ಗ್ರಂಥಾಲಯಗಳು ನಮ್ಮ ಅರಿವಿನ ಜ್ಞಾನ ದೀವಿಗೆಗಳು. ಈ ಅಕ್ಷರ ಭಂಡಾರ ಅಕ್ಷಯ ಭಂಡಾರ. ಡಿಜಿಟಲ್ ಜಗತ್ತಿನಲ್ಲಿಯೂ ಪುಸ್ತಕ ಪ್ರಪಂಚದ ಮೌಲ್ಯ ಮರೆಯಬಾರದು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಹೇಳಿದರು.
ಕರ್ನಾಟಕ ಸರ್ಕಾರ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ. ಕ. ಜಿಲ್ಲಾ ಪಂಚಾಯತ್ ಮಂಗಳೂರು , ತಾಲೂಕು ಪಂಚಾಯತ್ ಸುಳ್ಯ, ಗ್ರಾಮ ಪಂಚಾಯತ್ ಬೆಳ್ಳಾರೆ, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರ ಬೆಳ್ಳಾರೆ ಆಶ್ರಯದಲ್ಲಿ ಮಾತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜರುಗಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2024 ರ ಸಮಾರೋಪ ಸಮಾರಂಭ ಇಂದು ಬೆಳ್ಳಾರೆ ರಾಜೀವ್ ಗಾಂಧೀ ಸೇವಾ ಕೇಂದ್ರದಲ್ಲಿ ನಡೆದಿದ್ದು ಈ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಮಿತಾ ಎಲ್ ರೈ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮುಖ್ಯ ಅತಿಥಿಯಾಗಿ ಮಾತನಾಡಿ ಬೆಳ್ಳಾರೆಯಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣಗೊಳ್ಳಬೇಕಿದ್ದು, ಪಂಚಾಯತ್ ಪ್ರಯತ್ನಕ್ಕೆ ಪೂರಕ ಸಹಕಾರ ನೀಡುವುದಾಗಿ ಹೇಳಿದರು.
ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಉಮೇಶ್ ಮಣಿಕ್ಕಾರ ಅತಿಥಿಯಾಗಿ ಭಾಗವಹಿಸಿದ್ದರು.
ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಣ ತರಬೇತಿ ವಿದ್ಯಾರ್ಥಿಗಳು ಆಶಯ ಗೀತೆ ಹಾಡಿದರು. ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಮುಖ್ಯೋಪಾಧ್ಯಾಯರು ಹಾಗೂ ಗ್ರಂಥಾಲಯ ಸಲಹಾ ಸಮಿತಿ ಸದಸ್ಯರಾದ ಮಾಯಿಲಪ್ಪ ಜಿ. ಸ್ವಾಗತಿಸಿ, ಬೆಳ್ಳಾರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ. ವಿ. ವಂದಿಸಿದರು ನಿಶ್ಮಿತಾ ಬೀಡು ಕಾರ್ಯಕ್ರಮ ನಿರೂಪಿಸಿದರು.