Ad Widget

ಸುಳ್ಯದ ಪತ್ರಿಕಾ ದಿನಾಚರಣೆಯಲ್ಲಿ ಇಂದು ಸನ್ಮಾನಗೊಳ್ಳಲಿರುವ ಸುಬ್ರಾಯ ಸಂಪಾಜೆ – ಅವರ ಪರಿಚಯ ಇಲ್ಲಿದೆ

ಮಡಿಕೇರಿ ಆಕಾಶವಾಣಿ ಎಂದಾಗ ಸುಬ್ರಾಯ ಸಂಪಾಜೆ ಅವರ ಧ್ವನಿ ನೆನಪಾಗುತ್ತದೆ. ಸುಮಾರು ಮೂವತ್ತು ವರ್ಷ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ನಿರ್ವಹಿಸಿ ಕಳೆದ ಮೇ 31ರಂದು ನಿವೃತ್ತಿ ಜೀವನ ನಡೆಸುತ್ತಿದ್ದು. ಜು. 22 ರಂದು ಸುಳ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನಗೊಳ್ಳಲಿದ್ದಾರೆ.

. . . . . . . . .

ಅವರು ದಕ್ಷಿಣ ಕನ್ನಡದ ಸುಳ್ಯ ತಾಲೂಕು ಸಂಪಾಜೆ ಗ್ರಾಮದವರು. ಜನನ 01.06.1965. ಇವರ ತಂದೆ ಲಕ್ಷ್ಮಣ ಆಚಾರ್ಯರು. ತಾಯಿ ಪಾರ್ವತಿ, ಆರು ಮಂದಿ ಮಕ್ಕಳಲ್ಲಿ ಇವರು ನಾಲ್ಕನೆಯವರು. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನು ಸಂಪಾಜೆಯಲ್ಲಿ ಪೂರ್ಣಗೊಳಿಸಿದ ಸುಬ್ರಾಯರು ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಬಿ.ಎ. ಓದಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. ಮರಗೋಡು, ಸಂಪಾಜೆ, ಉಡುಪಿ ಮತ್ತು ಕೋಟ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ದುಡಿದು 1995 ರಲ್ಲಿ
ಮಡಿಕೇರಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ನೇಮಕಗೊಂಡರು. ಬಾನುಲಿಯ ಸೇವೆಯಲ್ಲಿ ತನ್ನನ್ನು ನಿಷ್ಠೆಯಿಂದ ತೊಡಗಿಸಿಕೊಂಡ ಇವರು ಲಕ್ಷಾಂತರ ಕೇಳುಗರ ಪ್ರೀತಿಗೆ ಪಾತ್ರರಾಗಿದ್ದಾರೆ. ರೇಡಿಯೋದಲ್ಲಿ ನಿತ್ಯ ಪ್ರಸಾರ ಆಗುವ ಸಾಮಾಜಿಕ ಕಾಳಜಿ ಉಳ್ಳ ಸಂದೇಶಗಳನ್ನು ಸಿದ್ಧ ಪಡಿಸಿದವರು ಕೂಡ ಶ್ರೀಯುತ ಸಂಪಾಜೆಯವರು. ಪರಿಸರ ಸಂರಕ್ಷಣೆ, ಸಾಮಾಜಿಕ ನೀತಿ , ಕಾನೂನು ಹೀಗೆ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಮುನ್ನೂರ ಐವತ್ತು ಸಂದೇಶಗಳನ್ನು ಇವರ ಮತ್ತು ಇವರ ಸಹೋದ್ಯೋಗಿಗಳ ಧ್ವನಿಯಲ್ಲಿ ರೇಡಿಯೋದಲ್ಲಿ ನಾವು ಕೇಳಬಹುದು. ಭಾರತದ ಆಕಾಶವಾಣಿ ಕೇಂದ್ರಗಳಲ್ಲಿ ಅತಿ ಹೆಚ್ಚು ರೇಡಿಯೋ ಸಂದೇಶಗಳನ್ನು ಸಿದ್ಧಪಡಿಸಿದ ಕೀರ್ತಿ ಇವರಿಗೇ ಸಲ್ಲುತ್ತದೆ. 2014 ರಲ್ಲಿ ರಾಜ್ಯಮಟ್ಟದ ವಾರ್ಷಿಕ ಕಾರ್ಯಕ್ರಮ ಸ್ಪರ್ಧೆಯಲ್ಲಿ ಇವರು ರಾಜ್ಯ ಮಟ್ಟದ ಪುರಸ್ಕಾರ ಪಡೆದರು. ಸುಮಾರು ಮೂವತ್ತು ವರ್ಷ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ನಿರ್ವಹಿಸಿ ಕಳೆದ ಮೇ 31ರಂದು ನಿವೃತ್ತರಾದರು.

. . . . . . .

ಗಮಕ, ಯಕ್ಷಗಾನ ಹಾಡುಗಾರಿಕೆ ಮತ್ತು ಸಾಹಿತ್ಯ ಇವು ಸುಬ್ರಾಯ ಸಂಪಾಜೆಯವರ ಆಸಕ್ತಿಯ ಕ್ಷೇತ್ರಗಳು. ಭಾಗವತರಾಗಿ ಇವರು ನೂರಾರು ಆಟ-ಕೂಟಗಳಲ್ಲಿ ಭಾಗವಹಿಸಿದ್ದಾರೆ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಇವರ ಯಕ್ಷಗಾನ ಗುರುಗಳು. ಇವರ ‘ಪುಟ್ಟಕ್ಕ’ ಕಿರುಕಾದಂಬರಿಗೆ ರಾಜ್ಯಮಟ್ಟದ ಪುರಸ್ಕಾರ ಲಭಿಸಿದೆ. ಪುರಾಣ ಪಾತ್ರಗಳನ್ನು ಪರಿಚಯಿಸುವ ‘ಪುರಾಣಯಾನ’ ವಿದ್ವದ್ವಲಯದಲ್ಲಿ ಇವರಿಗೆ ಗೌರವ ತಂದುಕೊಟ್ಟ ಕೃತಿ. ಪುತ್ತೂರಿನ ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನವು ಪುರಾಣಯಾನ ಕೃತಿಯನ್ನು ಪ್ರಕಾಶನಗೊಳಿಸಿದೆ. ಯಕ್ಷಗಾನ ಅಧ್ಯಯನ ಕೇಂದ್ರಗಳಲ್ಲಿ ಈ ಕೃತಿ ಪಠ್ಯಪುಸ್ತಕವಾಗಿಯೂ ಮನ್ನಣೆಗೆ ಪಾತ್ರವಾಗಿದೆ. ‘ರಸ ರಾಮಾಯಣ’ ರಾಮಾಯಣಕ್ಕೆ ಸಂಬಂಧಿಸಿದ 1385 ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳನ್ನು ಒಳಗೊಂಡ ಕೃತಿ. ಪ್ರಕೃತ ‘ಕೊಡಗು ಕ್ವಿಝ್’ ಕೊಡಗು ಜಿಲ್ಲೆಗೆ ಸಂಬಂಧಿಸಿದ 1724 ಪ್ರಶ್ನೆಗಳು ಮತ್ತು ಅವುಗಳ ಉತ್ತರವನ್ನು ಒಳಗೊಂಡ ಮಾಹಿತಿ ಕೋಶ ರಚಿಸಿದ್ದಾರೆ.

ಇವರ ಸ್ವಗೃಹ ‘ಸಮೃದ್ಧಿ’ ಕಾಸರಗೋಡು ತಾಲೂಕು, ದೇಲಂಪಾಡಿ ಗ್ರಾಮದಲ್ಲಿದೆ. ಇವರು ಪತ್ನಿ ಪೂರ್ಣಿಮಾ. ಮಕ್ಕಳಾದ ಸಮನ್ವಯ ಮತ್ತು ಸಮನ್ವಿತಾ ರೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading