Ad Widget

ಕಲಾ ಶಿಕ್ಷಕನಿಗೊಲಿದ ಪ್ರಶಸ್ತಿ – “ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಆಯ್ಕೆಯಾದ ಮೋಹನ್ ಏನಾಜೆ ರವರ ಪರಿಚಯ

ಮಾನವನ ಸೃಜನಾತ್ಮಕ ಕೌಶಲ್ಯಗಳು ಹಾಗೂ ಸಂವೇದನಾ ಭಾವಲಹರಿಗಳನ್ನು  ದೃಶ್ಯಕಲೆಗಳ ಮೂಲಕ ಜನಮಾನಸದಲ್ಲಿ  ಅಜರಾಮರಗೊಳಿಸಲು ಕಲೆ ಅಥವಾ ಚಿತ್ರಕಲೆ ಬಹುದೊಡ್ಡ  ಸ್ಥಾನದಲ್ಲಿ ತನ್ನ ಕೈಂಕರ್ಯವನ್ನು ಮಾಡುತ್ತಿದೆ. ಭಾರತದಂತಹ ಕಲಾ ಆರಾಧಕರ ದೇಶದಲ್ಲಿ ಹಲವಾರು ಸೃಜನಶೀಲ, ಹುಟ್ಟು ಪ್ರತಿಭಾವಂತ ಕಲಾವಿದರು ತಮ್ಮ ಸಹಜ ಕಲಾ ಪ್ರತಿಮೆಗಳನ್ನು ಕಾಲಕಾಲಕ್ಕೆ ಅನಾವರಣ ಮಾಡುತ್ತಿದ್ದಾರೆ. ಅಂತಹ ಸಹಜ ಕಲಾ ಪ್ರತಿಭೆ ಕಲಾ ಆರಾಧಕರಲ್ಲಿ ಸುಳ್ಯದ  ಎಣ್ಮೂರಿನ ಮೋಹನ್ ಏನಾಜೆ  ಕೂಡ ಒಬ್ಬರು. ಇವರು ಈ ಬಾರಿಯ “ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ”ಗೆ ಭಾಜನರಾಗಿದ್ದು, ಇವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…
ಎಣ್ಮೂರು ಗ್ರಾಮದ ಸುಂದರನಗರ ನಿವಾಸಿ ಏನಾಜೆ  ರುಕ್ಮಯ್ಯ ಗೌಡ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ನಾಲ್ಕನೆಯ ಪುತ್ರನಾಗಿ ಜನಿಸಿದ ಮೋಹನ್ ಏನಾಜೆ ರವರು ಸರ್ಕಾರಿ  ಪ್ರಾಥಮಿಕ ಶಾಲೆ  ಕುಂತೂರು-ಪದವು ಹಾಗೂ ಪ್ರೌಢಶಾಲೆ ಸಂತ ಜಾರ್ಜ್  ಪದವು ಇಲ್ಲಿ ವಿದ್ಯಾಭ್ಯಾಸ ಪಡೆದು, ನಂತರ ಚಿತ್ರಕಲಾ  ಶಿಕ್ಷಣವನ್ನು ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯ ಚಿಕ್ಕಮಗಳೂರಿನಲ್ಲಿ ಪಡೆದಿದ್ದಾರೆ.‌  ರವಿಕುಮಾರ್.ಟಿ.ಎಚ್ ಹಾಗೂ ವಿಶ್ವಕರ್ಮ ಆಚಾರ್ ಇವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಇವರು ನಾಲ್ಕು ವರ್ಷಗಳ ಕಾಲ ಸಾಯಿ ಏಂಜಲ್ಸ್ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
2008ರಲ್ಲಿ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿ ಸರ್ಕಾರಿ ಸೇವೆ ಪ್ರಾರಂಭಿಸಿದ ಇವರು ವಿದ್ಯಾರ್ಥಿಗಳಿಗೆ ರೇಖಾ ಚಿತ್ರಗಳ ಮೂಲಕ ಚಿತ್ರಕಲೆ, ಕರಕುಶಲ ತಯಾರಿ, ಮುಖವಾಡ
ತಯಾರಿ, ಪಾಟ್ ಡಿಸೈನ್, ಗೆರಟೆ ಕಲಾಕೃತಿ, ಗಾಜಿನ ಬಳೆಗಳನ್ನು ಸೇರಿಸಿ ಚಿತ್ರಗಳ ರಚನೆ, ಗೂಡು ದೀಪ ತಯಾರಿಸುವುದು, ಆವೆ ಮಣ್ಣಿನ ಕಲಾಕೃತಿ, ಕಸದಿಂದ ರಸ, ರಂಗೋಲಿ ರಚನೆ, ಗೋಡೆಗಳಲ್ಲಿ ವರ್ಲಿಕಲೆ, ಮಧುಬನಿ ಕಲೆ, ಮೆಹಂದಿ ಡಿಸೈನ್, ಪೇಪರ್ ಕಟ್ಟಿಂಗ್, ಗಾಳಿಪಟ ಹಾರಿಸುವುದು, ದವಸ-ಧಾನ್ಯಗಳನ್ನು ಸೇರಿಸಿ ಚಿತ್ರ ರಚನೆ, ಬಟ್ಟೆ ಚೀಲಗಳ ತಯಾರಿ, ಬೊಂಬೆ ತಯಾರಿ, ತ್ರೆಡ್ ವರ್ಕ್, ಅಕ್ಷರ ಲೇಖನ, ವಿವಿಧ ವಿಧಗಳಲ್ಲಿ ಸಹಿ ಮಾಡುವ ತರಬೇತಿ ನೀಡುವುದು, ವಿದ್ಯಾರ್ಥಿಗಳಿಗೆ ಬೆಂಕಿ ರಹಿತ ಅಡುಗೆ ತಯಾರಿ ವಿಧಾನವನ್ನು ಏರ್ಪಡಿಸುವುದು, ಆಷಾಢ ತಿಂಗಳಲ್ಲಿ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸುವ ಆಟಿ ಸ್ಪರ್ಧೆ, ಚೆನ್ನಮಣೆ ಸ್ಪರ್ಧೆ, ದವಸ ಧಾನ್ಯಗಳಿಂದ ತಯಾರಿಸುವ ಪೌಷ್ಠಿಕಯುಕ್ತ ಅಡುಗೆ ಸ್ಪರ್ಧೆಗಳು, ವಿದ್ಯಾರ್ಥಿಗಳಿಗೆ ಗದ್ದೆ ನಾಟಿ ಮಾಡಿ ನೇಜಿ ನೆಡುವ ವಿಧಾನವನ್ನು ಹೇಳಿಕೊಡುವುದು ಹಾಗೂ ಸಾವಯವ ವಿಧಾನದಲ್ಲಿ ತರಕಾರಿ ಗಿಡಗಳನ್ನು ಬೆಳೆಸುವುದರ ಬಗ್ಗೆ ಮಾಹಿತಿ ನೀಡುವುದು ಮುಂತಾದ ವಿಷಯಗಳ ಬಗ್ಗೆ ಮಕ್ಕಳಿಗೆ ಕಲಿಸಿ ಅವರಲ್ಲಿ ಅರಿವು ಮೂಡಿಸುವುದರೊಂದಿಗೆ ಶಾಲೆಯಲ್ಲಿ ಸುಮಾರು 15ಕ್ಕಿಂತಲೂ ಹೆಚ್ಚು ವಿವಿಧ ಜಾತಿಯ ಬಾಳೆಯ ಗಿಡಗಳನ್ನು ಸಂಗ್ರಹಿಸಿ ಅದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ವಿವಿಧ ಜಾತಿಯ ಕಾಡು ಹಣ್ಣಿನ ಗಿಡಗಳನ್ನು ಶಾಲಾ ಆವರಣದಲ್ಲಿ ಬೆಳೆಸಲಾಗಿದೆ. ಪಂಜ ಲಯನ್ಸ್ ಕ್ಲಬ್ ನ ಸಹಕಾರದಿಂದ ಈಗಾಗಲೇ ವಿವಿಧ ಜಾತಿಯ ಕಸಿ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಕೊರೋನಾ ಸಂದರ್ಭದಲ್ಲಿ ಶಾಲೆಯನ್ನು ಅಂದಗೊಳಿಸುವ ಕೆಲಸ ಪ್ರಾರಂಭ ಮಾಡಲಾಯಿತು. ಅನೇಕ ವಿಧದ ಗಿಡಗಳನ್ನು ನೆಟ್ಟು ನಡೆದಾಡಲು ಇಂಟರ್ ಲಾಕ್ ಅಳವಡಿಸಲಾಯಿತು. 
ದಾನಿಗಳ ಸಹಾಯದಿಂದ ಸುಮಾರು 2 ಲಕ್ಷದಷ್ಟು ಖರ್ಚು ಮಾಡಿ ಶಾಲೆಯಲ್ಲಿ ಅಂದವಾದ ಉದ್ಯಾನವನ್ನು ನಿರ್ಮಿಸಲಾಗಿದೆ.
ಶಾಲಾ ಮೈದಾನದಲ್ಲಿ ದೊರೆತಿರುವ ಒಂದು ದೊಡ್ಡ ಕಲ್ಲಿಗೆ ಬಣ್ಣ ಬಳಿದು ಕಲಾಕೃತಿಯನ್ನಾಗಿ ಮಾರ್ಪಾಡು ಮಾಡಲಾಗಿದೆ.

. . . . . . . . .

ಇವರ ಪತ್ನಿ ದಿವ್ಯಾ ಎಂ ಕೆ ಎಣ್ಮೂರು ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಮಗಳು ರುಚಿತಾ ಎ. ನಿಂತಿಕಲ್ಲಿನ ಕೆಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ 9ನೇ ತರಗತಿ ಹಾಗೂ ಮಗ ಶಿಶಿರ್ ಎ. 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading