ಯುವ ಜನತೆ ಎಚ್ಷೆತ್ತುಕೊಂಡು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಿದೆ, ಭ್ರಷ್ಟಾಚಾರ ಕಂಡಲ್ಲಿ ಲೋಕಾಯುಕ್ತವನ್ನು ಸಂಪರ್ಕಿಸಿ – ಡಾ. ಗಾನ
ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಮಂಗಳೂರು ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಗೃತಿ ಅರಿವು ಸಪ್ತಾಹವು ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಉನ್ನು ಡಿವೈಎಸ್ ಪಿ ಡಾ. ಗಾನಾ ಪಿ ಕುಮಾರ್ ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದಾಗ ಅದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯಗಳಲ್ಲಿ ಸ್ವಾಯತ್ತತಾ ತನಿಖಾ ಸಂಸ್ಥೆಗಳಿವೆ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯು ಯಾವುದೇ ದೂರುಗಳು ಬಂದಾಗ ಅವುಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳು ಮತ್ತು ದಳ್ಳಾಳಿಗಳ ವಿರುದ್ದ ಕ್ರಮ ಜರುಗಿಸುತ್ತಿದೆ ಇದರ ಬಗ್ಗೆ ಯುವ ಜನತೆಗೆ ಅರಿವು ಅಗತ್ಯವಾಗಿದೆ ಎಂದು ಹೇಳಿದರು . ಲೋಕಾಯುಕ್ತವು ಸರಕಾರಿ ಅಧಿಕಾರಿಗಳ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ 1974 ರಲ್ಲಿ ಜಾರಿಗೆ ಬಂದಿದ್ದು ಸಮಾಜದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಭ್ರಷ್ಟಾಚಾರ ಮಾಡುತ್ತಿದ್ದು ಅವುಗಳನ್ನು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೇ ಅಕ್ರಮ ಮರಳು ಗಣಿಗಾರಿಕೆ ,ಕಳಪೆ ಕಾಮಗಾರಿಗಳು, ಸರಕಾರಿ ಕಛೇರಿಗಳಲ್ಲಿ ಹಣಗಳನ್ನು ಪಡೆಯುವುದು ಸೇರಿದಂತೆ ಇತರೆ ದೂರುಗಳನ್ನು ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಸಲ್ಲಿಸಬಹುದು ಅಲ್ಲದೇ ತಡವಾಗಿ ಬೆಳಕಿಗೆ ಬಂದ ಪ್ರಕರಣವನ್ನು ನಮೂನೆ 1 ಮತ್ತು 2 ರಲ್ಲಿ ಅಫಿಡವಿತ್ ಮೂಲಕ ದೂರು ನೀಡಬಹುದು ಎಂದು ತಿಳಿಸಿದರು. ಅಲ್ಲದೇ ದೂರುದಾರರ ಹೆಸರುಗಳನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿದರು. ಬಳಿಕ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸತೀಶ್ ಕುಮಾರ್ ಕೆ ಆರ್ ಮಾತನಾಡಿ ಶಿಕ್ಷಕರಾದ ನಾವು ಮುಂದಿನ ದಿನಗಳಲ್ಲಿ ಸಮಾಜವನ್ನು ಕಟ್ಟುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಆದರೆ ಯುವ ಜನತೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜಾಗೃತರಾದಾಗ ಸಮಾಜದಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸುರೇಶ್ ಕುಮಾರ್ ಪಿ. ಪೊಲೀಸ್ ನಿರೀಕ್ಷಕರು, ಚಂದ್ರಶೇಖರ್ ಕೆ ಎನ್, ಪೊಲೀಸ್ ನಿರೀಕ್ಷಕರು , ಡಾ. ಜಯಶ್ರೀ ಕೆ, ಐ.ಕ್ಯೂ.ಎ.ಸಿ ಸಂಚಾಲಕರು , ರಾಮಕೃಷ್ಣ ಕೆ ಎಸ್ , ಉಪಸ್ಥಿತರಿದ್ದರು.
ಪಂಚಮಿ ಸ್ವಾಗತಿಸಿ, ದಿವ್ಯ ಜ್ಯೋತಿ ವಂದಿಸಿ, ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಭ್ರಷ್ಟಾಚಾರ ಕುರಿತಾದ ಪ್ರಬಂಧ ಮತ್ತು ರೀಲ್ಸ್ ಗಳ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು.