ಹರ್ನಿಯಾ ಎನ್ನುವುದು ಹೊಟ್ಟೆಯ ಅಥವಾ ಕಿಬ್ಬೊಟ್ಟೆಯ ಭಾಗದಲ್ಲಿ ಕಂಡುಬರುವ ವೈದ್ಯಕೀಯ ಸ್ಥಿತಿಯಾಗಿದ್ದು, ಹೊಟ್ಟೆಯ ಭಾಗದ ಅಂಗಗಳು ಸ್ನಾಯು ಅಥವಾ ಅಂಗಾಂಗಗಳ ನಡುವೆ ತೂರಿಕೊಂಡು ಚರ್ಮದ ಕೆಳ ಭಾಗದಲ್ಲಿ ಬಲೂನಿನಂತೆ ಊದಿಕೊಂಡು ಅಥವಾ ಸರಿದುಕೊಂಡು ಮಾಯವಾಗುವ ಸ್ಥಿತಿಯಾಗಿರುತ್ತದೆ. ಅಚ್ಚಕನ್ನಡದಲ್ಲಿ ಉಸುರು ಬುರುಡೆ ಅಥವಾ ಬೂರು ಎಂದು ಕರೆಯುತ್ತಾರೆ. ನಾವು ಉಸಿರು ದೀರ್ಘವಾಗಿ ತೆಗೆದುಕೊಂಡಾಗ ಹೊಟ್ಟೆಯ ಭಾಗದಲ್ಲಿ ಒತ್ತಡ ಜಾಸ್ತಿಯಾಗಿ ಹೊಟ್ಟೆಯ ಭಾಗದ ಅಂಗಗಳು ಮತ್ತು ಸ್ನಾಯುಗಳು ಬಲಹೀನವಾದಾಗ ಅಥವಾ ರಂಧ್ರಗಳ ಮುಖಾಂತರ ಹೊರಚಾಚಿ ಊದಿಕೊಳ್ಳುತ್ತದೆ. ಸಾಮಾನ್ಯವಾಗಿ ಹೊಟ್ಟೆಯೊಳಗಿನ ಕರುಳು ಮತ್ತು ಒಮೆಂಟಮ್ ಅಥವಾ ಮುಸುಕು ಪೊರೆ ಈ ರೀತಿಯಾಗಿ ಜಾರಿಕೊಂಡು ಬಲೂನಿನಂತೆ ಊದಿಕೊಳ್ಳುತ್ತದೆ. ಸರ್ಜರಿಗೆ ಮಾತ್ರ ಸ್ಪಂದಿಸುವ ರೋಗ ಇದಾಗಿರುತ್ತದೆ. ಔಷಧಿಯಿಂದ ಸರಿಪಡಿಸಲಾಗದ ದೇಹಸ್ಥ್ತಿತಿ ಇದಾಗಿರುತ್ತದೆ. ನಮ್ಮ ದೇಹದಲ್ಲಿ ಕಂಡುಬರುವ ಹರ್ನಿಯಾಗಳಲ್ಲಿ ಬಹುತೇಕವಾದವುಗಳು ಗೆಜ್ಜೆಕಟ್ಟು ( ತೊಡೆ ಸಂದು) ಮತ್ತು ಹೊಕ್ಕಳು ಭಾಗದಲ್ಲಿ ಕಂಡುಬರುತ್ತದೆ. ಹೊಕ್ಕಳು ಭಾಗದಲ್ಲಿ ನಡೆಸಲಾದ ಸರ್ಜರಿ ಬಳಿಕ ಉಂಟಾಗುವ ಹರ್ನಿಯಾವನ್ನು ಇನ್ಸಿಷನಲ್ ಹರ್ನಿಯಾ ಎಂದೂ ಸಂಬೋಧಿಸಲಾಗುತ್ತದೆ. ಎದೆಭಾಗದ ಕೆಳಗಿನ ಭಾಗದಲ್ಲಿ, ಹೊಟ್ಟೆಯ ವಫೆಯ ಕೆಳಭಾಗದಲ್ಲಿ ಮತ್ತು ತೊಡೆ ಸಂದಿನ ಭಾಗದಲ್ಲಿಯೂ ಹರ್ನಿಯಾ ಕಂಡುಬರಬಹುದು. ಹೊಕ್ಕಳುಭಾಗದಲ್ಲಿ ಕಂಡುಬರುವ ಹರ್ನಿಯಾಕ್ಕೆ ಅಂಬಲಿಕಲ್ ಹರ್ನಿಯಾ ಎಂದು ಕರೆಯಲಾಗುತ್ತದೆ. ತೊಡೆ ಸಂದಿನಲ್ಲಿ ಉಂಟಾಗುವ ಹರ್ನಿಯಕ್ಕೆ ಇಂಗ್ವೈನಲ್ ಹರ್ನಿಯಾ ಅಥವಾ ಗೆಜ್ಜೆಕಟ್ಟು ಹರ್ನಿಯಾ ಎಂದೂ ಕರೆಯಲಾಗುತ್ತದೆ.
ಕಾರಣಗಳು:
ಇಂತಹುದೇ ನಿರ್ದಿಷ್ಟ ಕಾರಣಗಳು ಇಲ್ಲದೆಯೂ ಹರ್ನಿಯಾ ಉಂಟಾಗಬಹುದು.
- ಉದರದ ಸ್ನಾಯುಗಳಲ್ಲಿ ಜನ್ಮಜಾತವಾಗಿ ಬರುವ ನ್ಯೂನತೆ ಅಥವಾ ಶಕ್ತಿಹೀನತೆಯಿಂದಾಗಿ ಹರ್ನಿಯಾ ಹೆಚ್ಚಾಗಿ ಕಂಡು ಬರುತ್ತದೆ. ಅತಿಯಾದ ಕೆಮ್ಮು, ಮಲಬದ್ದತೆ, ಪೌಷ್ಠಿಕತೆ ಕೊರತೆ, ಬೊಜ್ಜು, ಅತಿಯಾದ ಭಾರ ಎತ್ತುವ ಕ್ರೀಡೆಗಳು ಮತ್ತು ವೃತ್ತಿಗಳಿಂದ ಇಂತಹಾ ಬಲಹೀನ ಜಾಗಗಳನ್ನು ಮತ್ತಷ್ಟು ದುರ್ಬಲಗೊಳಿಸಿ ಕರುಳನ್ನು ಹೊರ ಚಾಚುವಂತೆ ಮಾಡಿ ಹರ್ನಿಯಕ್ಕೆ ಕಾರಣವಾಗುತ್ತದೆ. ಮೊದಮೊದಲು ಸಣ್ಣವಾಗಿದ್ದ ಹರ್ನಿಯಾ ಕ್ರಮೇಣ ದೊಡ್ಡದಾಗುತ್ತಾ ಹೋಗುತ್ತದೆ. ಯಾವುದೇ ವಯಸ್ಸಿನಲ್ಲಿ ಹರ್ನಿಯಾ ಉಂಟಾಗಬಹುದು. ಸ್ನಾಯುಗಳಲ್ಲಿ ಬಲಹೀನತೆ ಉಂಟಾಗಿ ಕೆಮ್ಮಿದಾಗ, ಸೀನಿದಾಗ, ದೊಡ್ಡದಾಗಿ ಉಸಿರು ಒಳಗೆ ತೆಗೆದುಕೊಂಡಾಗ ಅಂಗಾಂಗಗಳು ಈ ಸ್ನಾಯುಗಳ ಮುಖಾಂತರ ಹೊರಚಾಚಿ ಚರ್ಮದ ಕೆಳಗೆ ಗಡ್ಡೆಗಳಂತೆ ಅಥವಾ ಬಲೂನಿನಂತೆ ಕಂಡುಬರುತ್ತದೆ.
- ಕೆಲವೊಮ್ಮೆ ಹೊಟ್ಟೆಯ ಸರ್ಜರಿ ಮಾಡಿದ ಬಳಿಕ ಹೊಟ್ಟೆಯ ಸ್ನಾಯುಗಳನ್ನು ಸರಿಯಾಗಿ ಹೊಲಿಗೆ ಹಾಕದಿದ್ದಲ್ಲಿ ಸ್ನಾಯುಗಳ ಬಲಹೀನತೆ ಉಂಟಾಗಿ ಹರ್ನಿಯಾ ಕಂಡುಬರುತ್ತದೆ. ಇದನ್ನು ಇನ್ಸಿಷನರ್ ಹರ್ನಿಯಾ ಎನ್ನುತ್ತಾರೆ.
- ವಯಸ್ಸಾದಂತೆ ಸ್ನಾಯುಗಳು ಬಲಹೀನವಾಗಿ ಹರ್ನಿಯಾ ಆಗುವ ಸಾಧ್ಯತೆ ಇರುತ್ತದೆ.
- ಅತಿಯಾಗಿ ದೈಹಿಕ ಪರಿಶ್ರಮ ಇರುವ ವೃತ್ತಿ ಮತ್ತು ಕ್ರೀಡೆಗಳಿಂದಲೂ ಹೊಟ್ಟೆಯ ಸ್ನಾಯುಗಳು ಬಲಹೀನವಾಗಿ ಹರ್ನಿಯಾ ಉಂಟಾಗಬಹುದು
ಲಕ್ಷಣಗಳು ಏನು?
1) ಹರ್ನಿಯಾ ಉಂಟಾದಾಗ ಹೊಟ್ಟೆಯ ಹೊಕ್ಕಳಿನ ಸುತ್ತ ಮತ್ತು ಕಿಬ್ಬೊಟ್ಟೆಯ ಭಾಗದಲ್ಲಿ ಗಂಟಿನಂತೆ ಅಥವಾ ಉಬ್ಬಿದಂತೆ ಕಂಡು ಬರುತ್ತದೆ. ಅದೇ ರೀತಿ ಇಂಗ್ವೈನಲ್ ಅಥವಾ ಗೆಜ್ಜೆಕಟ್ಟಿನ ಭಾಗದಲ್ಲಿ ಊದಿಕೊಂಡು ಗಂಟಿನಂತೆ ಭಾಸವಾಗುತ್ತದೆ. ಮಲಗಿದಾಗ ಅಥವಾ ಬೆರಳಿನಿಂದ ಒತ್ತಿದಾಗ ಈ ಗಂಟು ಮಾಯವಾಗುತ್ತದೆ. ಅದೇ ರೀತಿ ಮಲಗಿದಾಗ ಈ ಗಂಟು ಕಂಡುಬರದೇ ಇರಬಹುದು. ಹಾಗೆಯೇ ಕೆಮ್ಮಿದಾಗ ಮತ್ತು ಜೋರಾಗಿ ಉಸಿರು ತೆಗೆದುಕೊಂಡಾಗ ಈ ಗಂಟಿನ ಗಾತ್ರ ಹಿಗ್ಗುತ್ತದೆ.
2) ಸಾಮಾನ್ಯವಾಗಿ ಈ ಉಬ್ಬಿದ ಗಂಟಿನಲ್ಲಿ ನೋವು ಇರುವುದಿಲ್ಲ. ಆದರೆ ಗಂಟಿನ ಗಾತ್ರ ಜಾಸ್ತಿಯಾದಂತೆ ನೋವು ಇರುವ ಸಾಧ್ಯತೆ ಇರುತ್ತದೆ. ಆದರೆ ಕೆಲವೊಮ್ಮೆ ಈ ಜಾರಿದ ಅಂಗದ ಭಾಗ ಅಲ್ಲೇ ಸಿಕ್ಕಿಹಾಕಿಕೊಂಡು ತನ್ನ ಮೂಲಸ್ಥಾನಕ್ಕೆ ಹೋಗಲು ಸಾಧ್ಯವಾಗದೆ, ಕರುಳು ಚಲನೆಗೆ ಅಡಚಣೆ ಉಂಟಾಗಿ ಮಲಬದ್ಧತೆ, ನೋವು, ಯಾತನೆ ,ಸೆಳೆತ ಮುಂದುವರಿದ ಹಂತದಲ್ಲಿ ಇರುತ್ತದೆ.
3) ಹರ್ನಿಯಾ ಉಂಟಾದ ಜಾಗ, ಗಾತ್ರ ಮತ್ತು ವ್ಯಕ್ತಿಯ ಚಲನವಲನಗಳ ಮೇಲೆ ಹೊಂದಿಕೊಂಡು ಈ ಹರ್ನಿಯಾದ ಲಕ್ಷಣಗಳು ಗೋಚರಿಸುತ್ತದೆ.
ಸಮಸ್ಯೆ/ತೊಂದರೆಗಳು ಏನು? ಸಾಮಾನ್ಯವಾಗಿ ಹೆಚ್ಚಿನ ಹರ್ನಿಯಾಗಳಿಂದ ಯಾವುದೇ ರೀತಿಯ ತೊಂದರೆ ಉಂಟಾಗದೇ ಇರಬಹುದು. ನಿಮ್ಮ ದೈನಂದಿನ ಚಟುವಟಿಕೆಯನ್ನು ಯಾವುದೇ ತೊಂದರೆ ಇಲ್ಲದೆ ಮಾಡಲು ಸಾಧ್ಯವಾಗುವುದಿದ್ದರೆ ಚಿಕಿತ್ಸೆ ಅಗತ್ಯವಿಲ್ಲ. ಆದರೆ ಪದೇ ಪದೇ ನೋವು, ಯಾತನೆ, ಸ್ನಾಯು ಸೆಳೆತ, ಗಾತ್ರ ದೊಡ್ಡದಾಗುತ್ತಲೇ ಇರುವುದು. ಜ್ವರ, ವಾಂತಿ, ವಾಕರಿಕೆ ಆರಂಭವಾದಲ್ಲಿ ತಕ್ಷಣವೇ ತಜ್ಷ ವೈದ್ಯರ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಅತ್ಯಗತ್ಯ. ಈ ಲಕ್ಷಣಗಳನ್ನು ನಿರ್ಲಕ್ಷಿಸಲೇ ಬಾರದು. ಕರುಳು ಜಾರಿಕೊಂಡು ಹರ್ನಿಯಾ ಚೀಲದಲ್ಲಿ ಸಿಕ್ಕಿಹಾಕಿಕೊಂಡಲ್ಲಿ ತೊಂದರೆ ಕಟ್ಟಿಟ್ಟ ಬುತ್ತಿ. ಹೀಗೆ ಜಾರಿಕೊಂಡ ಕರುಳು, ಹರ್ನಿಯಾ ಚೀಲದ ಕುತ್ತಿಗೆಯ ಭಾಗದಲ್ಲಿ ನೇಣು ಬಿಗಿದಂತಾಗಿ ಮರಳಿ ಸ್ವಸ್ಥಾನಕ್ಕೆ ಹೋಗಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ಕರುಳು ಉರಿಯೂತದಿಂದ ಊದಿಕೊಂಡು, ಬಾವು ಕೀವು ಉಂಟಾಗಿ ಹಿಸುಕಿದಂತಾದ ಕರುಳಿಗೆ ರಕ್ತ ಪರಿಚಲನೆ ಇಲ್ಲದಾಗಿ, ಆ ಭಾಗದ ಕರುಳು ಕೊಳೆತು ಹೋಗಿ ಗ್ಯಾಂಗ್ರಿನ್ ಆಗುವ ಸಾಧ್ಯತೆ ಇರುತ್ತದೆ. ಇದೊಂದು ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ಜೀವಕ್ಕೆ ಗಂಡಾಂತರವಾಗುವ ಸಾಧ್ಯತೆಯೂ ಇರುತ್ತದೆ. ಈ ಕಾರಣದಿಂದ ನಿಮಗೆ ಹೊಟ್ಟೆಭಾಗದಲ್ಲಿ ಮತ್ತು ತೊಡೆ ಸಂಧಿಯಲ್ಲಿ ಹರ್ನಿಯಾ ಇದ್ದಲ್ಲಿ ನಿರ್ಲಕ್ಷ್ಯ ಮಾಡದೇ ತಕ್ಷಣವೇ ವೈದ್ಯರ ಬಳಿ ತೋರಿಸಿಕೊಳ್ಳತಕ್ಕದ್ದು.
ಪತ್ತೆ ಹಚ್ಚುವುದು ಹೇಗೆ?
1) ಕೂಲಂಕುಶವಾದ ದೈಹಿಕ ಪರೀಕ್ಷೆ ಮುಖಾಂತರ ತಜ್ಞ ವೈದ್ಯರ ಹರ್ನಿಯಾವನ್ನು ಪತ್ತೆ ಹಚ್ಚುತ್ತಾರೆ. ನೀವು ಕೆಮ್ಮಿದಾಗ ಉಸಿರು ತೆಗೆದುಕೊಂಡಾಗ ಮತ್ತು ಮಲಗಿದಾಗ ಈ ಗಂಟಿನ ಪರೀಕ್ಷೆ ಮಾಡಿ ಅದರ ಗಾತ್ರ, ಜಾಗ ಮತ್ತು ಸಂಧಿಗ್ಧತೆಯನ್ನು ಹಾಗೂ ಸಂಕೀರ್ಣತೆಯನ್ನು ಪತ್ತೆ ಹಚ್ಚುತ್ತಾರೆ. ಸಾಮಾನ್ಯವಾಗಿ ಸಿಟಿಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಅಗತ್ಯವಿರುವುದಿಲ್ಲ. ಆದರೆ ಇದರ ಅಗತ್ಯ ಇದ್ದಲ್ಲಿ ವೈದ್ಯರ ಆದೇಶದಂತೆ ಈ ಪರೀಕ್ಷೆ ಮಾಡಿಸತಕ್ಕದ್ದು. ಜ್ವರ, ವಾಂತಿ, ವಾಕರಿಕೆ ಸುಸ್ತು ಇದ್ದಲ್ಲಿ ರಕ್ತಪರೀಕ್ಷೆ ಅಗತ್ಯವಿರುತ್ತದೆ. ರಕ್ತದಲ್ಲಿ ಸೋಂಕು ಇದ್ದರೆ ಬೇರೆ ಪರೀಕ್ಷೆಗಳೂ ಅಗತ್ಯವಿರುತ್ತದೆ.
ಚಿಕಿತ್ಸೆ ಹೇಗೆ?
1) ಸಣ್ಣ ಗಾತ್ರದ ಹರ್ನಿಯಾಗಳಿಗೆ ಚಿಕಿತ್ಸೆ ಅಗತ್ಯವಿರುವುದಿಲ್ಲ. ದೊಡ್ಡಗಾತ್ರದ ಹರ್ನಿಯಾಗಳಿಗೆ ಸರ್ಜರಿ ಅತೀ ಅಗತ್ಯ
2) ಯಾವುದೇ ಔಷಧಿಯಿಂದ ಹರ್ನಿಯಾವನ್ನು ಸರಿಪಡಿಸಲು ಸಾಧ್ಯವಿಲ್ಲ.
3) ಸಾಮಾನ್ಯವಾಗಿ ಹರ್ನಿಯಾ ಕಾಲ ಕಳೆದಂತೆ ದೊಡ್ಡದಾಗುತ್ತಲೇ ಹೋಗುತ್ತದೆ. ಸಮಯ ಸಂದರ್ಭ ನೋಡಿಕೊಂಡು ವೈದ್ಯರು ಯಾವಾಗ ಹೇಗೆ, ಯಾವ ಸರ್ಜರಿ ಎಂಬುದನ್ನು ನಿರ್ಧರಿಸುತ್ತಾರೆ.
4) ಮಕ್ಕಳಲ್ಲಿ ಕಂಡುಬರುವ ಹೊಕ್ಕಳ ಬಳ್ಳಿ ಹರ್ನಿಯಾಕ್ಕೆ ಹೆಚ್ಚಾಗಿ ಸರ್ಜರಿ ಮಾಡಿಸಲೇ ಬೇಕಾಗುತ್ತದೆ.
5) ಸರ್ಜರಿಗಳಲ್ಲಿ ಹಲವು ವಿಧಗಳಿವೆ. ಓಪನ್ ಸರ್ಜರಿ ಅಥವಾ ತೆರೆದ ಸರ್ಜರಿ ಬಹಳ ಹಿಂದಿನಿಂದಲೂ ಜಾರಿಯಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಲ್ಯಾಪರೋಸ್ಕೋಪಿಕ್ ಯಂತ್ರದ ಮುಖಾಂತರ ಕೀಹೋಲ್ ಸರ್ಜರಿ ಮಾಡಿ ಹರ್ನಿಯಾವನ್ನು ರಿಪೇರಿ ಮಾಡುತ್ತಾರೆ. ಸಣ್ಣದಾದ ಗಾತ್ರ ಮತ್ತು ಕಡಿಮೆ ನೋವು ಇರುವ ಕಾರಣ ವೈದ್ಯರು ಈ ಕೀ ಹೋಲ್ ಸರ್ಜರಿಗೆ ಆದ್ಯತೆ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ರೋಬೋಟಿಕ್ ಸರ್ಜರಿ ಕೂಡಾ ಲಭ್ಯವಿದೆ. ನುರಿತ ವೈದ್ಯರು ಕಂಪ್ಯೂಟರ್ ಸಹಾಯದಿಂದ ರೋಬೋಟ್ ಯಂತ್ರದ ಮುಖಾಂತರ ಈ ಹರ್ನಿಯಾಕ್ಕೆ ಚಿಕಿತ್ಸೆ ನೀಡುತ್ತಾರೆ.
ತಡೆಗಟ್ಟುವುದು ಹೇಗೆ?
- ಜೀವನ ಶೈಲಿ ಬದಲು ಮಾಡಿ ಬೊಜ್ಜು ಕರಗಿಸಿ ದೇಹವನ್ನು ಸುಸ್ಥತಿಯಲ್ಲಿ ಇಟ್ಟುಕೊಳ್ಳಬೇಕು.
- ಅತಿಯಾದ ಭಾರ ಇರುವ ವಸ್ತುಗಳನ್ನು ಎತ್ತಬಾರದು.
- ಅತಿಯಾದ ಕೆಮ್ಮು ಇರದಂತೆ ಮಡಿಕೊಳ್ಳಬೇಕು.
- ಆಹಾರ ಶೈಲಿ ಬದಲಿಸಿ ಮಲಬದ್ಧತೆ ಬರದಂತೆ ಎಚ್ಚರ ವಹಿಸಬೇಕು.
- ಬೀಡಿ, ಸಿಗರೇಟು, ಮಧ್ಯಪಾನ ಮುಂತಾದ ವ್ಯಸನಗಳಿಗೆ ತಿಲಾಂಜಲಿ ಇಡಬೇಕು.
- ಹರ್ನಿಯಾ ಇರುವವರು ದೈಹಿಕ ಪರಿಶ್ರಮ ಇರುವ ಕೆಲಸ ಮತ್ತು ಕ್ರೀಡೆಗಳಿಂದ ದೂರ ಇರಬೇಕು.
- ಮೂತ್ರ ಸಂಬಂಧಿ ಕಾಯಿಲೆ, ಮಲವಿಸರ್ಜನೆ ಸಂಬಂಧಿ ಕಾಯಿಲೆ ಇದ್ದಲ್ಲಿ ತಕ್ಷಣವೇ ವೈದ್ಯರ ಬಳೀ ತೋರಿಸಿ ಚಿಕಿತ್ಸೆ ಪಡೆಯಬೇಕು. ಕಷ್ಟಪಟ್ಟು ತಿಣುಕಾಡಿ ಮಲಮೂತ್ರ ವಿಸರ್ಜನೆ ಮಾಡುವ ಹವ್ಯಾಸಕ್ಕೆ ತಿಲಾಂಜಲಿ ಇಡಬೇಕು. ತಕ್ಷಣ ಚಿಕಿತ್ಸೆ ಪಡೆಯ ತಕ್ಕದ್ದು.
- ಹರ್ನಿಯ ಉಂಟಾಗಿ ಕರುಳು ಅಥವಾ ಇನ್ನಾವುದೇ ಅಂಗ ಸಿಕ್ಕಿ ಹಾಕಿಕೊಂಡಾಗ ಹಳ್ಳಿ ಮದ್ದು, ಸ್ವಯಂಮದ್ದುಗಾರಿಕೆ, ತಾಯಿತ, ಪೂಜೆ ಪುರಸ್ಕಾರ ಮುಂತಾದ ಅವೈಜ್ಞಾನಿಕ ಚಿಕಿತ್ಸೆಗಳಿಗೆ ಮೊರೆ ಹೋಗಲೇಬಾರದು.
ಕೊನೆಮಾತು: ವಾರ್ಷಿಕವಾಗಿ ಒಂದು ಮಿಲಿಯನ್ ಮಂದಿ ನಮ್ಮ ಭಾರತ ದೇಶದಲ್ಲಿ ಈ ಹರ್ನಿಯಾ ಸಮಸ್ಯೆಗೆ ತುತ್ತಾಗುತ್ತಾರೆ. ಔಷಧಿಗೆ ಬಗ್ಗದ, ಸರ್ಜರಿಗೆ ಸ್ಪಂದಿಸುವ ಸಮಸ್ಯೆ ಇದಾಗಿದ್ದು, ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯವಿದೆ. ಇದರ ಜೊತೆಗೆ ಜೀವನಶೈಲಿ ಹಾಗೂ ಆಹಾರ ಪದ್ಧತಿ ಬದಲಾಯಿಸಿ ಮತ್ತೆ ಹರ್ನಿಯಾ ಮರುಕಳಿಸದಂತೆ ಆರೋಗ್ಯವಂತ ಜೀವನಶೈಲಿ ಬೆಳೆಸಿಕೊಳ್ಳುವುದರಲ್ಲಿಯೂ ಜಾಣತನ ಅಡಗಿದೆ.
ಡಾ|| ಮುರಲೀಮೋಹನ್ ಚೂಂತಾರು
BDS,MDS,DNB,MBA,MOSRCSEd
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
Mob:9845135787