಡಮಿಗಳನ್ನು ಸ್ಥಾಪಿಸಿ ಭಾಷೆಗಳ ಉಳಿಯುವಿಕೆಗಾಗಿ ಶ್ರಮಿಸುತ್ತಿವೆ. ಇಲ್ಲಿನ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆಗಳಿಗೆ ಅಕಾಡೆಮಿಗಳಿವೆ. ಆದರೆ ಇಲ್ಲಿಯ ಕರಾವಳಿಯುದ್ದಕ್ಕೂ ಅಂದರೆ ದ.ಕ.ದಿಂದ ಕಾರವಾರ ತನಕ ಪ್ರಚಲಿತದಲ್ಲಿರುವ ಸ್ಥಳೀಯ ಭಾಷೆಗಳು ಕರ್ನಾಟಕದ ಉದ್ದಗಲಕ್ಕೂ ಹರಡಿ ನಿಂತಿರುವ ಹತ್ತು ಹಲವು ಬುಡಗಟ್ಟು ಪಂಗಡಗಳನ್ನು ಕಾಣಬಹುದು. ಅವರುಗಳಲ್ಲಿ ಕೆಲವಾರು ಭಾಷೆಗಳು ಈಗಾಗಲೇ ಇಲ್ಲವಾಗಿವೆ. ಅವರ ಭಾಷೆಗಳೀಗ ಸೊರಗಿ ಬಡವಾಗಿದೆ. ಹಲವಾರು ನಿರ್ಲಕ್ಷಿತ ಭಾಷೆಗಳೂ ಇದೇ ಹಂತದಲ್ಲಿದೆ. ಬುಡಗಟ್ಟು ಹಾಗೂ ನಿರ್ಲಕ್ಷಿತ ಭಾಷೆಗಳಿಗೂ ಹಂತ ಹಂತವಾಗಿ ಅಕಾಡೆಮಿಗಳು ಸ್ಥಾಪಿತಗೊಳ್ಳುವ ಅವಶ್ಯಕತೆ ಇಂದಿದೆ. ಅದು ಸಂಸ್ಕೃತಿಗಳ ಉಳಿವಿಗೆ ಅನಿವಾರ್ಯವೂ ಹೌದು. ಸಾಹಿತ್ಯ ಸೃಷ್ಟಿಯಲ್ಲಿ ಬರಹಗಾರನ ಅನುಭವವೇ ಪ್ರಮುಖ ಪಾತ್ರ ವಹಿಸುತ್ತದೆ. ನಮಗೆ ತಿಳಿದಿರದ ಯಾವುದೋ ಒಂದನ್ನು ಬರೆದಾಗ ಅದು ನೈಜವಾಗಿ ಮೂಡಿ ಬರುವುದಿಲ್ಲ ಎನ್ನುವುದು ಸತ್ಯ, ನಮ್ಮರಿವಿನ ಬರಹದಲ್ಲಿ ನಿಖರತೆಯಿರುತ್ತದೆ. ಜೀವನಾನುಭವದ ಪಕ್ವತೆ, ದಣಿವರಿಯದ ಓದು ಹಾಗೂ ವಿಶಾಲ ವೀಕ್ಷಣೆಯಿಂದ ಸಾಹಿತಿ ಯಶಸ್ಸು ಗಳಿಸಬಹುದು. ಸುಮಾರು ಇನ್ನೂರರಷ್ಟು ಭಾಷೆಗಳು ಇನ್ನೊಂದು ಅರವತ್ತರಿಂದ ಎಂಭತ್ತು ವರ್ಷಗಳಲ್ಲಿ ನಶಿಸಿಹೋಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆ ಭಾಷೆಗಳ ಸಾಲಿನಲ್ಲಿ ನಮ್ಮ ಕನ್ನಡವೂ ಇದೆ ಎಂಬುದು ಆತಂಕಕಾರಿ. ಸರಿಸುಮಾರು ಹತ್ತೊಂಭತ್ತು ಸಾವಿರದಷ್ಟಿದ್ದ ಭಾರತದ ಭಾಷೆಗಳಲ್ಲಿ ಅವೆಷ್ಟೋ ನಶಿಸಿಹೋಗಿವೆ. ಅಷ್ಟೊಂದು ಭಾಷೆಗಳು ಇನ್ನಿಲ್ಲವಾಗುತ್ತಿರುವಾಗ ಹೊಸದೊಂದು ಭಾಷೆ ಸೃಷ್ಟಿಯಾಗಿದೆಯೆಂಬ ಯಾವುದೇ ಕುರುಹುಗಳು ಕಂಡು ಬರುವುದಿಲ್ಲ. ಹಾಗಿದ್ದರೂ ಹೊಸದಾದ ಭಾಷೆಯೊಂದನ್ನು ಅವಿಷ್ಕಾರಗೊಳಿಸಿ ಬಹುತೇಕ ಯಶಸ್ಸು ಕಂಡ ಈ ಮಣ್ಣಿನ ವ್ಯಕ್ತಿಗಳನ್ನು ಮರೆಯುವಂತಿಲ್ಲ” ಎಂದರು.

ಗೌರವ ಉಪಸ್ಥಿತರಾಗಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ| ಹರಪ್ರಸಾದ್ ತುದಿಯಡ್ಕ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಜಣ್ಣ ಹಾಗೂ ಸುಳ್ಯ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್.ಯು.ಕೆ ಉಪಸ್ಥಿತರಿದ್ದರು.

ಸಾಹಿತ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಎಂ.ಟಿ ಶಾಂತಿಮೂಲೆ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮೋಹನ ಶೇಣಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹರೀಶ್ ಮೋಟುಕಾನ, ಕ್ರೀಡಾ ಕ್ಷೇತ್ರದಲ್ಲಿ ಶ್ರೀಮತಿ ಭವಾನಿ ವಸಂತ್, ಧಾರ್ಮಿಕ ಮತ್ತು ಸಂಘಟನಾ ಕ್ಷೇತ್ರದಲ್ಲಿ ಆನೆಕಾರ ಗಣಪಯ್ಯ, ಯಕ್ಷಗಾನ ಕ್ಷೇತ್ರದಲ್ಲಿ ಶೇಖರ ಮಣಿಯಾಣಿ, ಶಿಲ್ಪಕಲಾ ಕ್ಷೇತ್ರದಲ್ಲಿ ಶ್ರೀನಿವಾಸ ಮಾಸ್ಟರ್ ಹಳೆಗೇಟು, ಭೂತಾರಾಧನೆ ಕ್ಷೇತ್ರದಲ್ಲಿ ವಿಜಿತ್ ಮೈತಡ್ಕ, ಹಿರಿಯ ಸಾಹಿತಿಗಳಾದ ಶ್ರೀಮತಿ ಸುಲೋಚನಾ.ಪಿ.ಕೆ, ಗಣಕ ಯಂತ್ರ ಪರಿಣಿತರಾದ ವೈಕುಂಠ ಪ್ರಭು, ಸಹಕಾರ ಹಾಗೂ ಸಮಾಜಸೇವಾ ಕ್ಷೇತ್ರದಲ್ಲಿ ಚಂದ್ರಾ ಕೋಲ್ಚಾರ್ ಹಾಗೂ ವ್ಯಾಪಾರೋದ್ಯಮ ಕ್ಷೇತ್ರದಲ್ಲಿ ಇಬ್ರಾಹಿಂ ಸುಳ್ಯ ಇವರುಗಳು “ಕನ್ನಡ ಕಸ್ತೂರಿ ಸನ್ಮಾನ” ಸ್ವೀಕರಿಸಿದರು. ಕ್ರೀಡಾ ಕ್ಷೇತ್ರದ ಬಾಲ ಪ್ರತಿಭೆ ಕು. ಭಾನವಿ.ಪಿ.ಎಸ್ ಇವರು “ಕನ್ನಡ ಕಸ್ತೂರಿ ಗೌರವಾರ್ಪಣೆ” ಸ್ವೀಕರಿಸಿದರು.
ಸಂಕೀರ್ಣ ಚೊಕ್ಕಾಡಿ ಸ್ವಾಗತಿಸಿ ತೇಜಸ್ವಿ ಕಡಪಳ ವಂದನಾರ್ಪಣೆ ಸಲ್ಲಿಸಿದರು.
ಚಂದ್ರಮತಿ.ಕೆ ಕಾರ್ಯಕ್ರಮ ನಿರೂಪಿಸಿ ಸಂಧ್ಯಾಕುಮಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಹರಿಪ್ರಸಾದ್.ಕೆ, ಜಯಶ್ರೀ.ಎಂ, ರಚನಾ.ಸಿ.ವಿ ಹಾಗೂ ಗ್ರೀಷ್ಮಾ ಸನ್ಮಾನಿತರ ಪರಿಚಯ ಮಾಡಿದರು.

ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕುಕ್ಕುಜಡ್ಕ ಭ್ರಾಮರಿ ಪಾಟ್ಯಾಲಯದ ವತಿಯಿಂದ “ನೃತ್ಯ ವೈಭವ” ಹಾಗೂ ಕಾಜಾಣ(ರಿ.) ಬೆಂಗಳೂರು ಇದರ ವತಿಯಿಂದ “ಸಾಲು ಮರಗಳ ತಾಯಿ ತಿಮ್ಮಕ್ಕ” ನಾಟಕ ಪ್ರದರ್ಶನ ನೆರವೇರಿತು. ಬೇಲೂರು ರಘುನಂದನ್ ರವರು ಈ ನಾಟಕದ ರಂಗಪಠ್ಯ, ವಿನ್ಯಾಸ, ಸಂಗೀತ ಹಾಗೂ ನಿರ್ದೇಶನ ಮಾಡಿದ್ದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಜಯಶ್ರೀ ತೇಜಸ್ವಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading