Ad Widget

ಕಲ್ಚರ್ಪೆ : ಕಸದ ಸಮಸ್ಯೆಗೆ ಮುಕ್ತಿ ನೀಡಲು ಹೋರಾಟ ಸಮಿತಿ ಒತ್ತಾಯ – ಶಾಸಕರ ಮಾತಿಗೂ ಬೆಲೆ ನೀಡದ ನಗರ ಪಂಚಾಯತ್ ವಿರುದ್ಧ ಆಕ್ರೋಶ – ಮಾನವ ಸರಪಳಿಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಲು ತೀರ್ಮಾನ – ಸಮಸ್ಯೆ ಅರಿವಾಗಲು ನ.ಪಂ. ಸದಸ್ಯರ ಕರೆದು ಭೋಜನ ಕೂಟ ನಡೆಸಲು ನಿರ್ಧಾರ


2007 ರಲ್ಲಿ ಜನರ ವಿರೋಧವಿದ್ದರೂ ಸುಳ್ಯ ನಗರದ ಕಸವನ್ನು ಆಲೆಟ್ಟಿ ಗ್ರಾಮದ ಕಲ್ವೆರ್ಪೆಗೆ ತಂದು ಹಾಕಿದ ನಂತರ ಅಸಮರ್ಪಕ ವಿಲೇವಾರಿಯ ವಿರುದ್ಧ ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಇತ್ತೀಚೆಗೆ ಶಾಸಕರು ಭೇಟಿ ನೀಡಿ ನಮ್ಮ ಸಮಸ್ಯೆಯ ಬಗ್ಗೆ ಅರಿತು ಕಸ ಇನ್ನು ಅಲ್ಲಿ ಹಾಕಬೇಡಿ,ಒಂದು ವಾರದ ಒಳಗೆ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಜಾಗ ಗುರುತಿಸಬೇಕು ಎಂದು ಮುಖ್ಯಾಧಿಕಾರಿಗೆ ಸೂಚನೆ ಕೊಟ್ಟಿದ್ದರು. ಆದರೇ ನಗರ ಪಂಚಾಯತ್ ಗೆ ನೂತನಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಬಳಿಕ ನಡೆದ ಸಭೆಯಲ್ಲಿ ಪುನ ಕಸವನ್ನು ಕಲ್ಚರ್ಪೆಗೆ ಸಾಗಿಸುವ ಬಗ್ಗೆ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಅಲ್ಲಿಯ ನಿವಾಸಿಗಳ ಮೇಲೆ ಯಾಕೆ ಅವರಿಗೆ ಕೋಪ. ಇದೀಗ ವಿಪರೀತ ಮಳೆಯಿಂದ ರಾಶಿ ಹಾಕಿದ್ದ ಕಸ ಕೊಚ್ಚಿ ಹೋಗಿ ಪಯಸ್ವಿನಿ ನದಿ ಸೇರಿದೆ. ಅದೇ ನೀರನ್ನು ಸುಳ್ಯದ ನಗರದಲ್ಲಿ ಕುಡಿಯುವ ವ್ಯವಸ್ಥೆ ಇದೆ. ಶಾಸಕರ ಸೂಚನೆಯಂತೆ ಬೇರೆ ಕಡೆ ಸ್ಥಳ ಗುರುತಿಸಿ ವ್ಯವಸ್ಥಿತವಾಗಿ ಮಾಡಲು ಆಗುವುದಿಲ್ಲವೇ. ಶಾಸಕರ ಮಾತಿಗೂ ಬೆಲೆ ಇಲ್ಲವೇ. ಶಾಸಕರನ್ನೇ ಧಿಕ್ಕರಿಸಲು ನ.ಪಂ.ಹೊರಟಿದೆ. ದುಗ್ಗಲಡ್ಕದಲ್ಲಿ ಸರ್ವೆ ನಂಬರ್ 44 ರಲ್ಲಿ ಸ್ಥಳ ಗುರುತಿಸಿದ್ದಾರೆ ಆರ್.ಟಿ.ಸಿ.ಯಲ್ಲಿ ಕೂಡ ಎಂಟ್ರಿ ಆಗಿದೆ. ಅಲ್ಲಿ ನಿರ್ವಹಣೆಗೆ ವ್ಯವಸ್ಥೆ ಮಾಡಿ ಶಾಸಕರ ಮಾತಿನಂತೆ ನಗರ ಪಂಚಾಯತ್ ನಡೆದುಕೊಳ್ಳಲಿ. ಇನ್ನೂ ಕಲ್ಚರ್ಪೆಗೆ ಕಸ ತಂದು ಹಾಕಲು ನಾವು ಬಿಡುವುದಿಲ್ಲ. ನಮಗೆ ಇದುವರೆಗೆ ಭರವಸೆ ಮಾತ್ರ ಸಿಕ್ಕಿದೆ ಕಸದ ಸಮಸ್ಯೆ ನಿವಾರಣೆಯಾಗಿಲ್ಲ.‌ ಕಸದಿಂದ ಗ್ಯಾಸ್ ಉತ್ಪತ್ತಿ ಮಾಡುತ್ತೇವೆ ಎಂದಿದ್ದರು. ಫ್ರೀ ಗ್ಯಾಸ್ ಯಾರಿಗೆ ಕೊಟ್ಟಿದ್ದೀರಿ ? ಆಡಳಿತ ನಡೆಸಿದವರ ಮನೆಗೆ ಗ್ಯಾಸ್ ಹೋಗಿದೆಯೇ ಎಂದು ಪ್ರಶ್ನಿಸದರು. ಪರಿಸರ ಇಲಾಖೆಯ ಸೂಚನೆಗಳನ್ನು ನಗರ ಪಂಚಾಯತ್ ಇಲ್ಲಿ ಪಾಲಿಸಿಲ್ಲ. ಈ ಕಸದ ರಾಜಕೀಯಕ್ಕೆ ಎನ್.ಎ.ರಾಮಚಂದ್ರ ಅವರೇ ಕಾರಣ. ಬೇರೆ ದ್ವೇಷಕ್ಕೆ ಇಲ್ಲಿನ ನಿವಾಸಿಗಳ ಮೇಲೆ ಸವಾರಿ ಮಾಡಿದ್ದಾರೆ. ನಮ್ಮ ಸಮಸ್ಯೆ ಎಲ್ಲರಿಗೆ ತಿಳಿಸುವ ಉದ್ದೇಶದಿಂದ ಸೆ.15ರಂದು ನಡೆಯುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ನಡೆಯುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಭಾಗವಹಿಸಲಿದ್ದೇವೆ ಎಂದು ಹೋರಾಟ ಸಮಿತಿಯ ಪದಾಧಿಕಾರಿಗಳು ಸೆ.13 ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನ.ಪಂ. ಮಾಜಿ ಸದಸ್ಯ ಕೆ.ಗೋಕುಲ್ ದಾಸ್ ಮಾತನಾಡಿ, ಪರಿಸರದ ಜನರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬರ್ನಿಂಗ್ ಮೆಷಿನ್ ಅಳವಡಿಸಿ, ಉದ್ಘಾಟನೆ ಮಾಡಿದ್ದಾರೆ. ಈಗ ಆ ಸಂದರ್ಭ ಅಧ್ಯಕ್ಷರಾಗಿದ್ದವರೇ ಅದು ಸರಿ ಇಲ್ಲ. ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ವಿನಯರ ಮಾತು ಕೇಳುತ್ತಿದ್ದರೆ ಅವರಿಗೆ ಕಲ್ಚರ್ಪೆ ಪ್ರದೇಶ ಚಿನ್ನದ ಮೊಟ್ಟೆ ಇಡುವ ಕೋಳಿಯಂತಾಗಿದೆ ಎಂದು ನಮಗನಿಸುತ್ತಿದೆ ಎಂದು ಆಕ್ರೋಶದಲ್ಲಿ ಹೇಳಿದರು. ನಗರ ಪಂಚಾಯತ್ ನಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ಕಲ್ಚರ್ಪೆ ನಿವಾಸಿಗಳ ಆರೋಗ್ಯದ ಕಡೆ ನಗರ ಪಂಚಾಯತ್ ಗಮನ ಹರಿಸಲಿ. ಸಾಂಕ್ರಾಮಿಕ ರೋಗ ಪ್ರಾರಂಭವಾಗದಂತೆ ತಡೆಯಬೇಕು ಹಾಗೂ ಶುದ್ಧ ಕುಡಿಯುವ ನೀರು ಸಿಗಬೇಕೆಂಬ ಬೇಡಿಕೆ ಇಟ್ಟುಕೊಂಡು ಸೆ.೧೫ರಂದು ಕಪ್ಪು ಪಟ್ಟಿ ಧರಿಸಿ ಮಾನವ ಸರಪಳಿಯಲ್ಲಿ ನಾವು ಭಾಗವಹಿಸುತ್ತೇವೆ. ಮುಂದಿನ ದಿನಗಳಲ್ಲಿ ಕಲ್ಚರ್ಪೆಗೆ ನಗರದ ಪಂಚಾಯತ್‌ನ ಎಲ್ಲ ಸದಸ್ಯರನ್ನು ವಾಸ್ತವ್ಯಕ್ಕೆ ಆಹ್ವಾನಿಸುತ್ತೇವೆ. ಅವರು ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಅಲ್ಲಿರಬೇಕು. ಅವರಿಗೆ ಊಟದ ವ್ಯವಸ್ಥೆಯನ್ನು ಅದೇ ಸ್ಥಳದಲ್ಲಿ ನಾವು ವ್ಯವಸ್ಥೆ ಮಾಡುತ್ತೇವೆ. ಬಾರದ ಸದಸ್ಯರಿಗೆ ಅವರ ಹೆಸರಿನಲ್ಲೆ ಎಲೆ ಹಾಕಿ ಬಡಿಸುತ್ತೇವೆ ಅವರಿಗೆ ನಮ್ಮ ಸಮಸ್ಯೆ ಅರಿವಾಗಬೇಕು. ನಗರದ ಕಸದಿಂದ ಮುಕ್ತಿ ಸಿಗಬೇಕು ಎಂದು ಗೋಕುಲ್ ದಾಸ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ, ಆಲೆಟ್ಟಿ ಗ್ರಾ.ಪಂ. ಸದಸ್ಯ ಸುದೇಶ್ ಕಲ್ಚರ್ಪೆ, ಹೋರಾಟ ಸಮಿತಿ ಉಪಾಧ್ಯಕ್ಷ ಅಶೋಕ್ ಪೀಚೆ, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಲ್ಚರ್ಪೆ, ಗೌರವಾಧ್ಯಕ್ಷ ಯೂಸುಫ್ ಅಂಜಿಕಾರು ನಾರಾಯಣ ಜಬಳೆ, ವೆಂಕಟೇಶ್ ಕಲ್ಚರ್ಪೆ, ನಾರಾಯಣ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!