ರಸ್ತೆ ಅವ್ಯವಸ್ಥೆಯಿಂದ ವಾಹನ ಬರಲು ಸಾಧ್ಯವಾಗದೇ ಇದ್ದುದರಿಂದ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಹೊತ್ತುಕೊಂಡು ಹೋದ ಘಟನೆ ಮಡಪ್ಪಾಡಿ ಗ್ರಾಮದಲ್ಲಿ ನಡೆದಿದೆ. 15 ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆ ದುರಸ್ತಿ ಕಾಣದೇ ಹದಗೆಟ್ಟಿದ್ದು ವಾಹನ ಸಂಚಾರ ಕಷ್ಟವಾಗಿದೆ.
ಮಡಪ್ಪಾಡಿ ಗ್ರಾಮದ ನಡುಬೆಟ್ಟು ಪ್ರದೇಶದಲ್ಲಿನ ಹದಿನೈದು ಮನೆಗಳಿದ್ದು ರಸ್ತೆ ಸರಿ ಇಲ್ಲದೇ ಇರುವುದರಿಂದ ಜನ ಸಂಕಷ್ಟ ಪಡುವಂತಾಗಿದೆ. ಇಲ್ಲಿನ ನಿವಾಸಿಗಳಿಗೆ ಹೆಸರಿಗಷ್ಟೇ ಒಂದು ರಸ್ತೆ ಇದೆ. ಈ ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ಮಾತ್ರ 4×4 ಜೀಪು, ಪಿಕಪ್ ಸಂಚರಿಸುತ್ತದೆ. ರಸ್ತೆ ಬಗ್ಗೆ ತಿಳಿದಿರುವ ಅನುಭವಿ ವಾಹನಗಳ ಚಾಲಕರೂ ಮಾತ್ರ ಬಾಡಿಗೆಗೆ ಬರುತ್ತಾರೆ. ಮಳೆಗಾಲದಲ್ಲಿ ಅವರು ಕೂಡ ಬರಲು ಹಿಂಜರಿಯುತ್ತಾರೆ. ನಿರಂತರ ಸಮಸ್ಯೆ ಇರುವ ಕಾರಣ ಎಲ್ಲಾ ರೀತಿಯ ಕೃಷಿ ಉತ್ಪನ್ನ ಮತ್ತು ಮನೆ ಸಾಮಾಗ್ರಿ ಗಳನ್ನು ಹೊತ್ತೇ ಒಯ್ಯಬೇಕು. ನಿವಾಸಿಗಳ ಬೈಕ್ ಸ್ಕೂಟರ್ ಗಳನ್ನೂ 2 ಕಿ.ಮೀ. ದೂರದಲ್ಲಿ ಮನೆಯೊಂದರ ಪಕ್ಕ ರಸ್ತೆಯಲ್ಲಿ ನಿಲ್ಲಿಸಿ ನಡೆದು ಕೊಂಡು ಹೋಗುವುದೇ ದಿನಚರಿ ಆಗಿದೆ, ಇಲ್ಲಿ ಯಾರಿಗಾದರೂ ಅನಾರೋಗ್ಯಕ್ಕೆ ಒಳಗಾದರೇ 4 ಜನ ಸೇರಿ ಹೊತ್ತುಕೊಂಡು ಹೋದ ಹಲವು ಘಟನೆಗಳಿವೆ. ಚುನಾವಣಾ ಸಮಯದಲ್ಲಿ ಭರವಸೆ ನೀಡಿ ಹೋಗುತ್ತಾರೆ. ಆಮೇಲೆ ಜನರ ಸಮಸ್ಯೆ ಕೇಳುವವರಿಲ್ಲ. ಇನ್ನಾದರೂ ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಆದಷ್ಟೂ ಶೀಘ್ರ ಪರಿಹಾರ ಒದಗಿಸಿಕೊಡಬೇಕಾಗಿ ನಿವಾಸಿ ಪುರುಷೋತ್ತಮ ಅಮರ ಸುದ್ದಿಗೆ ತಿಳಿಸಿದ್ದಾರೆ.