
ಒಂದು ಊರಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಎಲ್ಲರೆದುರು ಅಹಂಕಾರದಿಂದ ಬೀಗುತ್ತಿದ್ದ ಆತ “ನಾನೇ ಎಲ್ಲಾ, ನನ್ನಿಂದಲೇ ಎಲ್ಲಾ” ಎನ್ನುವ ಭ್ರಮೆಯಲ್ಲಿ ಬದುಕುತ್ತಿದ್ದ. ಆದರೆ ಆತನಿಗೇ ಅರಿವಾಗದ ಆತನ ಬದುಕಿನ ಸತ್ಯಗಳು ಹೀಗಿದ್ದವು…
“ನಾನು” ಎನ್ನುವ ಅಹಂಕಾರದ ಅಂಧಕಾರದಲ್ಲಿ ಮುಳುಗಿದ್ದ ಆತನಿಗೆ ತಾನೂ ಕೂಡ ಮುಂದೊಮ್ಮೆ ಎಲ್ಲರಂತೆ ಸತ್ತು ಮಣ್ಣು ಸೇರುತ್ತೇನೆ ಎಂಬುವುದು ನೆನಪಾಗಲೇ ಇಲ್ಲ…
“ನನ್ನಿಂದಲೇ ಎಲ್ಲಾ” ಎನ್ನುವ ದೊಡ್ಡಸ್ತಿಕೆಯ ಗುಂಗಿನಲ್ಲಿ ಮೈ-ಮರೆತಿದ್ದ ಆತನಿಗೆ ತನ್ನ ದೊಡ್ಡಸ್ತಿಕೆಯೇ ತನ್ನೊಳಗಿನ ಬಹುದೊಡ್ಡ ದಡ್ಡತನ ಎಂಬುವುದು ಅರಿವಾಗಲೇ ಇಲ್ಲ…
“ನನ್ನೆದುರು ನಿಲ್ಲುವವರು ಯಾರೂ ಇಲ್ಲ” ಎಂದು ಬೀಗುತ್ತಿದ್ದ ಆತನಿಗೆ ಬದುಕೆಂಬ ಆಟದಲ್ಲಿ ಆತ ಹಿಂದೆ ಉಳಿದದ್ದು ತಿಳಿಯಲೇ ಇಲ್ಲ, ಎಲ್ಲರೂ ಆತನನ್ನು ಬಿಟ್ಟು ಮುಂದೆ ಸಾಗಿದ್ದನ್ನು ಆತ ಗಮನಿಸಲೇ ಇಲ್ಲ…
“ಆಮೆ-ಮೊಲದ” ಆಟದಂತಾಯಿತು ಆತನ ಬದುಕು, ಮೊಲವೆಷ್ಟೇ ಜೋರಾಗಿ ಓಡಿದರೂ ಅದರೊಳಗಿನ ಅಹಂಕಾರವೇ ಅದರ ಸೋಲಿಗೆ ಕಾರಣವಾಯಿತು, ತಾಳ್ಮೆಯಿಂದ ನಿಧಾನವಾಗಿ ಸಾಗಿದ ಆಮೆ ಗುರಿಯನ್ನು ತಲುಪಿ ಗೆದ್ದಿತ್ತು…
ಹಾಗಾಗಿ ಜೀವನದಲ್ಲಿ “ನಾನು” ಎಂದು ಅಹಂಕಾರ ಪಡುವ ಮೊದಲು ಹಿರಿಯರು ಹೇಳಿದ ಈ ಮಾತು ನೆನಪಿರಲಿ “ಅಹಂಕಾರವು ಅವನತಿಗೆ ಕಾರಣವಾದರೆ, ತಾಳ್ಮೆಯು ಉನ್ನತಿಗೆ ಮುನ್ನುಡಿಯಾಗುತ್ತದೆ…”✍️ಉಲ್ಲಾಸ್ ಕಜ್ಜೋಡಿ
