
ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಸುಳ್ಯದ ಅಗ್ನಿಶಾಮಕ ದಳದವರು ದಿನಾಂಕ 24.02.2025ರಂದು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನೀಡಿದರು.ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಬೆಂಕಿಯನ್ನು ನೀರು, ಮರಳು ಅಥವಾ ಕಾರ್ಬನ್ ಡೈಆಕ್ಸೈಡ್ ಬಳಸಿ ನಂದಿಸುವ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಅವಘಡಗಳನ್ನು ನಿಯಂತ್ರಿಸುವ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮನವರಿಕೆ ಮಾಡಿಕೊಟ್ಟರು.‘ಮನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಅಡುಗೆ ಅನಿಲ ಸಿಲಿಂಡರ್ ಮತ್ತು ಅನಿಲ ಗೀಜರ್‌ಗಳ ಬಳಕೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಮೊಬೈಲ್ ಚಾರ್ಜರ್, ಕಟ್ಟಡಗಳಲ್ಲಿ ಬೆಂಕಿ ಅವಘಡ, ಸಿ.ಎನ್.ಜಿ ವಾಹನಗಳು ಹಾಗೂ ಇನ್ನಿತರ ಅಗ್ನಿ ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಅಪಾಯದಿಂದ ಪಾರಾಗಲು ಬೇಕಾದ ಸೂಕ್ತ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು. ಅಡುಗೆ ಆದ ನಂತರ ಅಡುಗೆ ಅನಿಲದ ಸಿಲಿಂಡರ್ ಆಫ್ ಮಾಡಬೇಕು. ಅಡುಗೆ ಮನೆಯಲ್ಲಿ ಮೊಬೈಲ್ ಬಳಸಬಾರದು. ಸಣ್ಣ ಅಜಾಗರೂಕತೆ ದೊಡ್ಡ ಅವಘಡಕ್ಕೆ ಕಾರಣವಾಗಬಹುದು. ಹೀಗಾಗಿ, ಲಕ್ಷ್ಯ ವಹಿಸಬೇಕು. ತುರ್ತು ಸಂದರ್ಭದಲ್ಲಿ 101 ಅಥವಾ 112 ಸಹಾಯವಾಣಿಗೆ ಕರೆ ಮಾಡಬೇಕು. ಇದರಿಂದ ಹೆಚ್ಚಿನ ಅನಾಹುತಗಳನ್ನು ತಡೆಗಟ್ಟಲು ಸಾಧ್ಯ’ ಎಂದು ಸುಳ್ಯದ ಅಗ್ನಿಶಾಮಕ ಅಧಿಕಾರಿಗಳಾದ ಶ್ರೀ. ಬಿ. ಸೋಮನಾಥ್ ಹಾಗೂ ಸುಳ್ಯದ ಪ್ರಮುಖ ಅಗ್ನಿಶಾಮಕ ಅಧಿಕಾರಿಗಳಾದ ಶ್ರೀ. ನಾಗರಾಜ್ ಪೂಜಾರಿ ತಿಳಿಸಿದರು. ಈ ಕಾರ್ಯಕ್ರಮ ವನ್ನು ಕಾಲೇಜಿನ ಶಲ್ಯತಂತ್ರ ವಿಭಾಗ ಮುಖ್ಯಸ್ಥರಾದ ಡಾ. ಹರ್ಷವರ್ಧನ್ ಕೆ. ಸಂಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸುಳ್ಯ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಗಳು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ., ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಡಾ. ಹರ್ಷಿತಾ ಎಂ., ಎನ್.ಎಸ್. ಎಸ್. ಯೋಜನಾಧಿಕಾರಿ ಡಾ. ಪ್ರಮೋದ್ ಪಿ.ಎ., ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
