ಜಾಲ್ಸೂರು ಪಂಚಾಯಿತ್ ವತಿಯಿಂದ ಸೋಣಂಗೇರಿಯಲ್ಲಿ ನಿರ್ಮಿಸಿದ್ದ ಬಸ್ ನಿಲ್ದಾಣವನ್ನು ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಸಂಪೂರ್ಣ ಮುಗಿದರೂ ಬಸ್ ನಿಲ್ದಾಣಕ್ಕೆ ಮಾತ್ರ ನೆಲೆ ಸಿಕ್ಕಿಲ್ಲ. ಈ ರಸ್ತೆ ಪ್ರಮುಖವಾಗಿ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಜಾಲ್ಸೂರು ಮುಂತಾದ ಗ್ರಾಮ ಮತ್ತು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ನೂರಾರು ವಿದ್ಯಾರ್ಥಿಗಳು,ಪ್ರಯಾಣಿಕರು ಸಂಚರಿಸುವ ಸ್ಥಳ ಇದಾಗಿದ್ದು, ಬಸ್ ನಿಲ್ದಾಣ ಆಗಬೇಕೆಂಬ ಕೂಗಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ವಿದ್ಯಾರ್ಥಿಗಳು, ವಯಸ್ಕರು, ಮಹಿಳೆಯರು ಮಳೆಗೆ ಕೊಡೆ ಹಿಡಿದು ಬಸ್ಸಿಗೆ ಕಾಯುವುದನ್ನು ಶಾಸಕರು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ನೋಡುತ್ತಾ ಸಂಚರಿಸುತ್ತಾರೆ. ಆದರೆ ಜನರ ಸಮಸ್ಯೆಗೆ ಇದುವರೆಗೆ ಯಾರು ಸ್ಪಂದಿಸಿಲ್ಲವಾದ್ದರಿಂದ ಪ್ರಯಾಣಿಕರು ಬಿಸಿಲು, ಮಳೆಯಲ್ಲಿ ನಿಂತು ಬಸ್ಸು ಕಾಯುವಂತಾಗಿದೆ. ಬಸ್ ನಿಲ್ದಾಣ ಮರು ನಿರ್ಮಾಣಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆ ಇರುವುದರಿಂದ ನಿರ್ಮಾಣ ಕಾರ್ಯ ತಡವಾಗಿದೆ ಎನ್ನಲಾಗುತ್ತಿದೆ. ಈ ಸಮಸ್ಯೆಯನ್ನು ಬೇಗನೆ ಬಗೆಹರಿಸುವ ಮೂಲಕ, ಬಸ್ ನಿಲ್ದಾಣ ಮರುನಿರ್ಮಾಣ ಕಾರ್ಯ ಕೈಗೊಳ್ಳುವಂತೆ ನಾಗರಿಕರು ವಿನಂತಿಸಿದ್ದಾರೆ.
✒️ಮೇಘನ ಮಡಪ್ಪಾಡಿ, ಪತ್ರಿಕೋದ್ಯಮ ವಿದ್ಯಾರ್ಥಿ
ವಿ ವಿ ಕಾಲೇಜು ಮಂಗಳೂರು