Ad Widget

ಬೆಳೆವಿಮೆ ಜಮೆಯಲ್ಲಿ ಅನ್ಯಾಯದ ವಿರುದ್ಧ ಸುಳ್ಯದಲ್ಲಿ ಕೃಷಿಕರ ಪ್ರತಿಭಟನೆ

ಸ್ಥಳಕ್ಕೆ ತಹಶಿಲ್ದಾರ್ ಬರಬೇಕೆಂದು ಪಟ್ಟು – ಸಂಬಂಧಪಟ್ಟ ಇಲಾಖೆಗಳ ಸಭೆ ಕರೆಯಲು ಒಂದು ವಾರ ಕಾಲಾವಕಾಶ

. . . . . . . . .

ಸಭೆಯಲ್ಲಿ ಬೇಡಿಕೆ ಈಡೇರದಿದ್ದರೆ ಜಿಲ್ಲಾ ಮಟ್ಟದ ಹೋರಾಟಕ್ಕೆ ನಿರ್ಧಾರ

. . . . . . .

ಬೆಳೆವಿಮೆ ಪರಿಹಾರದಲ್ಲಿ ಆದ ಅನ್ಯಾಯದ ವಿರುದ್ದ ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದ ಕೃಷಿಕರು ತಮ್ಮ ಮನವಿ ಸ್ವೀಕರಿಸಲು ಸ್ಥಳಕ್ಕೆ ತಹಶಿಲ್ದಾರ್ ಬರಬೇಕೆಂದು ಪಟ್ಟು ಹಿಡಿದ ಹಾಗೂ ಪ್ರತಿಭಟನಾಕಾರರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ತಹಶಿಲ್ದಾರರು ಮುಂದಿನ ಒಂದು ವಾರದೊಳಗೆ ಎಲ್ಲಾ ಇಲಾಖೆಯ ಅಧಿಕಾರಿಗಳ ಸಭೆಯನ್ನು ಕೃಷಿಕರ ಉಪಸ್ಥಿತಿಯಲ್ಲಿ ನಡೆಸಿ ಪರಿಹಾರದ ಬಗ್ಗೆ ತಿಳಿಸುವುದಾಗಿ ಹೇಳಿದ ಮೇರೆಗೆ ಪ್ರತಿಭಟನಾಕಾರರು ಒಂದು ವಾರದ ಕಾಲಾವಕಾಶ ನೀಡಿದ ಘಟನೆ ಡಿ.24ರಂದು ಸುಳ್ಯದಲ್ಲಿ ನಡೆದಿದೆ.

ಈ ಬಾರಿಯ ಬೆಳೆವಿಮೆ ಜಮೆಯಲ್ಲಿ ಕೃಷಿಕರಿಗೆ ಉಂಟಾದ ತಾರತಮ್ಯ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಖಂಡಿಸಿ ಡಿ.24ರಂದು ‘ಮಲೆನಾಡು ಜನಹಿತರಕ್ಷಣಾ ವೇದಿಕೆ’ ವತಿಯಿಂದ ಸುಳ್ಯದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಅಧಿಕಾರಿಗಳ ಗೈರುಹಾಜರಿ ಮತ್ತು ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ ನೂರಕ್ಕೂ ಅಧಿಕ ಮಂದಿ ಕೃಷಿಕರು ಪಕ್ಷಾತೀತವಾಗಿ ತಾಲೂಕು ಕಛೇರಿಯ ಮುಂಭಾಗದಲ್ಲೇ ಪ್ರತಿಭಟನೆ ನಡೆಸಿದರು.
. ಸಭೆಯ ಬಳಿಕ ಮನವಿ ಸಲ್ಲಿಸಲು ಕೃಷಿಕರು ಸ್ಥಳಕ್ಕೆ ತಹಶಿಲ್ದಾರ್ ಬರಬೇಕೆಂದು ಹೇಳಿದರೆನ್ನಲಾಗಿದೆ. ಈ ವೇಳೆ ಉಪ ತಹಶೀಲ್ದಾರರು, “ತಹಶೀಲ್ದಾರರು ಮಂಗಳೂರಿಗೆ ತೆರಳಿದ್ದಾರೆ” ಎಂಬ ಉತ್ತರ ನೀಡಿದರೆನ್ನಲಾಗಿದೆ. . ಇದರಿಂದ ಆಕ್ರೋಶಗೊಂಡ ಕೃಷಿಕರು ನಮ್ಮ ಸಮಸ್ಯೆಗಳನ್ನು ಕೇಳಬೇಕಾದ ಅಧಿಕಾರಿಗಳು ಬೇಜವಾಬ್ದಾರಿತನ ತೋರಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡರೆನ್ನಲಾಗಿದೆ.

ನಮ್ಮ ಬೇಡಿಕೆಗೆ ತಹಶೀಲ್ದಾರ್ ಹಾಗೂ ಪುತ್ತೂರು ಸಹಾಯಕ ಆಯುಕ್ತರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಮತ್ತು ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿ, ಘೋಷಣೆ ಕೂಗಿದರು.

ಈ ವೇಳೆ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು ತಹಶೀಲ್ದಾರ್ ಮಂಜುಳ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಬೆಳೆವಿಮೆಯಲ್ಲಿ ಕೃಷಿಕರಿಗೆ ಆದ ಅನ್ಯಾಯದ ವಿರುದ್ದ ನಾವು ಹೋರಾಟ ಮಾಡುತ್ತಿರುವುದಾಗಿ ತಿಳಿಸಿದರಲ್ಲದೇ , ತಾವು ಬಂದು ಮನವಿ ಸ್ವೀಕರಿಸುವಂತೆ ಹೇಳಿದರು. ಆದರೆ ತಹಶಿಲ್ದಾರ್ ಅವರು ಮಂಗಳೂರಿನಲ್ಲಿದ್ದ ಕಾರಣ ದೂರವಾಣಿಯಲ್ಲಿ ಮಾತುಕತೆ ನಡೆದು, ಡಿ.31ರೊಳಗೆ ಬೆಳೆವಿಮೆಗೆ ಸಂಬಂಧಿಸಿದ ಕೃಷಿ , ತೋಟಗಾರಿಕೆ ಇಲಾಖೆಗಳ ಸಭೆಯನ್ನು ಕೃಷಿಕರ ಉಪಸ್ಥಿತಿಯಲ್ಲಿ ನಡೆಸುವುದಾಗಿ ತಹಶಿಲ್ದಾರ್ ಅವರು ಹೇಳಿದ ಮೇರೆಗೆ ಪ್ರತಿಭಟನಾಕಾರು ಒಂದು ವಾರದ ಕಾಲಾವಕಾಶ ನೀಡಿದರೆಂದು ತಿಳಿದುಬಂದಿದೆ.
ಮುಂದಿನ ಸಭೆಯಲ್ಲಿ ಕೃಷಿಕರಿಗೆ ಪರಿಹಾರ ಸಿಗದಿದ್ದರೆ ಜಿಲ್ಲಾಮಟ್ಡದಲ್ಲಿ ಹೋರಾಟ ನಡೆಸುವುದಾಗಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಮುಖಂಡರಾದ ಕಿಶೋರ್ ಶಿರಾಡಿ, ಯೂತ್ ಪ್ರಮುಖ್ ಡಿ..ಕೆ. ಅವಿನಾಶ್, ಜಿಲ್ಲಾ ಸಂಪರ್ಕ ಪ್ರಮುಖ್ ರಮಾನಂದ ಎಣ್ಣಿಮಜಲು, ತಾಲೂಕು ಸಂಪರ್ಕ ಪ್ರಮುಖ್ ಹೂವಪ್ಪ ಸಂಪ್ಯಾಡಿ, ಪ್ರಮುಖರಾದ ಹರೀಶ್ ಕಂಜಿಪಿಲಿ, ಎಂ. ವೆಂಕಪ್ಪ ಗೌಡ, ಚಂದ್ರಶೇಖರ ಬಾಳುಗೋಡು, ವಿಕ್ರಂ ಎ.ವಿ. ಅಪ್ಪಂಗಾಯ, ಸಂತೋಷ್ ಕುತ್ತಮೊಟ್ಟೆ,., ನಾರಾಯಣ ಎಸ್.ಎಂ. ಶಾಂತಿನಗರ, ವಿನಯ ಕುಮಾರ್ ಕಂದಡ್ಕ ಶಶಿಕಲಾ ನೀರಬಿದರೆ, ಪುಷ್ಪ ಮೇದಪ್ಪ, ಗುಣವತಿ ಕೊಲ್ಲಂತಡ್ಕ ಸೇರಿದಂತೆ ನೂರಕ್ಕೂ ಅಧಿಕ ಕೃಷಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading