ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೇನು ಕೃಷಿಕರ ಸಮ್ಮಿಲನ ಕಾರ್ಯಕ್ರಮವು ನ.18ರಂದು ಪುತ್ತೂರು ಬೀರಮಲೆ ಬೆಟ್ಟದ ಗಾಂಧೀ ಮಂಟಪದಲ್ಲಿ ಸಂಜೆ ಗಂಟೆ 6ಕ್ಕೆ ನಡೆಯಿತು. ಕಾರ್ಯಕ್ರಮವನ್ನು ಬೀರಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ರೊ. ಜಗಜೀವನ್ ದಾಸ್ ರೈ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ ಕೋಲ್ಚಾರ್ ಹಾಗೂ ಸುಳ್ಯ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಶ್ರೀ ವೀರಪ್ಪ ಗೌಡ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಜನ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮೂಲಚಂದ್ರ ಕುಕ್ಕಾಡಿ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದಲ್ಲಿ ಸಂಸ್ಥೆಯ ಉದ್ದೇಶ, ನಡೆದು ಬಂದ ಹಾದಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸಂಸ್ಥೆಯ ನಿರ್ದೇಶಕರಾದ ಶ್ರೀ ರಾಮ ಪ್ರತೀಕ್ ಕರಿಯಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಳಿಕ ನಡೆದ ಚಿಂತನ – ಮಂಥನದಲ್ಲಿ ಜೇನು ಕೃಷಿಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು, ಮಾರುಕಟ್ಟೆ, ಜೇನಿಗೆ ನಿರ್ದಿಷ್ಟ ಬೆಲೆ ನಿಗದಿಪಡಿಸುವುದು, ಜೇನು ಮತ್ತು ಜೇನಿನ ಮೌಲ್ಯವರ್ಧನೆ, ಜೇನಿನ ಔಷಧೀಯ ಗುಣಗಳು, ಸ್ಥಳಾಂತರ ಜೇನು ಕೃಷಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಕರಾವಳಿಯ ಜೇನಿಗೆ ತನ್ನದೇ ಆದ ವಿಶಿಷ್ಟ ವಿಶೇಷಗಳಿದ್ದು ಅದಕ್ಕೆ ಒಂದು ನಿರ್ದಿಷ್ಟ ಬ್ರಾಂಡ್ ಬೇಕು ಅನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. 50ಕ್ಕೂ ಅಧಿಕ ಆಹ್ವಾನಿತ ಜೇನು ಕೃಷಿಕರು ಭಾಗವಹಿಸಿದ್ದ ಈ
ಸಭಾ ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಸುವರ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸಂಸ್ಥೆಯ ನಿರ್ದೇಶಕರಾದ ನಿರಂಜನ್ ಪೋಳ್ಯ ಕಾರ್ಯಾಗಾರವನ್ನು ನಿರ್ವಹಿಸಿದರು. ನಿರ್ದೇಶಕರಾದ ಶ್ರೀನಂದನ ಕುಂಞಿಹಿತ್ಲು ವಂದಿಸಿದರು. ನಿರ್ದೇಶಕರಾದ ಶ್ರೀಹರ್ಷ ಎಕ್ಕಡ್ಕ , ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.