ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ 108 ಅಂಬ್ಯುಲೆನ್ಸ್ ವಾಹನವನ್ನು ಆಸ್ಪತ್ರೆಯ ಶೆಡ್ ನಲ್ಲಿ ನಿಲ್ಲಿಸಲು ಆಸ್ಪತ್ರೆಯವರು ತಕರಾರು ಮಾಡುತ್ತಿರುವುದರಿಂದ ಅಂಬ್ಯುಲೆನ್ಸ್ ನಿಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು 108 ಅಂಬ್ಯುಲೆನ್ಸ್ ಚಾಲಕರು ಮತ್ತು ಸಿಬ್ಬಂದಿ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಸೂಚನೆ ಮೇರೆಗೆ ಸುಳ್ಯ ಸರಕಾರಿ ಆಸ್ಪತ್ರೆಯ ಶೆಡ್ ನಲ್ಲಿ ವಾಹನ ನಿಲ್ಲಿಸಲು ಹಾಗೂ ವಿಶ್ರಾಂತಿ ಕೊಠಡಿ ಹಾಗೂ ಶೌಚಾಲಯ ಬಳಸಲು ಅವಕಾಶ ಕಲ್ಪಿಸಿದ್ದಾರೆಂಸು ತಿಳಿದುಬಂದಿದೆ.
ಕಳೆದ 8 ವರ್ಷಗಳಿಂದ ತಾಲೂಕು ಆಸ್ಪತ್ರೆ ಸುಳ್ಯ ಇಲ್ಲಿ 108 ಅಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದು, ಈ ಆಂಬುಲೆನ್ಸ್ ನಿಲುಗಡೆಗೆ ತಾತ್ಕಾಲಿಕ ಶೆಡ್ ಒಂದನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇತ್ತೀಚೆಗಿನ ಕೆಲಸ ಸಮಯದಿಂದ ಅಲ್ಲಿ ಅಂಬುಲೆನ್ಸ್ ನಿಲ್ಲಿಸುವುದಕ್ಕೆ ಆಸ್ಪತ್ರೆಯವರು ಆಕ್ಷೇಪ ವ್ಯಕ್ತಪಡಿಸತೊಡಗಿದ್ದಾರೆ. 108 ಅಂಬುಲೆನ್ಸ್ ನಲ್ಲಿ ಮಹಿಳಾ ಸಿಬ್ಬಂದಿಗಳು ಕೂಡ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಸರಿಯಾದ ಶೌಚಾಲಯ ಮತ್ತು ರೂಮಿನ ವ್ಯವಸ್ಥೆ ಇರುವುದಿಲ್ಲ. ಆದುದರಿಂದ, ತಾವು ಈ ಬಗ್ಗೆ ಗಮನಹರಿಸಿ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಸಚಿವರಿಗೆ ಮನವಿ ಮಾಡಿದ್ದರು ಹಾಗೂ ಸುಳ್ಯ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಗಳನ್ನು 108 ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವುದಿಲ್ಲ ಎಂದು ಆಸ್ಪತ್ರೆಯ ಮಲತಾಯಿ ಧೋರಣೆಯ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಇದೀಗ ಸಚಿವರ ಸೂಚನೆಯಿಂದ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತಾಗಿದೆ.