Ad Widget

ಬೆಂಗಳೂರು : ಕೊಡಗು ಗೌಡ ಸಮಾಜಗಳ ಒಕ್ಕೂಟ ಸಭೆ ; ಸಮೀಕ್ಷೆ ವೇಳೆ ಅರೆಭಾಷೆ ಎಂದು ನಮೂದಿಸಲು ನಿರ್ಧಾರ

ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಜಾತಿ ಕಾಲಂ ನಲ್ಲಿ “ಗೌಡ”, ಉಪಜಾತಿ ಕಾಲಂ ನಲ್ಲಿ “ಅರೆಭಾಷೆ ಗೌಡ” ಹಾಗೂ ಮಾತೃಭಾಷೆ ಕಾಲಂ ನಲ್ಲಿ “ಅರೆಭಾಷೆ” ಎಂದು ನಮೂದು ಮಾಡುವಂತೆ ಆ.30 ರಂದು ಬೆಂಗಳೂರಿನಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಬೆಂಗಳೂರಿನ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ರವರು ಈ ವಿಷಯಗಳಿಗೆ ಸಹಮತ ವ್ಯಕ್ತಪಡಿಸಿ “ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಈ ರೀತಿಯಲ್ಲಿ ಗೌಡ ಸಮಾಜಗಳ ಸಭೆ ನಡೆಸಿ ಈ ಕುರಿತಂತೆ ಅಲ್ಲಿಯೂ ಒಮ್ಮತದ ತೀರ್ಮಾನ ಕೈಗೊಳ್ಳಬೇಕಾಗಿದೆ” ಎಂದು ಹೇಳಿದರು.
ಸುಳ್ಯ ಮತ್ತು ಮಡಿಕೇರಿಯಲ್ಲಿ ತಕ್ಷಣ ಸಭೆ ನಡೆಸಿ ಮಾಹಿತಿ ವಿನಿಮಯ ಮಾಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ದಿಸೆಯಲ್ಲಿ ಈ ವಿಚಾರಗಳನ್ನು ಪ್ರಚಾರಪಡಿಸಿ ಜನಾಂಗದ ವ್ಯಕ್ತಿಗಳಿಗೆ ತಲುಪಿಸಲು ಎಲ್ಲಾ ಗೌಡ ಸಮಾಜದ ಅಧ್ಯಕ್ಷರ ಸಮಿತಿ ರಚನೆ ಮಾಡಿ ಅವರಿಗೆ ಜವಾಬ್ದಾರಿ ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ರವರು “ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಾತಿ ಗಣತಿ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗಳ ಜಾಗೃತಿ ಅಭಿಯಾನದ ಸಮೀಕ್ಷೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಮತ್ತು ಸೂಕ್ತವಾಗಿ ಆಲೋಚಿಸಿ ನೋಂದಾವಣೆ ಮಾಡಬೇಕು. ನಮ್ಮ ಜನಾಂಗಕ್ಕೆ ಹಿಂದಿನಿಂದ ಸಿಗುತ್ತಿರುವ ಸೌಲಭ್ಯಗಳನ್ನು ಉಳಿಸಿಕೊಳ್ಳಬೇಕು ಮತ್ತು ಮುಂದೆ ಯಾವುದೇ ತೊಂದರೆಗೆ ಒಳಪಡದಂತೆ ನಿರ್ಣಯ ಆಗಬೇಕು” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಾಜಿ ವಿಧಾನಸಭಾ ಅಧ್ಯಕ್ಷರಾದ ಕೆ.ಜಿ ಬೋಪಯ್ಯ ರವರು ಮಾತನಾಡಿ “ಕೊಡಗಿನ ನಮ್ಮ ಜನಾಂಗದ ಎಲ್ಲಾ ದಾಖಲೆಗಳು “ಗೌಡ” ಎಂಬ ಹೆಸರಿನಲ್ಲಿದ್ದು, ಮುಂದೆ ಜಾತಿ ಕಾಲಂ ನಲ್ಲಿ ಬೇರೆ ನಮೂದು ಮಾಡಿದ್ದಲ್ಲಿ ಸಮುದಾಯಕ್ಕೆ ತೊಂದರೆ ಆಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾ ನಮ್ಮ ಹಿಂದಿನಿಂದ ಬಂದಂತಹ “ಗೌಡ” ಜಾತಿಯನ್ನೇ ಮುಂದುವರಿಸಬೇಕು” ಎಂಬ ಸಲಹೆಯನ್ನು ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ರವರು ಮಾತನಾಡಿ “ನಮ್ಮೆಲ್ಲರ ನಿರ್ಣಯ ಒಂದೇ ಆಗಬೇಕಾಗಿದ್ದು, ಶೈಕ್ಷಣಿಕ ಮತ್ತು ಆರ್ಥಿಕ ದೃಷ್ಟಿಯಿಂದ “ಗೌಡ” ಎಂದು ನಮೂದಿಸುವುದು ಸೂಕ್ತ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಒಕ್ಕೂಟದ ಉಪಾಧ್ಯಕ್ಷರಾದ ಡಾ. ತೇನನ ರಾಜೇಶ್ ರವರು ಜಾತಿ ಸಮೀಕ್ಷೆಯ ಪೂರ್ಣ ವಿವರಗಳನ್ನು ಪುರಾವೆಗಳೊಂದಿಗೆ ಸಭೆಯ ಮುಂದೆ ಮಂಡಿಸಿದರು ಹಾಗೂ “ಯಾವ ಕಾರಣಕ್ಕಾಗಿ ನಾವು “ಗೌಡ” ಎಂದು ಜಾತಿ ಕಾಲಂ ನಲ್ಲಿ ನಮೂದು ಮಾಡಬೇಕಿದೆ” ಎಂದು ದಾಖಲೆ ಸಹಿತ ವಿವರಿಸಿದರು.
ಪ್ರಸ್ತುತ ಜಾತಿ ಗಣತಿಯಲ್ಲಿ ಭಾಗವಹಿಸುತ್ತಿರುವ ವಿಷಯ ತಜ್ಞರಾದ ಪಟ್ಟಡ ಶಿವಕುಮಾರ್ ರವರು ಈ ಬಗ್ಗೆ ವಿವರವಾಗಿ ಮಾತನಾಡಿ ನಾವು “ಗೌಡ” ಎಂಬುವುದನ್ನು ಮಾತ್ರ ಯಾಕೆ ಬರೆಯಬೇಕು ಎಂಬುವುದನ್ನು ವಿವರಿಸಿದರು.
ಎಲ್ಲಾ ಸಲಹಾ ಸಮಿತಿಯ ಸದಸ್ಯರು, ಸಾಮಾಜಿಕ ಚಿಂತಕರು, ಸಮಾಜಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಒಳಗೊಂಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಆನಂದ ಕರಂದ್ಲಾಜೆ ರವರು ಒಕ್ಕೂಟ ನಡೆದುಬಂದ ಹಾದಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಬೆಂಗಳೂರು ಶಾಖೆಯನ್ನು ಉದ್ಘಾಟಿಸಲಾಯಿತು.
ಬೆಂಗಳೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಕೇಕಡ ನಾಣಯ್ಯ ಇವರು ಸ್ವಾಗತಿಸಿ, ಕೊಡಗು ಗೌಡ ಸಮಾಜ ಬೆಂಗಳೂರು ಇದರ ಕಾರ್ಯದರ್ಶಿ ಬಿಪಿನ್ ಬೇಕಲ್ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading