ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಮಿಥುನ್ ಕರ್ಲಪ್ಪಾಡಿಯವರಿಗೆ ವಿಕಾಸ್ ಮೀನಗದ್ದೆ ಎಂಬವರು ದೂರವಾಣಿಯಲ್ಲಿ ಜೀವ ಬೆದರಿಕೆ ಹಾಕಿದ ಘಟನೆಯ ಬಗ್ಗೆ ಸುಳ್ಯ ಪ್ರೆಸ್ ಕ್ಲಬ್ ಖಂಡಿಸಿದೆ.
ಡಿ.13ರಂದು ಮಿಥುನ್ ತನ್ನ ತಾಯಿಯ ಜತೆ ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ತಾಯಿಯ ಮೊಬೈಲ್ ಸಿಮ್ ಸರಿ ಪಡಿಸಿ ಬಂದಿದ್ದು, ಬಿಎಸ್‌ಎನ್‌ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಸಂಸ್ಥೆಯು ಬಿ.ಎಸ್.ಎನ್.ಎಲ್ ಸಿಮ್ ಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಯಾರೋ ವ್ಯಕ್ತಿಗಳು ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರು ನೀಡಿರುವುದು ಮಿಥುನ್ ಆಗಿರಬಹುದೆಂದು ಸಂಸ್ಥೆಯ ವಿಕಾಸ್‌ರವರು ತಿಳಿದು ಅವರ ಮಾವನ ಮೊಬೈಲ್‌ಗೆ ಫೋನ್ ಮಾಡಿ ಬೆದರಿಸಿದ್ದರು. ಅದು ಅಲ್ಲದೇ ಡಿ.14ರಂದು ಬೆಳಗ್ಗೆ ಮಿಥುನ್ ರವರ ಮೊಬೈಲ್‌ಗೂ ಫೋನ್ ಮಾಡಿ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದರು. ಆದ್ದರಿಂದ ವಿಕಾಸ್ ಮೀನಗದ್ದೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೋಲೀಸರಿಗೆ ದೂರು ನೀಡಿದ್ದಾರೆ.
ಇಂದು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಘಟನೆಯನ್ನು ಖಂಡಿಸಲಾಯಿತು ಮತ್ತು ಪೋಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಪ್ರೆಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಹಾಗೂ ಪಧಾಧಿಕಾರಿಗಳು ಮಿಥುನ್ ಕರ್ಲಪ್ಪಾಡಿ ಯವರ ವಿರುದ್ದ ಕೊಲೆ ಬೆದರಿಕೆ ಹಾಕಿದ ಘಟನೆಯನ್ನು ಖಂಡಿಸಿದರು.