Ad Widget

“ಹೆಲಿಕಾಪ್ಟರ್ ಪೋಷಕತ್ವ” ಎಂಬ ಪೆಡಂಬೂತ

ಮಕ್ಕಳನ್ನು ಬೆಳೆಸುವುದು ಅತಿ ಸುಲಭದ ಕೆಲಸವಲ್ಲ ಎಂಬ ಕಟು ಸತ್ಯ ಎಲ್ಲ ಹೆತ್ತವರಿಗೂ ಗೊತ್ತಿದೆ. ಹಾಗೆಂದ ಮಾತ್ರಕ್ಕೆ ಮಕ್ಕಳನ್ನು ಸಾಕಿ ಸಲಹಿ ಸಂಸ್ಕಾರವಂತರನ್ನಾಗಿ, ವಿದ್ಯಾವಂತರನ್ನಾಗಿ ಮಾಡುವುದು ಕಬ್ಬಿಣದ ಕಡಲೆಯೂ ಅಲ್ಲ ಎಂಬುದನ್ನೂ ಹೆತ್ತವರು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಪ್ರತಿಯೊಬ್ಬ ಹೆತ್ತವರು ತನ್ನ ಮಕ್ಕಳು ಎಲ್ಲರಿಗಿಂತ ಮುಂದೆ ಇರಬೇಕು ಎಂದು ಬಯಸುವುದು ಸಹಜವೇ. ಆದರೆ ಅದಕ್ಕೆ ಬೇಕಾಗಿ ಮುಗ್ಧ ಮಗುವಿನ ಮೇಲೆ ಇನ್ನಿಲ್ಲದ ಒತ್ತಡ ಹಾಕಿದಲ್ಲಿ ಮಗುವಿನ ಮನಸ್ಸಿನ ಮೇಲೆ ಋಣತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿದಿದೆ. ಯುನಿವರ್ಸಿಟಿ ಆಫ್ ಮಿನಸೋಟ ಇದರ ಸಂಶೋಧಕರಾದ ಡಾ|ನಿಕೋಲ್ ಪೆರ್ರಿ ಅವರ ಪ್ರಕಾರ ಅತಿಯಾದ ಉಸಿರುಗಟ್ಟುವ ಪೋಷಕತ್ವದಿಂದ ಮಗುವಿನ ಮೇಲೆ ಭಾವನಾತ್ಮಕ ಪರಿಣಾಮ ಬೀರಿ ತನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತದೆ ಎಂದು ತಿಳಿದು ಬಂದಿದೆ.

. . . . . . . . .

ಏನಿದು ಹೆಲಿಕಾಪ್ಟರ್ ಪೋಷಕತ್ವ?

ಸದಾ ಮಗುವಿನ ಸುತ್ತ ಗಿರಾಕಿ ಹೊಡೆಯುತ್ತಾ ಪ್ರತಿಯೊದು ಸಣ್ಣ ವಿಚಾರಕ್ಕೂ ಮಗುವಿಗೆ ಸ್ವತಂತ್ರ ನೀಡದೆ ಸದಾ ಕಾಲ ಮಗುವಿನ ಮೇಲೆ ಗಮನವಿಟ್ಟು ಹೆತ್ತವರೇ ನಿರ್ಧಾರ ತೆಗೆದುಕೊಳ್ಳುವ ನಡವಳಿಕೆಯನ್ನು “ಹೆಲಿಕಾಪ್ಟರ್ ಪೋಷಕತ್ವ” ಎನ್ನುತ್ತಾರೆ. ಹೇಗೆ ಹೆಲಿಕಾಪ್ಟರ್ ಅಥವಾ ವಿಮಾನ ನಮ್ಮ ತಲೆ ಮೇಲೆ ಸುತ್ತುತ್ತಾ ಹಾರಾಡುತ್ತದೆಯೇ, ಮತ್ತು ನಾವು ಹೋದೆಡೆಯಲ್ಲಾ ನಮ್ಮ ತಲೆ ಮೇಲೆ ಹಾರಾಡಿದಂತೆ ಅನಿಸುತ್ತದೆಯೇ ಮತ್ತು ನಮ್ಮ ಕಣ್ಣಿಗೆ ಕಾಣದಿದ್ದರೂ ಬರಿ ಶಬ್ದದಿಂದಲೂ ನಮ್ಮ ತಲೆಯ ಸುತ್ತ ಹಾರಾಡುತ್ತಿರುತ್ತದೆ ಎಂದು ಭಾಸವಾಗುತ್ತದೆಯೇ, ಅದೇ ರೀತಿ ಈ ಹೆಲಿಕಾಪ್ಟರ್ ಪೋಷಕತ್ವವು ಅಷ್ಟೇ. ಮಗು ಯಾವತ್ತೂ ತನ್ನ ಹೆತ್ತವರ ತನ್ನನ್ನು ಗಮನಿಸುತ್ತಿರುತ್ತಾರೆ ಎಂಬ ಭ್ರಮೆಯಲ್ಲಿಯೇ ಇರುತ್ತದೆ. ಮಗುವಿನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಮೂಗು ತೂರಿಸುವುದು ಮತ್ತು ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳನ್ನು ಮಗುವಿಗೆ ಹೇಳಿಕೊಡುವುದರಿಂದ, ಮಗು ತನ್ನದೇ ಆದ ಸ್ವಂತ ನಿರ್ಧಾರ ತೆಗೆದುಕೊಳ್ಳವಂತಹಾ ಅವಕಾಶದಿಂದ ವಂಚಿತವಾಗುತ್ತದೆ. ಇದನ್ನೇ ಹೆಲಿಕಾಪ್ಟರ್ ಪೋಷಕತ್ವ ಎನ್ನುತ್ತಾರೆ.

ಏನು ತೊಂದರೆಗಳು?

  1. ಸದಾಕಾಲ ಹೆತ್ತವರೇ ನಿರ್ಧಾರ ತೆಗೆದುಕೊಳ್ಳುವುದರಿಂದ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ವಿಷಮ ಪರಿಸ್ಥಿತಿಗಳಲ್ಲಿ ಮಗು ಭಾವನಾತ್ಮಕವಾಗಿ ಸೋತು ಹೋಗಿ ಬೇಗನೆ ಸೋಲನ್ನು ಸ್ವೀಕರಿಸುತ್ತದÉ.
  2. ಮಗುವಿನ ‘ಸ್ವಂತಿಕೆ’ ಅಥವಾ ಸ್ವಂತ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವ್ಯಕ್ತ ಭಯ ಮತ್ತು ಸಂಕೋಚ ಉಂಟಾಗುತ್ತದೆ. ಎಲ್ಲಿ ತಾನು ತಪ್ಪು ಮಾಡುತ್ತೇನೆಯೇ ಅಥವಾ ಎಡವಿ ಬೀಳುತ್ತೇವೆ ಎಂಬ ಭಯದಲ್ಲಿಯೇ ಬದುಕು ಕಳೆದು ಹೋಗುತ್ತದೆ.
  3. ಮಗು ಸೋಲನ್ನು ನೈಜ ಸ್ಪೂರ್ತಿಯಲ್ಲಿ ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತದೆ. ಸೋಲನ್ನು ಗೆಲುವಿನ ಸೋಪಾನವಾಗಿ ತೆಗೆದುಕೊಳ್ಳುವ ಮನೋಸ್ಥಿತಿ ಮಗುವಿಗೆ ತಿಳಿಯುವುದೇ ಇಲ್ಲ. ಸೋಲು ಗೆಲುವು ಆಟದ-ಪಾಠದ ಅವಿಬಾಜ್ಯ ಅಂಗ ಎಂಬುದನ್ನು ಮಾನಸಿಕವಾಗಿ ಒಪ್ಪಿಕೊಳ್ಳಲೇ ಸಾಧ್ಯವಾಗುವುದೇ ಇಲ್ಲ. ಸೋಲನ್ನೇ ಸರ್ವಸ್ವ ಎಂದು ತಿಳಿದು ಮಾನಸಿಕವಾಗಿ ದೈಹಿಕವಾಗಿ ಮತ್ತಷ್ಟು ಕುಗ್ಗಿ ಹೋಗುತ್ತದೆ.
  4. ಸದಾಕಾಲ ಒತ್ತಡದಲ್ಲಿಯೇ ಮಗು ಬದುಕುತ್ತದೆ. ಶಾಲೆಯ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ, ಸೋತಾಗ, ಬದುಕಿನ ಪರೀಕ್ಷೆಯನ್ನು ಗೆಲ್ಲಲು ವಿಫಲವಾಗುತ್ತದೆ. ಪರೀಕ್ಷೆಯನ್ನು ಯುದ್ಧದಂತೆ ಎದುರಿಸಿ ಸೋತಾಗ ಹತಾಶರಾಗಿ ಮಗದೊಮ್ಮೆ ಪರೀಕ್ಷೆ ಎದುರಿಸಲು ಹೆಣಗಾಡುವ ಪರಿಸ್ಥಿತಿಗೆ ಮಗು ಪರಿತಪಿಸುತ್ತದೆ.
  5. ಹೆಲಿಕಾಪ್ಟರ್ ಪೋಷಕತ್ವದಲ್ಲಿ ಬೆಳೆದ ಮಕ್ಕಳು ಮಾನಸಿಕವಾಗಿ ಬಹಳ ಬೇಗ ಸೋತು ಬಿಡುತ್ತಾರೆ. ಧೈರ್ಯದಿಂದ ಏಕಾಂಗಿಯಾಗಿ ಒಬ್ಬಂಟಿಯಾಗಿ ಎದುರಿಸುವ ಗೋಜಿಗೆ ಹೋಗದೆ, ಜೀವನದ ಸವಾಲುಗಳಿಗೆ ಬಹಳ ಬೇಗ ಸೋತು ಹೋಗಿ ಅವಕಾಶಗಳನ್ನು ಕೈ ಚೆಲ್ಲುತ್ತಾರೆ.
  6. ಈ ರೀತಿ ಬೆಳೆದ ಮಕ್ಕಳು ಜೀವನದಲ್ಲಿ ಯಾವತ್ತೂ ರಿಸ್ಕ್ ತೆಗೆದುಕೊಳ್ಳಲು ಬಯಸುವುದೇ ಇಲ್ಲ. ಸ್ವಂತ ನಿರ್ಣಯ ತೆಗೆದುಕೊಳ್ಳಲು ಮೊದಲೇ ಧೈರ್ಯವಿಲ್ಲ, ಅದರ ಜೊತೆಗೆ ಎಲ್ಲಿಯಾದರೂ ಸೋತು ಹೋದರೆ ಎಂಬ ಅವ್ಯಕ್ತ ಭಯದಿಂದ ಸದಾ ಹಿಂಜರಿಕೆಯಲ್ಲಿಯೇ ಜೀವನದ ಪಯಣದಲ್ಲಿ ಬೇಗ ಸೋತು ಬಿಡುತ್ತಾರೆ.
  7. ಕಷ್ಟದ ಪರಿಸ್ಥಿತಿಗೆ ಹೊಂದಿಕೊಳ್ಳುವ ಮನೋಸ್ಥಿತಿ ಇಂತಹಾ ಮಕ್ಕಳಿಗೆ ಬರುವುದೇ ಇಲ್ಲ. ಸೋತ ಕೂಡಲೇ ಹತಾಶರಾಗಿ ಕೈ ಚೆಲ್ಲಿ ಶಸ್ತ್ರ ತ್ಯಾಗ ಮಾಡುತ್ತಾರೆ. ಸದಾಕಾಲ ಹೆತ್ತವರ ಸಹಾಯದಿಂದ ಸುಲಭವಾಗಿ ಶೌಲಾದಿನಗಳಲ್ಲಿ ಗೆದ್ದು ಬೀಗುತ್ತಿದ್ದ ಮಕ್ಕಳು, ಜೀವನದ ಪರೀಕ್ಷೆಯಲ್ಲಿ ಸೋತಾಗ ಎದ್ದು ನಿಲ್ಲುವ ಪ್ರಯತ್ನಕ್ಕೆ ಕೈ ಹಾಕುವುದೇ ಇಲ್ಲ. ಸ್ಪರ್ಧಾತ್ಮಕ ಮನೋಭಾವ, ಧನಾತ್ಮಕ ಚಿಂತನೆ ಮತ್ತು ಎಲ್ಲವನ್ನು ಎದುರಿಸಬಲ್ಲೆ ಎಂಬ ಛಲ ಇವೆಲ್ಲದರ ಕೊರತೆಯಿಂದಾಗಿ ಜೀವನ ಅಖಾಡದಲ್ಲಿ ಮಕಾಡೆ ಮಲಗುತ್ತಾರೆ. ಸದಾ ಗೆಲ್ಲಬೇಕೆಂಬ ಚಿಂತನೆ, ಋಣತ್ಮಾಕ ಚಿಂತನೆ ಮತ್ತು ಎಲ್ಲಿಯಾದರೂ ಸೋತರೆ ಎಂಬ ಭಯದಿಂದಾಗಿ ಇಂತಹ ಮಕ್ಕಳು ಸಮಾಜಕ್ಕೆ ಆಸ್ತಿಯಾಗದೆ ಹೊರೆಯಾಗುತ್ತಾರೆ.

ಪೋಷಕರು ಏನು ಮಾಡಬೇಕು?

  1. ನಿಮ್ಮ ಮಕ್ಕಳಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿ. ಅವರಿಗೆ ಅವರದ್ದೇ ಆದ ಆಯ್ಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸ್ವತಂತ್ರ ನೀಡಬೇಕು. ಮಕ್ಕಳಿಗೆ ಸರಿ ತಪ್ಪುಗಳ ನಿರ್ಧಾರ ಮಾಡಲು ಹೆತ್ತವರು ಸಹಾಯ ಮಾಡಬೇಕು. ಹೊರತು ಹೆತ್ತವರೇ ನಿರ್ಧಾರ ತೆಗೆದುಕೊಳ್ಳಬಾರದು.
  2. ಮಕ್ಕಳನ್ನು ದೊಡ್ಡವರ ರೀತಿಯಲ್ಲಿಯೇ ಕೆಲವೊಮ್ಮೆ ಕಾಣಬೇಕು. ಇದರರ್ಥ ಅವರನ್ನು ಅವರ ಪಾಡಿಗೆ ಸಂಪೂರ್ಣವಾಗಿ ಬಿಟ್ಟು ಬಿಡುವುದೆಂದಲ್ಲ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಅವರೇ ಜವಾಬ್ದಾರರು ಮತ್ತು ಅವರೇ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರರು ಎಂಬ ಭಾವನೆಯನ್ನು ಮಕ್ಕಳಲ್ಲಿ ಬರುವಂತೆ ಹೆತ್ತವರು ಮಾಡಬೇಕು. ಮಕ್ಕಳು ತಮ್ಮ ಹೋಮ್‍ವರ್ಕ್, ದಿನನಿತ್ಯದ ದೈನಂದಿನ ಕ್ರಿಯೆಗಳು, ಬಟ್ಟೆ ಬರೆಗಳ ಆಯ್ಕೆ ಎಲ್ಲದರ ಬಗ್ಗೆ ಸಂಪೂರ್ಣ ಸ್ವಾತಂತ್ರ ನೀಡಬೇಕು. ಹಾಗೆಂದ ಮಾತ್ರಕ್ಕೆ ಸೂಕ್ತ ಸಮಯದಲ್ಲಿ ಸರಿಯಾದ ಮಾರ್ಗದರ್ಶನ ನೀಡಬಾರದು ಎಂದಲ್ಲ. ಅಗತ್ಯವಿದ್ದಾಗ ಸರಿಯಾಗಿ ಮಾರ್ಗದರ್ಶನ ನೀಡಬೇಕು. ಶಾಪಿಂಗ್‍ಗೆ ಹೋದಾಗ ಕೇಳಿದಷ್ಟು ಹಣ ಕೊಟ್ಟು ಧಾರಳತನ ಮೆರೆಯುವುದು ಜಾಣತನವಲ್ಲ. ಮಕ್ಕಳಿಗೂ ಹಣದ ಮೌಲ್ಯದ ಅರಿವು ಬರುವಂತೆ ಮಾಡಬೇಕು.
  3. ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಯುವಂತೆ ನಿರ್ದೇಶನ ಅಥವಾ ಮಾರ್ಗದರ್ಶನ ನೀಡಬೇಕು. ಆದರೆ ಯಾವತ್ತೂ ಅವರ ದಾರಿಯನ್ನು ಹೆತ್ತವರು ನಡೆಯಬಾರದು. ಮುಂದೆ ನಿಂತು ಮಾರ್ಗದರ್ಶನ ಮಾಡಬೇಕೆ ಹೊರತು, ಕೈ ಹಿಡಿದು ನಡೆಸುವ ಅತಿಯಾದ ಜಾಣತನ ತೋರಬಾರದು. ಮಗುವಿಗೆ ಸಮಸ್ಯೆಗಳು ತೋರಿದಾಗ ಅದನ್ನು ಪರಿಹರಿಸಿಕೊಳ್ಳಲು ಮಗುವಿಗೆ ಬಿಡಬೇಕು. ಮಕ್ಕಳ ಸ್ವಂತಿಕೆ ಮತ್ತು ಸಾಮಥ್ರ್ಯವನ್ನು ಒರೆಗೆ ಹಚ್ಚುವ ಕೆಲಸವನ್ನು ಹೆತ್ತವರೇ ಮಾಡಬೇಕು. ಅದು ಬಿಟ್ಟು ಮಗುವಿಗೆ ಸುಲಭವಾಗಲಿ ಎಂದು ಹೆತ್ತವರೇ ಸಮಸ್ಯೆಗಳನ್ನು ಪರಿಹರಿಸುವುದು ಸಹ್ಯವಲ್ಲ.
  4. ನಿರಂತರವಾಗಿ ಮಕ್ಕಳನ್ನು ಅತಿಯಾಗಿ ಗಮನಿಸುವುದು ಮತ್ತು ನಿರಂತರವಾಗಿ ನಿರ್ದೇಶನ ನೀಡುವುದು ಖಂಡಿತವಾಗಿಯೂ ಅಪಾಯಕಾರಿ. ಇದರಿಂದ ಸಹಾಯಕ್ಕಿಂತ ತೊಂದರೆಗಳೇ ಜಾಸ್ತಿ. ಮಗು ಹೋದಲ್ಲೆಲ್ಲಾ ಉPS ಹಾಕಿ ಹಿಂಬಾಲಿಸುದು. ಪ್ರತಿ ಗಂಟೆಗೊಮ್ಮೆ ಪೋನ್ ಮಾಡಿ ವಿಚಾರಿಸುವುದು, ತಿಂಡಿಗಳ ಬಗ್ಗೆ ವಿಚಾರಿಸುವುದು ಅನಗತ್ಯ. ಮಕ್ಕಳಿಗೆ ಮನೆ ಬಿಡುವಾಗ ಒಂದು ನಿದೇರ್ಶನ ಕೊಟ್ಟರೆ ಸಾಕು. ಅವರು ಅವರ ಹಿತವನ್ನು ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಮರ್ಥರಿರುತ್ತಾರೆ ಎಂಬ ಸತ್ಯವನ್ನು ಹೆತ್ತವರು ಅರಿಯಬೇಕು. ಇಂತಿಷ್ಟು ಗಂಟೆಗೆ ಇಲ್ಲಿರಬೇಕು, ಇಂತಿಷ್ಟು ಹೊತ್ತಿಗೆ ಊಟ ಮಾಡಬೇಕು, ಇಂತ್ತದ್ದೇ ಡ್ರೆಸ್ ಹಾಕಬೇಕು ಎಂಬ ಉಸಿರುಕಟ್ಟಿಸುವ ವಾತಾವರಣ ಮಕ್ಕಳಿಗೆ ಒಳ್ಳೆಯದಲ್ಲ. ಅತೀಯಾದ ಶಿಸ್ತು ನಿರ್ದೇಶನದಿಂದ ಮಗು ಗಲಿಬಿಲಿಕೊಂಡು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಮಕ್ಕಳು ತಮ್ಮ ಕೆಲಸವನ್ನು ಮುಗಿಸುವಲ್ಲಿ ಸಹಾಯ ಮಾಡಿ. ಆದರೆ ಕಂಟ್ರೋಲ್ ಮಾಡುವ ಕೆಲಸ ಮಾಡಲೇಬಾರದು. ಮಗು ಕ್ಲಿಪ್ಠ ಪರಿಸ್ಥಿತಿಗಳಲ್ಲಿ, ಸನ್ನಿವೇಶಕ್ಕೆ ಹೊಂದಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಲು ಹೆತ್ತವರು ಅವಕಾಶ ಮಾಡಿಕೊಡಬೇಕು. ಮಕ್ಕಳು ತಪ್ಪು ಮಾಡಲೇಬಾರದು ಎಂಬ ಸಿದ್ಧಾಂತ ತಪ್ಪು. ಒಂದೆರಡು ಬಾರಿ ತಪ್ಪು ಮಾಡಿದ ಬಳಿಕ ಅವರೇ ತಿದ್ದಿಕೊಂಡು, ಸರಿಯಾಗಿ ಮಾಡುವುದನ್ನು ಕಲಿಯುತ್ತಾರೆ. ತಪ್ಪು ಮಾಡಿದಾಗ ಶಿಕ್ಷಿಸದೆ, ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ನೀಡಿ ಮಗದೊಮ್ಮೆ ಅದೇ ತಪ್ಪು ಮಾಡದಂತೆ ಸರಿಯಾದ ಮಾರ್ಗದರ್ಶನ ನೀಡುವುದು ಅಗತ್ಯ.

ಕೊನೆಮಾತು :-

ಒಂಬತ್ತು ತಿಂಗಳು ಹೊತ್ತು ಹೆತ್ತ ಮಗು ಎಲ್ಲರಿಗಿಂತ ಪ್ರತಿಭಾವಂತರಾಗಬೇಕು ಎಂಬ ಮಹದಾಸೆ ಎಲ್ಲ ಅಮ್ಮಂದಿರಿಗೂ ಇರುತ್ತದೆ. ಅದೇ ರೀತಿ ತನ್ನ ಮಕ್ಕಳು ಎಲ್ಲಾ ಆಟೋಟ ಪಾಠ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದೆ ಬರಲಿ ಎಂಬ ಆಸೆ ಅಪ್ಪಂದಿರಲ್ಲೂ ಇದೆ. ಇವತ್ತಿನ ಧಾವಂತದ, ವೇಗದ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಪ್ರತಿ ಹೆತ್ತವರು ತಮ್ಮ ಮಕ್ಕಳು ಮುಂದೆ ಬರಲಿ ಎಂಬ ಅತಿಯಾಸೆಯಿಂದ ಸಕಲ ಸೌಲಭ್ಯಗಳನ್ನು ಮಕ್ಕಳಿಗೆ ನೀಡುವುದರ ಜೊತೆಗೆ, ಅತಿಯಾದ ಪ್ರೀತಿ, ಮಮತೆ, ಒತ್ತಡ ಮತ್ತು ಆಪೇಕ್ಷೆ ಹೊಂದಿರುತ್ತಾರೆ. ದೈನಂದಿನ ಪಠ್ಯದ ಚಟುವಟಿಕೆಗಳ ಜೊತೆಗೆ ಸ್ವಿಮ್ಲೀಂಗ್, ಕರಾಟೆ, ಡಾನ್ಸಿಂಗ್, ಗಿಟಾರ್ ಮ್ಯೂಸಿಕ್ ಹೀಗೆ ಹತ್ತು ಹಲವು ಕ್ಲಾಸ್‍ಗಳಿಗೆ ಒಂದು ನಿಮಿಷವೂ ಪುರೊಸೊತ್ತಿಲ್ಲದಂತೆ ಕಳಿಸಿ ಮಕ್ಕಳ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಾರೆ. ಮಕ್ಕಳಿಗೂ ಅವರದ್ದೇ ಆದ ಒಂದು ಜಗತ್ತು ಇದೆ, ಆಸೆ ಅಕಾಂಕ್ಷೆ ಇದೆ ಎಂಬುದನ್ನು ಹೆತ್ತವರು ಅರಿಯಬೇಕು. ಮಗುವಿನ ಬೇಕು ಬೇಡಗಳ ಬಗ್ಗೆಯೂ ಒಂದಷ್ಟು ಗೌರವ ನೀಡಬೇಕು. ಮಗುವನ್ನು ಯಾವತ್ತೂ ಉಸಿರುಗಟ್ಟಿಸುವ ವಾತಾವರಣದಲ್ಲಿ ಬೆಳೆಸುವುದು ತಪ್ಪು. ಅವರ ಆಸಕ್ತಿಗಳಿಗೂ ಕಿವಿಯಾಗಬೇಕು ಮತ್ತು ಕಣ್ಣಾಗಬೇಕು. ತನ್ನ ಸಹದ್ಯೋಗಿಗಳ ಮಕ್ಕಳ ಜೊತೆ ಅಥವಾ ತನ್ನ ಸ್ನೇಹಿತರ ಮಕ್ಕಳ ಜೊತೆ ಅಥವಾ ಪಕ್ಕದ ಮನೆಯವರ ಮಕ್ಕಳ ಜೊತೆ ತಮ್ಮ ಮಕ್ಕಳನ್ನು ಹೋಲಿಸುವುದು ಖಂಡಿತಾ ಒಳ್ಳೆಯದಲ್ಲ. ಪ್ರತಿಯೊಂದು ಮಗುವಿಗೂ ತನ್ನದೇ ಆದ ಪ್ರತಿಭೆ ಇದೆ. ಸಾಮಥ್ರ್ಯ ಇದೆ ಮತ್ತು ಕೌಶಲ್ಯ ಇದೆ ಎಂಬುದನ್ನು ಹೆತ್ತವರು ಅರಿಯಬೇಕು. ತನ್ನ ಮಕ್ಕಳ ದೌರ್ಬಲ್ಯನದ ಬಗ್ಗೆಯೂ ತಿಳಿದಿರಬೇಕು. ಮಕ್ಕಳ ಸಾಮಥ್ರ್ಯಕ್ಕೆ ಮಿಗಿಲಾದ ಪ್ರತಿಭೆಯನ್ನು ಅಥವಾ ಅಂಕಗಳನ್ನು ನಿರೀಕ್ಷಿಸುವುದರಿಂದ ಮಕ್ಕಳ ಮೇಲೆ ವಿಪರೀತ ಮಾನಸಿಕ ಒತ್ತಡ ಉಂಟಾಗುತ್ತದೆ. ತಾವು ತಮ್ಮ ಜೀವನದಲ್ಲಿ ಸಾಧಿಸಲಾಗದಿದ್ದ ಕೆಲಸವನ್ನು ತನ್ನ ಮಕ್ಕಳಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೆಮ್ಮೆಯಿಂದ ಹೆತ್ತವರು ಹತ್ತು ಜನರಲ್ಲಿ ಹೇಳಿಕೊಂಡು ತಿರುಗಾಡುವುದು ಮೂರ್ಖತನದ ಪರಮಾವಧಿ. ತಾನು ಡಾಕ್ಟರಗಲಿಲ್ಲ. ನನ್ನ ಮಕ್ಕಳಾದರೂ ವೈದ್ಯರಾಗಲಿ ಎಂದು ಆಶಿಸಿ ಮಕ್ಕಳ ಮೇಲೆ ಒತ್ತಡ ಹೇರಿ. ಮಕ್ಕಳನ್ನು ರೂಮಿನಲ್ಲಿ ಕೂಡಿ ಹಾಕಿ ಓದಿಸಿದರೆ, ಯಾವ ಮಕ್ಕಳೂ ವೈದ್ಯರಾಗುವುದು ಬಿಡಿ, ಮನುಷ್ಯರಾಗಲೂ ಸಾಧ್ಯವಿಲ್ಲ. ಮಕ್ಕಳಿಗೆ ಅದು ಜೈಲಿನ ಅನುಭವಾದೀತೇ ವಿನಃ, ಯಾವುದೇ ಧನಾತ್ಮಕ ಫಲಿತಾಂಶ ದೊರಕದು. ಸದಾಕಾಲ ಮಕ್ಕಳ ಮೇಲೆ ಹದ್ದಿನ ಕಣ್ಣು ಇಟ್ಟು ಮಕ್ಕಳ ಪ್ರತಿಯೊಂದು ಚಲನವಲನ ಮತ್ತು ಹೆಜ್ಜೆಯಲ್ಲಿಯೂ ಹೆತ್ತವರೇ ನಿರ್ಧಾರ ತೆಗೆದುಕೊಳ್ಳುವ ಈ ಪೋಷಕತ್ವವನ್ನು 1990ರಲ್ಲಿ ಪೋಸ್ಟರ್ ಕ್ಲೆವ್ ಮತ್ತು ಜಿಮ್ ಫೇ ಎಂಬವರು “ಹೆಲಿಕಾಪ್ಟರ್ ಪೋಷಕತ್ವ” ಎಂದು ಕರೆದರು. 21ನೇ ಶತಮಾನದ 50 ಶೇಕಡಾ ಮಕ್ಕಳು ಈ ರೀತಿಯ ಪೋಷಕತ್ವಕ್ಕೆ ತುತ್ತಾಗುತ್ತಾರೆ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ. 90ರ ದಶಕದಲ್ಲಿ ಉಂಟಾದ ಪ್ರಪಂಚೀಕಣದಿಂದಾಗಿ ಸರಕಾರಿ ಶಾಲೆಗಳಿಗೆ ಹೋಗುವ ಮಕ್ಕಳ ಸಂಖ್ಯೆ ಕುಂಠಿತವಾಗಿ, ಖಾಸಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಹೊಗುವ ಮಕ್ಕಳ ಸಂಖ್ಯೆ ಜಾಸ್ತಿಯಾಯಿತು. ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಯಿತು. ನಾವಿಬ್ಬರೂ ನಮಗಿಬ್ಬರು ಹೋಗಿ, ಹೆಣ್ಣಿರಲಿ, ಗಂಡಿರಲ್ಲಿ ಒಂದೇ ಮಗುವಿರಲಿ ಎಂದು ಪರಿರ್ವತವಾಗಿ ಕುಟುಂಬದ ಗಾತ್ರ ಮತ್ತಪ್ಟು ಕಿರಿದಾಯಿತು. ಮತ್ತು ಕೂಡು ಕುಟುಂಬ ಪದ್ಧತಿ ಸಂಪೂರ್ಣ ನಶಿಸಿ ಹೋಯಿತು. ತಂದೆ ತಾಯಿ ಮಗ/ಮಗಳು ಹೀಗೆ ಚಿಕ್ಕ ಕುಟುಂಬವಾಗಿ ಹೊರಹೊಮ್ಮಿತು. ತಂದೆ ತಾಯಂದಿರಿಬ್ಬರು ಇರುವ ಒಬ್ಬ ಮಗ/ಮಗಳು ಮೇಲೆ ಅತಿಯಾದ ವ್ಯಾಮೋಹ, ಪ್ರೀತಿ ಮತ್ತು ಪಾಲುದಾರಿಕೆಯಿಂದಾಗಿ ಮಕ್ಕಳ ಮೇಲಿನ ಒತ್ತಡ ಮತ್ತು ನಿರೀಕ್ಷೆ ಸಹಜವಾಗಿ ಹೆಚ್ಚಿತು. ಕುಟುಂಬ ಮೌಲ್ಯಗಳು ನಶಿಸಿ ಹೋದವು ಮತ್ತು ನೈತಿಕ ಶಿಕ್ಷಣ, ಬದುಕಿನ ಶಿಕ್ಷಣ ಮತ್ತು ಬದುಕಿನ ಪಾಠಕ್ಕಿಂತ ಜಾಸ್ತಿ ಶಾಲೆಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಯಿತು. ಮೌಲ್ಯಾದಾಂತ ಶಿಕ್ಷಣಕ್ಕಿಂತ, ಡಿಗ್ರಿ ಆಧಾರಿತ, ಮಾಕ್ರ್ಸ್ ಆಧಾರಿತ ಶಿಕ್ಷಣವೇ ಶ್ರೇಷ್ಠ ಎಂಬ ಕಲ್ಪನೆಗೆ ಹೆಚ್ಚಿನ ಮಹತ್ವ ಬಂತು. ಮಕ್ಕಳ ಪ್ರತಿಭೆಯನ್ನು ಆತ/ಆಕೆ ಗಳಿಸಿದ ಅಂಕಗಳಿಂದಲೇ ಅಳೆಯುವ ಕಾಲಕ್ಕೆ ಬಂದು ನಿಂತಿತು. ಸಹಜವಾಗಿಯೇ ಎಲ್ಲಾ ಹೆತ್ತವರೂ ತಮ್ಮ ಮಕ್ಕಳ ಮೇಲೆ ವಿಪರೀತ ಪಾಲು ದಾರಿಕೆ ಮತ್ತು ಪೋಷಕತ್ವವನ್ನು ಹೇರಿ, ಎಲ್ಲ ಸÀಣ್ಣ ಪುಟ್ಟ ವಿಚಾರಗಳಲ್ಲಿಯೂ ಮೂಗು ತೂರಿಸಲಾರಂಭಿಸಿದಾಗ, ಮಗುವಿನ ಶಿಕ್ಷಣದ ಗುಣಮಟ್ಟದ ಮೇಲೆ ವ್ಯತಿರಕ್ತ ಪರಿಣಾಮ ಬೀರಲಾರಂಭಿಸಿತು. ಅದರ ಪರಿಣಾಮವಾಗಿಯೇ ಈ ಹೆಲಿಕಪ್ಟಾರ್ ಪೋಷಕತ್ವ ಎಂಬ ಶಬ್ದ ಬಳಕೆ ಬಂದಿತು.
ಹೆತ್ತವರೇ ಗಮನಿಸಿ, ಯಾವತ್ತೂ ನಿಮ್ಮ ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಈ ರೀತಿಯ ಪೋಷಕತ್ವ ಅಗತ್ಯವೇ ಇಲ್ಲ. ಅನಿವಾರ್ಯವೂ ಅಲ್ಲ. ಮಕ್ಕಳ ಪ್ರತಿಭೆಯನ್ನು ಹೊರಚೆಲ್ಲಲು ಪೋಷಕರು ಪೂರಕವಾಗಿರಬೇಕು ಹೊರತು ಹೆತ್ತವರೇ ಮಕ್ಕಳ ಪ್ರತಿಭೆಯನ್ನು ಹೊರಹಾಕುವಂತಾಗಬಾರದು. ಹೆತ್ತವರೇ ಒಂದು ಲಕ್ಷಣ ರೇಖೆಯನ್ನು ಹಾಕಿಕೊಂಡು, ಅದನ್ನು ದಾಟಿ, ಮಕ್ಕಳ ಎಲ್ಲ ಸಣ್ಣಪುಟ್ಟ ವಿಚಾರಕ್ಕೂ ಮೂಗು ತೂರಿಸಬಾರದು. ಮಕ್ಕಳಿಗೂ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಬೇಕು. ಮಕ್ಕಳ ಚಲನವಲನಗಳ ಮೇಲೆ ದೈನಂದಿನ ಚಟುವಟಿಕೆಗಳ ಗಮನವಿರಲಿ. ಆದರೆ ಸದಾಕಾಲ ಅವರ ಮೇಲೆ ಕಣ್ಣಿಟ್ಟು ಅವರಿಗೆ ಉಸಿರುಗಟ್ಟಿಸುವಂತೆ ಮಾಡಬೇಡಿ. ಶಾಲೆಯಲ್ಲಿ ನಡೆದ ವಿಷಯಗಳ ಬಗ್ಗೆ ಕೇಳಿ ಆದರೆ ಪ್ರತಿ ನಿಮಿಷದ ಬಗ್ಗೆಯೂ ವರದಿ ವಾಚನದ ಅವಶ್ಯಕತೆ ಖಂಡಿತಾ ಇಲ್ಲ. ಮಕ್ಕಳಿಗೂ ಮಕ್ಕಳಾಟದ ಜೀವನ ಇದೆ. ಅದನ್ನು ಆನುಭವಿಸಲು ಅವಕಾಶ ನೀಡಿ, ಸಾಧ್ಯವಾದರೆ ನೀವೂ ಅವರ ಜೊತೆ ಮಕ್ಕಳಾಗಿ ಅದರ ಆನಂದವನ್ನು ಅನುಭವಿಸಿ ಮತ್ತು ಮನಸ್ಸಿನ ದುಗಡ ದುಮಾನ್ಮಗಳನ್ನೂ ತೊಡೆದು ಹಾಕಿಕೊಳ್ಳಿ. ತಮ್ಮ ಮಗುವಿನ ಸುಖ, ಸಂತಸ, ನೆಮ್ಮದಿಯಿಂದ ಹೆತ್ತವರು ಎಷ್ಟು ನೆಮ್ಮದಿಯಾಗಿದ್ದಾರೆ ಅಥವಾ ಖುಷಿಯಾಗಿದ್ದಾರೆ ಎಂದು ಅಳೆಯುತ್ತಾರೆಯೇ ಹೊರತು, ಮಗುವಿನ ಮಾಕ್ರ್ಸ್ ಅಥವಾ ಯಾವ ಗ್ರೇಡ್ ಪಡೆದಿದೆ ಎಂಬುದರ ಮೇಲೆ ನಿರ್ಧಾರಿಸುವುದಲ್ಲ ಎಂಬ ಸಿಹಿ ಸತ್ಯವನ್ನು ಹೆತ್ತವರು ಅರಿತಲ್ಲಿ ಮಾತ್ರ ಬಂದು ಸುಂದರ ಸುದೃಡ ಆರೋಗ್ಯವಂತ ಸಮಾಜದ ನಿರ್ಮಾಣವಾಗಬಹುದು. ಅಂತಹ ಮಗ/ಮಗಳು ದೇಶಕ್ಕೆ ಆಸ್ತಿಯಾಗಬಹುದು. ಇಲ್ಲವಾದಲ್ಲಿ ನೂರಕ್ಕೆ ನೂರು ಅಂಕ ಪಡೆದ ಮಗುವೂ ದೇಶಕ್ಕೆ ಹೊರೆಯಾದಿತೇ ವಿನಃ ದೇಶಕ್ಕೆ ಏನೂ ಲಾಭವಾಗದು.

ಡಾ| ಮುರಲೀ ಮೋಹನ್ ಚೂಂತಾರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!