
ಅಂತಾರಾಜ್ಯ ಸಂಪರ್ಕಿಸುವ ಸುಳ್ಯ ಕೋಲ್ಚಾರು ಬಂದ್ಯಡ್ಕ ರಸ್ತೆಯಲ್ಲಿ ಪಯಸ್ವಿನಿ ನದಿಗೆ ನಾಗಪಟ್ಟಣದಲ್ಲಿ ನಿರ್ಮಿಸಲಾದ ಸೇತುವೆ ಹಲವು ಕಡೆ ಶಿಥಿಲಗೊಂಡಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಸೇತುವೆಯ ಮೇಲ್ಭಾಗದ ಅಲ್ಲಲ್ಲಿ ಕಾಂಕ್ರೀಟ್ ಎದ್ದು ಹೋಗಿದ್ದು ತಳಭಾಗ ಕಾಣಿಸುತ್ತಿದೆ. ಪಾದಾಚಾರಿಗಳು ಎಚ್ಚರ ತಪ್ಪಿದರೇ ಕಾಲು ಮುರಿದುಕೊಳ್ಳುವ ಹಂತ ತಲುಪಿದೆ. ಸೇತುವೆಯ ಮೇಲೆ ನಿಂತಾಗ ಅಟೋ ರಿಕ್ಷಾ ಸಂಚರಿಸಿದರೂ ಘನ ವಾಹನ ಸಂಚರಿಸಿಂತ ಅನುಭವವಾಗುತ್ತಿದೆ.
ಈ ಬಗ್ಗೆ ಆಲೆಟ್ಟಿ ಗ್ರಾ.ಪಂ.ಸದಸ್ಯ ಧರ್ಮಪಾಲ ಕೊಯಿಂಗಾಜೆ ಅವರನ್ನು ಸಂಪರ್ಕಿಸಿದಾಗ “ನಾಗಪಟ್ಟಣ ಸೇತುವೆಯ ದುರಸ್ತಿಯ ಬಗ್ಗೆ ಆಲೆಟ್ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ನಾಯಕರು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ ಮನವಿಯನ್ನು ಸಲ್ಲಿಸಿದ್ದರು. ಅ ಮನವಿಗೆ ಸ್ಪಂದಿಸಿ ಸಚಿವರು 2024-25 ನೇ ಸಾಲಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ಹಾನಿಗೊಳಗಾದ ಸೇತುವೆಗಳ ದುರಸ್ತಿಗಾಗಿ ಲೆಕ್ಕಾಸಿರ್ಶಿಕೆ 3054-03-102-0-01-200 ರಾಜ್ಯ ಹೆದ್ದಾರಿ ಸೇತುವೆ ನಿರ್ವಹಣೆ ಅಡಿಯಲ್ಲಿ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ನಾಗಪಟ್ಟಣ ಎಂಬಲ್ಲಿಯ ಪಯಸ್ವಿನಿ ಸೇತುವೆಯ ದುರಸ್ಥಿ ಕಾಮಗಾರಿಗೆ ಕರ್ನಾಟಕ ಘನ ಸರಕಾರದಿಂದ ದಿನಾಂಕ 30/09/2024 ರಂದು ರೂಪಾಯಿ 75 ಲಕ್ಷ ಅನುದಾನ ಮಂಜೂರು ಗೊಂಡಿರುತ್ತದೆ. ಇದರ ಕಾಮಗಾರಿಯು ಇನ್ನೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದಿದ್ದಾರೆ.
ಈ ಬಗ್ಗೆ ಶಾಸಕರಾದ ಭಾಗೀರಥಿ ಮುರುಳ್ಯ ಅವರನ್ನು ಸಂಪರ್ಕಿಸಿದಾಗ “ದುರಸ್ತಿಗೆ ಅನುದಾನ ಬಿಡುಗಡೆ ಆಗಿದೆ” ಎಂದಿದ್ದಾರೆ.
