ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖ ಚಂಪಾಷಷ್ಠಿಯ ಮಹಾರಥೋತ್ಸವ ಇಂದು(ಡಿ.07) ನೆರವೇರಿತು. ಬ್ರಹ್ಮರಥದಲ್ಲಿ ಸುಬ್ರಹ್ಮಣ್ಯ ದೇವರು ಆಸೀನರಾಗಿ ರಥೋತ್ಸವವು ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಭಕ್ತರು ದೇವರ ಮಹಾರಥವನ್ನು ಎಳೆದರು. ಬ್ರಹ್ಮರಥವು ರಾಜಗಾಂಭೀರ್ಯದಿಂದ ಅತ್ಯಂತ ಸಲೀಸಾಗಿ, ಆಕರ್ಷಕವಾಗಿ ರಥಬೀದಿಯಲ್ಲಿ ಮುನ್ನಡೆಯಿತು. ವರ್ಷದಲ್ಲಿ ಒಂದು ಬಾರಿ ನಡೆಯುವ ರಥೋತ್ಸವದ ಸಂದರ್ಭದಲ್ಲಿ ಸಹಸ್ರಾರು ಮಂದಿ ಶ್ರೀ ದೇವರ ವೈಭವದ ರಥೋತ್ಸವವನ್ನು ವೀಕ್ಷಿಸಿ ಕೃತಾರ್ಥರಾದರು. ರಥೋತ್ಸವದ ಮೊದಲು ದೇವಸ್ಥಾನದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಅನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ 6.57 ರ ವೃಶ್ಚಿಕ ಲಗ್ನದ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ, ಸುಳ್ಯ ಶಾಸಕರಾದ ಕುl ಭಾಗೀರಥಿ, ಮಾಜಿ ಸಚಿವರಾದ ರಮಾನಾಥ ರೈ, ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ವ್ಯವಸ್ಥಾಪನಾ ಸಮಿತಿ ನಿಕಟ ಪೂರ್ವ ಅಧ್ಯಕ್ಷರಾದ ಮೋಹನ್ ರಾಂ ಸುಳ್ಳಿ, ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ರಥ ದಾನಿ ಅಜಿತ್ ಶೆಟ್ಟಿ, ಎಸ್.ಪಿ ಯತೀಶ್ ಎನ್, ಡಿ.ವೈ.ಎಸ್. ಪಿ ಡಾl ಅರುಣ್ ನಾಗೇಗೌಡ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಾಕ್ಕಳ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ, ಅಚ್ಚುತ ಗೌಡ ಆಲ್ಕಬೆ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾವಿರಾರು
ಸುಬ್ರಹ್ಮಣ್ಯ ದೇವರ ಭಕ್ತರು ಉಪಸ್ಥಿತರಿದ್ದರು.
- Thursday
- December 12th, 2024