Ad Widget

ಕುಕ್ಕೆ: ದೇವಳದಲ್ಲಿ ಭಕ್ತರ ವಿಶೇಷ ಅನುಕೂಲತೆಗೆ ಸ್ವಯಂಚಾಲಿತ ರ‍್ಯಾಂಪ್

. . . . . . . . .

 ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿದಿನ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನ ಭಕ್ತರ ಅನುಕೂಲತೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇವರಿಗೆ ವಿಶೇಷ ಉಪಯೋಗ ಒದಗಿಸಲು ಶ್ರೀ ದೇವಳದಲ್ಲಿ ಸ್ವಯಂಚಾಲಿತ ರ‍್ಯಾಂಪ್ ಆಸನವನ್ನು ಅಳವಡಿಸಲಾಗುವುದು. ಈಗಾಗಲೇ ರ‍್ಯಾಂಪ್ ಅನ್ನು ಅಳವಡಿಸುವ ಕಾರ್ಯ ಆರಂಭವಾಗಿದ್ದು ಕಿರುಷಷ್ಠಿ ಮಹೋತ್ಸವದ ಈ ಸಂದರ್ಭದಲ್ಲಿ ಶೀಘ್ರವೇ ಈ ವ್ಯವಸ್ಥೆ ಭಕ್ತರ ಉಪಯೋಗಕ್ಕೆ ಲಭಿಸಲಿದೆ.

ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ :

 ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದಾರೆ.ಇದಕ್ಕೆ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ವಿಶೇಷ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅಲ್ಲದೆ ಲೋಕೋಪಯೋಗಿ ಅಭಿಯಂತ ಪ್ರಮೋದ್ ಕುಮಾರ್ ಮತ್ತು ಶ್ರೀ ದೇವಳದ ಅಭಿಯಂತರ ಉದಯ ಕುಮಾರ್ ಆಡಳಿತಾಧಿಕಾರಿಗಳಿಗೆ ವಿಶೇಷ ಸಹಕಾರ ನೀಡಿದ್ದರು. ಕಾರ್ಯತತ್ಪರ ಅಧಿಕಾರಿಗಳ ಶ್ರಮದಿಂದ ಇದೀಗ ಕುಕ್ಕೆ ಸುಬ್ರಹ್ಮಣ್ಯನ ದರುಶನಕ್ಕೆ ಬರುವ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನ ಭಕ್ತರಿಗೆ ಮೆಟ್ಟಿಲು ಇಳಿದು ಹೋಗಲು ಪಡುತ್ತಿದ್ದ ತ್ರಾಸಕ್ಕೆ ಪರಿಹಾರ ದೊರಕಿದೆ. ಇನ್ನು ಮುಂದೆ ಸರಾಗವಾಗಿ ಸ್ವಯಂಚಾಲಿತ ರ‍್ಯಾಂಪ್ ಆಸನದಲ್ಲಿ ಆರಾಮವಾಗಿ ಕುಳಿತು ಶ್ರೀ ದೇವಳದ ಹೊರಾಂಗಣಕ್ಕೆ ಪ್ರವೇಶಿಸಬಹುದು ಮತ್ತು ಹೊರಕ್ಕೆ ತೆರಳಬಹುದು.ಈಗಾಗಲೇ ಅಳವಡಿಕೆ ಕಾರ್ಯ ನಡೆಯುತ್ತಿದ್ದು ಈ ವಿಶೇಷ ವ್ಯವಸ್ಥೆಯನ್ನು ಕಂಡ ಹಿರಿಯ ನಾಗರಿಕ ಭಕ್ತರು ದೇವಳದ ಆಡಳಿತವನ್ನು ಶ್ಲಾಘಿಸಿದ್ದಾರೆ. 

 ವಿದೇಶಿ ನಿರ್ಮಿತ:

 ಈ ಸ್ವಯಂಚಾಲಿತ ರ‍್ಯಾಂಪ್ ಆಸನವನ್ನು ನೆದರ್‌ಲ್ಯಾಂಡ್‌ನಿಂದ ತರಿಸಲಾಗಿದೆ. ಸುಮಾರು 4 ಲಕ್ಷದ 17 ಸಾವಿರ 700 ರೂ ವೆಚ್ಚದಲ್ಲಿ ವಿದೇಶಿ ತಂತ್ರಜ್ಞಾನ ಹೊಂದಿದ ವಿದೇಶಿ ನಿರ್ಮಿತ ವ್ಯವಸ್ಥೆಯನ್ನು ಕುಕ್ಕೆ ದೇವಳದಲ್ಲಿ ಅಳವಡಿಸಲಾಗುವುದು. ಎಎಆರ್‌ಡಿಐಎನ್‌ಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆ ಅಳವಡಿಕೆ ಕಾರ್ಯ ನಡೆಸುತ್ತಿದೆ.

 “ಭಕ್ತರಿಗಾಗಿ ಸ್ವಯಂಚಾಲಿತ ರ‍್ಯಾಂಪ್ ಆಸನವನ್ನು ಅಳವಡಿಸುತ್ತಿದ್ದೇವೆ. ಭಕ್ತರ ವಿಶೇಷ ಅನುಕೂಲತೆಗಾಗಿ ವಿದೇಶದಿಂದ ರ‍್ಯಾಂಪ್ ಅನ್ನು ತರಿಸಲಾಗಿದೆ. ರ‍್ಯಾಂಪ್ ಅಳವಡಿಕೆ ಕಾರ್ಯವು ಆರಂಭವಾಗಿದೆ. ದೇವರ ಆಶೀರ್ವಾದ ಮತ್ತು ತಂಡದ ಶ್ರಮದಿಂದ ಶೀಘ್ರ ರ‍್ಯಾಂಪ್ ಅಳವಡಿಕೆ ಸಂಪೂರ್ಣವಾಗಲಿದೆ. ಇದು ಭಕ್ತರಿಗೆ ಪ್ರವೇಶಿಸಲು ಮತ್ತು ತೆರಳಲು ವಿಶೇಷ ಅನುಕೂಲತೆ ಒದಗಿಸಲಿದೆ.ಕಾಯ್ದೆ ಪ್ರಕಾರ ಎಲ್ಲಾ ವಿಚಾರದಲ್ಲಿ ಸಮಾನ ಅವಕಾಶವನ್ನು ಎಲ್ಲರಿಗೂ ನೀಡಬೇಕು ಎಂಬ ದೃಷ್ಠಿಕೋನದಿಂದ ಈ ವಿಸೇಷ ವ್ಯವಸ್ಥೆಯನ್ನು ದೇವಳದಲ್ಲಿ ಅಳವಡಿಸಲಾಗಿದೆ. ಮುಂದೆ ದೇವಳದಲ್ಲಿ ಲಿಪ್ಟ್ ವ್ಯವಸ್ಥೆ ಮಾಡಲಾಗುವುದು” ಎಂದು ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.

 “ಸ್ವಯಂಚಾಲಿತ ರ‍್ಯಾಂಪ್ ಆಸನ ವ್ಯವಸ್ಥೆಯಿಂದ ಭಕ್ತರು ಆಸನದಲ್ಲಿ ಕುಳಿತು ದೇವಳದ ಹೊರಾಂಗಣಕ್ಕೆ ತೆರಳಬಹುದು ಮತ್ತು ಹೊರ ಭಾಗಕ್ಕೆ ಬರಬಹುದು.ಮೆಟ್ಟಿಲು ಇಳಿದು ಹೋಗಲು ಪಡುತ್ತಿದ್ದ ಭಕ್ತರಿಗೆ ಇದು ಸಹಕಾರ ನೀಡಲಿದೆ.ಈಗಾಗಲೇ ಅಳವಡಿಕೆ ಕಾರ್ಯ ಸಮಾಪ್ತಿಯ ಹಂತ ತಲುಪಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!