ಪಶ್ಚಿಮ ಘಟ್ಟ ಹಾಗೂ ಜನವಸತಿ ಪ್ರದೇಶಗಳಿಗೆ ಗಡಿ ಗುರುತು ಮಾಡಿ ಜಂಟಿ ಸರ್ವೇ ಮಾಡಬೇಕು : ಕಿಶೋರ್ ಶಿರಾಡಿ
ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ಡಿ.15 ರಂದು ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ಕಲಾಮಂದಿರದಲ್ಲಿ ಹರಿಹರ, ಕಲ್ಮಕಾರು, ಕೊಲ್ಲಮೊಗ್ರು ಹಾಗೂ ಬಾಳುಗೋಡು ಸೇರಿದಂತೆ ನಾಲ್ಕು ಗ್ರಾಮಗಳ ಗ್ರಾಮಸ್ಥರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ರವರು “ಪಶ್ಚಿಮ ಘಟ್ಟ ಹಾಗೂ ಜನವಸತಿ ಪ್ರದೇಶಗಳಿಗೆ ಗಡಿ ಗುರುತು ಮಾಡಿ ಜಂಟಿ ಸರ್ವೇ ಮಾಡಬೇಕು. ಅಲ್ಲದೇ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹಾಗೂ ಕಾಡು ಪ್ರಾಣಿಗಳು ಕೃಷಿ ಭೂಮಿಗೆ ಬಂದು ಹಾನಿ ಮಾಡುವ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲು ರೈತರಿಗೆ ಕೋವಿ ಪರವಾನಗಿ ನೀಡಬೇಕು. ಅಲ್ಲದೇ ಪೂರ್ಣ ಪ್ರಮಾಣದಲ್ಲಿ ಬೂತ್ ಹಾಗೂ ತಾಲೂಕು ಸಮಿತಿಗಳ ರಚನೆ ಮಾಡಿ ತಕ್ಷಣ ಎಲ್ಲಾ ಗ್ರಾಮಗಳಲ್ಲಿ ಆಯಾ ಗ್ರಾಮಗಳ ಬೂತ್ ಸಮಿತಿಯ ಕಾರ್ಯಕರ್ತರು ಆಯಾ ಗ್ರಾಮಗಳ ಪ್ರತೀ ಮನೆ-ಮನೆಗಳಿಗೆ ತೆರಳಿ ಕಸ್ತೂರಿ ರಂಗನ್ ಜಾರಿಯಾಗುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಸಬೇಕು” ಎಂದರು.
ಕಡಬ ಹೋರಾಟ ಸಮಿತಿಯ ಮುಂದಾಳು ಸೈಯದ್ ಮೀರಾ ಸಾಹೇಬ್ ರವರು ಮಾತನಾಡಿ “ಕಡಬ ತಾಲೂಕಿನಲ್ಲಿ ಈಗಾಗಲೇ ಅನೇಕ ಕೃಷಿಕರಿಗೆ ಅರಣ್ಯ ಇಲಾಖೆಯಿಂದ ನೋಟೀಸ್ ಬಂದಿದ್ದು, ಕೃಷಿಕರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿ ಮುಂದೆ ಬಾರದಂತಾಗಲು ಹೋರಾಟ ಅನಿವಾರ್ಯ” ಎಂದು ಕೃಷಿಕರಿಗೆ ಅರಣ್ಯ ಇಲಾಖೆಯಿಂದ ಬಂದ ನೋಟಿಸ್ ಅನ್ನು ಸಭೆಯಲ್ಲಿ ಓದಿ ಹೇಳಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಪ್ರಮುಖರಾದ ಚಂದ್ರಶೇಖರ ಬಾಳುಗೋಡು, ಜಯಪ್ರಕಾಶ್ ಕೂಜುಗೋಡು, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಸತೀಶ್.ಟಿ.ಯನ್, ಚಂದ್ರಹಾಸ ಶಿವಾಲ, ಕೇಶವ ಭಟ್ ಕಟ್ಟ, ಹರೀಶ್ ಬಳ್ಳಡ್ಕ ಹಾಗೂ ನಾಲ್ಕು ಗ್ರಾಮಗಳ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)