ಕೊಲ್ಲಮೊಗ್ರು-ಕಟ್ಟ-ಗೋವಿಂದನಗರ ಭಾಗಗಳಿಗೆ ಸಂಪರ್ಕಿಸುವ ಎಫ್.ಟಿ.ಟಿ.ಹೆಚ್ ಫೈಬರ್ ಕೇಬಲ್ ಅನ್ನು ಕತ್ತಿಯಿಂದ ತುಂಡರಿಸಿ ಸುಮಾರು 30 ಮೀಟರ್ ಉದ್ದದ ಕೇಬಲ್ ಅನ್ನು ಹಾಡುಹಗಲೇ ಕಳವುಗೈದ ಘಟನೆ ಕಟ್ಟ-ಗೋವಿಂದನಗರ ಹರಿಜನ ಕಾಲೋನಿ ಸಂಪರ್ಕ ರಸ್ತೆಯ ಬದಿಯಲ್ಲಿ ಸೆ.10 ರಂದು ಅಪರಾಹ್ನ 4:00 ಗಂಟೆಯ ಒಳಗೆ ನಡೆದಿದೆ ಎಂದು ತಿಳಿದುಬಂದಿದೆ. ಸತತ ಎರಡನೇ ಬಾರಿಗೆ ಈ ರೀತಿಯ ದುಷ್ಕೃತ್ಯವನ್ನು ಎಸಗಲಾಗುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ಸುಮಾರು 30-35 ಮನೆಗಳಿಗೆ ಸರಿಸುಮಾರು 20 ಗಂಟೆಗಳ ಕಾಲ ಫೋನ್ ಹಾಗೂ ವೈಫೈ ಇಂಟರ್ನೆಟ್ ಸಂಪರ್ಕ ಇಲ್ಲದೇ ತುಂಬಾ ತೊಂದರೆ ಆಗಿತ್ತು ಎನ್ನುತ್ತಿದ್ದಾರೆ ಸ್ಥಳೀಯರು.
ಈ ದುಷ್ಕೃತ್ಯವನ್ನು ಎಸಗಿದವರನ್ನು ಪತ್ತೆ ಹಚ್ಚುವ ಸಲುವಾಗಿ ದೈವ-ದೇವರುಗಳ ಮೊರೆ ಹೋಗುವುದಾಗಿ ಈ ಭಾಗದ ಫೋನ್ ಬಳಕೆದಾರರು ತೀರ್ಮಾನಿಸಿದ್ದು, ಸಧ್ಯದಲ್ಲೇ ಈ ಕಾರ್ಯ ನಡೆಯಲಿದ್ದು, ಈ ಹಿಂದೆ ಕಾಲೋನಿಯ ಕೇಂದ್ರ ಭಾಗದಲ್ಲಿದ್ದ ಸೋಲಾರ್ ಲೈಟ್ ನ ಬ್ಯಾಟರಿ ಕಳುವಾಗಿತ್ತು. ಈ ಸಂದರ್ಭದಲ್ಲಿ ದೈವ-ದೇವರುಗಳ ಮೊರೆ ಹೋದಾಗ ಕದ್ದ ವ್ಯಕ್ತಿಗಳು ಬ್ಯಾಟರಿಯನ್ನು ಕಳುವಾದ ಸ್ಥಳದಲ್ಲೇ ತಂದಿರಿಸಿದ ಘಟನೆ ಕೂಡ ನಡೆದಿತ್ತು.
ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೀರ್ಮಾನಿಸಿದ್ದು, ಪೋಲೀಸ್ ಇಲಾಖೆಯವರು ಸೂಕ್ತ ತನಿಖೆ ನಡೆಸಿ ಕಳವುಗೈದವರನ್ನು ಪತ್ತೆಹಚ್ಚಿ ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.
- Sunday
- November 24th, 2024