Ad Widget

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಗೃಹ ಸಚಿವರಾದ ಡಾ| ಜಿ.ಪರಮೇಶ್ವರ್

ಸ್ವಾಗತ ಕೋರಿದ ಅಧಿಕಾರಿಗಳು ಹಾಗೂ ಮುಖಂಡರು

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ” : ಡಾ| ಜಿ.ಪರಮೇಶ್ವರ್

ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ| ಜಿ.ಪರಮೇಶ್ವರ್ ಅವರು ಜು.08 ರಂದು ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಾ ರೀತಿಯಲ್ಲೂ ಉತ್ತಮವಾಗಿದೆ. ಕೇವಲ ಹೇಳಿಕೆಯಾಗಿ ನಾನು ಈ ರೀತಿಯಾಗಿ ಹೇಳುತ್ತಿಲ್ಲ. ಇತ್ತೀಚೆಗೆ ನಡೆದ ಕಾನ್ಫರೆನ್ಸ್ ನಲ್ಲಿ ಮುಖ್ಯ ಮಂತ್ರಿಗಳ ಉಪಸ್ಥಿತಿಯಲ್ಲಿ ವಿವಿಧ ಅಪರಾಧಗಳ ಬಗ್ಗೆ ಮಾಹಿತಿ ಪಡೆದ ವೇಳೆ ಕ್ರೈಂ ರೇಟ್ ಕಡಿಮೆಯಾಗಿರುವುದು ಕಂಡುಬಂದಿದೆ. ಕಾನೂನನ್ನು ಬಹಳ ಕಠಿಣವಾಗಿ ತೆಗೆದುಕೊಂಡಿದ್ದರಿಂದ ಕ್ರೈಂ ರೇಟ್ ಕಡಿಮೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗಮನಿಸಿದಾಗ ಕಠಿಣ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರಲು ಸಾಧ್ಯವಾಗಿದೆ. ವಿಶೇಷ ಕಾರ್ಯಪಡೆ ರಚನೆಯಿಂದ ಶಾಂತಿ-ಸುವ್ಯವಸ್ಥೆಗೆ ಪೂರಕವಾಗಿದೆ. ಈ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಬೆಂಗಳೂರು ಬಳಿಕ ಬೆಳೆಯುವಲ್ಲಿ ಅವಕಾಶಗಳಿರುವ ಕರಾವಳಿಯಲ್ಲಿ ಶಾಂತಿ ಅತೀ ಮುಖ್ಯ, ಅದಕ್ಕಾಗಿ ಈ ಭಾಗಕ್ಕೆ ಹೆಚ್ಚು ಗಮನ ಹರಿಸುತ್ತೇವೆ. ಒಂದೆರಡು ಜನ ಬೇರೆ ರೀತಿಯಲ್ಲಿ ಇದ್ದರೂ ಜಿಲ್ಲೆಯ ಜನ ಉತ್ತಮವಾಗಿರುವರು. ಪೋಲೀಸರ ವರ್ಗಾವಣೆಯಿಂದ ಏನು ಪರಿಣಾಮ, ಎಲ್ಲರೂ ಚೆನ್ನಾಗಿದ್ದರೆ ಪೋಲೀಸ್ ನವರು ಯಾಕೆ ತಪ್ಪು ಮಾಡಿದವರನ್ನು ಸರಿಪಡಿಸಲು ಪೋಲೀಸ್ ಇಲಾಖೆ ಇದೆ. ಅದಕ್ಕಾಗಿ ಕಾನೂನು, ನಿಯಮಗಳನ್ನು ರೂಪಿಸಲಾಗುತ್ತಿದೆ. ಮಂಗಳೂರಿನಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಎಲ್ಲಾ ವರ್ಗದ ಜನರೊಂದಿಗೆ ಸಭೆ ನಡೆಸುತ್ತೇವೆ. ಅಲ್ಲಿ ಸಲಹೆಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪೋಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ನಿವಾರಿಸಲು ನೇಮಕಾತಿ ನಡೆಯುತ್ತಿದೆ. 545 ಎಸ್.ಐ ಗಳಿಗೆ ಆದೇಶ ನೀಡಲಾಗಿದ್ದು, ತರಬೇತಿಗೆ ಹೋಗಿದ್ದಾರೆ. ಇನ್ನೂ 402 ಹುದ್ದೆಗಳಿಗೆ ಆದೇಶವಾಗಲಿದೆ. 10-15 ಸಾವಿರ ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇದೆ ಅದನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚುವರಿ ಪೋಲೀಸ್ ಹೊರಠಾಣೆ ಬೇಡಿಕೆ ಬಗ್ಗೆ ಎಸ್.ಪಿ ಅವರಿಂದ ಪ್ರಸ್ತಾವನೆ ಬಂದಲ್ಲಿ ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಮಂಗಳೂರಿನ ಎಸ್.ಪಿ ಕಛೇರಿಯನ್ನು ಪುತ್ತೂರಿಗೆ ವರ್ಗಾಯಿಸಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ಪರೀಶೀಲನೆ ನಡೆಯುತ್ತಿದೆ. ಸಾಧಕ-ಬಾಧಕಗಳನ್ನು ಸಂಗ್ರಹಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಈಗ ಎರಡು ಠಾಣೆಗಳಿಗೆ ಒಂದು 112 ಪೋಲೀಸ್ ವಾಹನ ಇದ್ದು, ಒಂದು ಠಾಣೆಗೆ ಒಂದು ವಾಹನ ಬೇಕು ಎಂಬ ಬೇಡಿಕೆಯಂತೆ 112 ವಾಹನವನ್ನು ಹೆಚ್ಚು ಮಾಡುತ್ತೇವೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ 12 ವರ್ಷಗಳಾದ ವಾಹನಗಳನ್ನು ತೆಗೆಯುತ್ತಿದ್ದೇವೆ, ಅಲ್ಲಿಗೆ ಹೊಸ ವಾಹನಗಳನ್ನು ನೀಡಲಾಗುತ್ತಿದೆ. 112 ಉಪಯೋಗ ಜಾಸ್ತಿ ಇದ್ದ ಆ ವಾಹನಗಳನ್ನು ಹೆಚ್ಚು ಮಾಡುತ್ತೇವೆ. ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆ ಬಗ್ಗೆ ಗಮನ ಹರಿಸುತ್ತೇವೆ” ಎಂದರು.
ದೇವಸ್ಥಾನದ ಆದಿಶೇಷ ಗೆಸ್ಟ್ ಹೌಸ್ ಗೆ ಬಂದ ಗೃಹ ಸಚಿವರನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಶೋಕ್ ನೆಕ್ರಾಜೆ, ಡಾ| ರಘು, ಮಹೇಶ್ ಕುಮಾರ್ ಕರಿಕ್ಕಳ, ಸೌಮ್ಯ ಭರತ್, ಪ್ರವೀಣ್ ರೈ, ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಮಾಸ್ಟರ್ ಪ್ಲಾನ್ ಸಮಿತಿಯ ಲೋಲಾಕ್ಷ ಕೈಕಂಬ, ಪವನ್.ಎಂ.ಡಿ, ಕಡಬ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಸುದೀರ್ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಷ್, ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಅಭ್ಯರ್ಥಿಯಾಗಿದ್ದ ಜಿ.ಕೃಷ್ಣಪ್ಪ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್, ಸುಳ್ಯ ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಮುಂತಾದವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಅರುಣ್ ನಾಗೇಗೌಡ, ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ, ಸುಬ್ರಹ್ಮಣ್ಯ ಎಸ್.ಐ ಕಾರ್ತಿಕ್, ಕಿಶೋರ್ ಕುಮಾರ್ ಅರಂಪಾಡಿ, ಕಾರ್ತಿಕ್, ಪರಮೇಶ್ವರ ಕೆಂಬಾರೆ, ಹರ್ಷಿತ್ ಕೊರಂಬಟ, ಕೃಷ್ಣಮೂರ್ತಿ ಭಟ್, ದಿನೇಶ್ ಎಣ್ಣೆಮಜಲು, ಗೋಪಾಲ್ ಎಣ್ಣೆಮಜಲು, ಪ್ರಶಾಂತ್ ಮರುವಂಜ, ಜಿ.ಕೆ ಹಮೀದ್, ಶೇಷಕುಮಾರ್, ದೇವಸ್ಥಾನದ ಶಿಷ್ಟಾಚಾರ ವಿಭಾಗದ ಜಯರಾಮ್ ರಾವ್, ಪ್ರಮೋದ್ ಮುಂತಾದವರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading