ಸುಳ್ಯ : ವಿಶ್ವಹಿಂದು ಪರಿಷದ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಜೃಂಭಣೆಯ ಮೊಸರು ಕುಡಿಕೆ ಉತ್ಸವ ನಡೆಯಿತು. ಸುಳ್ಯದ ರಸ್ತೆಯುದ್ದಕ್ಕೂ ಶೋಭಾಯಾತ್ರೆ ನಡೆದು ಚೆನ್ನಕೇಶವ ದೇವಾಲಯದ ಬಳಿಯಲ್ಲಿ ಸಭಾ ಕಾರ್ಯಕ್ರಮದೊಂದಿಗೆ ಮೊಸರು ಕುಡಿಕೆ ಉತ್ಸವ ಸಂಪನ್ನಗೊಂಡಿತು.
ಮೊಸರು ಕುಡಿಕೆ ಉತ್ಸವದಲ್ಲಿ ಹಿಂದು ಯುವಕರಿಂದ ಮಾನವ ಪಿರಮಿಡ್ ನಿರ್ಮಿಸಿ ಸುಳ್ಯದ 17 ಕಡೆಗಳಲ್ಲಿ ಕಟ್ಟಿದ್ದ ಅಟ್ಟಿ ಮಡಕೆಗಳನ್ನು ಒಡೆಯುವ ಮೂಲಕ ಸಾಹಸವನ್ನು ಪ್ರದರ್ಶಿಸಿದರು. ಮೆರವಣಿಗೆಯಲ್ಲಿ ಭಜನೆ, ನಾಸಿಕ್ ಬ್ಯಾಂಡ್ , ಕೀಲು ಕುದುರೆ, ಗೊಂಬೆ ಸೇರಿದಂತೆ ಡಿಜೆ ಸದ್ದಿಗೆ ಕಾರ್ಯಕರ್ತರು ಹೆಜ್ಜೆಗಳನ್ನು ಹಾಕುತ್ತಾ ಸಾಗಿದರು.
ಕಾರ್ಯಕ್ರಮ ಕೊನೆಗೆ ನಡೆದ ಸಭಾ ಕಾರ್ಯಕ್ರಮವನ್ನು ಕೇಪು ಅಜಿಲ ದೀಪ ಬೆಳಗಿ ಉದ್ಘಾಟಿಸಿದರು. ಪುನೀತ್ ರವರು ಪ್ರಾಸ್ತಾವಿಕ ಮಾತುಗಳನ್ಬಾಡಿ ಹಿಂದು ಸಮಾಜಕ್ಕೆ ಆಗುವ ದೌರ್ಜನ್ಯಗಳನ್ನು ಅಟ್ಟಿ ಮಡಕೆ ಒಡೆದ ಮಾದರಿಯಲ್ಲಿ ಪುಡಿ ಪುಡಿ ಮಾಡಬೇಕಿದೆ. ಅಲ್ಲದೇ ಶ್ರೀಕೃಷ್ಣನ ಮಾದರಿಯಲ್ಲೆ ವಿಶ್ವ ಹಿಂದು ಪರಿಷದ್, ಭಜರಂಗದಳವು ಗೋವುಗಳ ಸಂರಕ್ಷಣೆ ಮಾಡುತ್ತಿದೆ ಹಾಗೂ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಹಿಂದುಗಳು ದ್ರೌಪದಿ ಮಾದರಿಯಲ್ಲಿ ಪ್ರತಿಜ್ಞೆ ಮಾಡಬೇಕು, ಜಿಹಾದಿ ಮನಸ್ಥಿತಿಯವರು ಭಜರಂಗದಳ ಕಾರ್ಯಕರ್ತರನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂದು ಹೇಳಿದರು. ಸಭಾ ಕಾರ್ಯಕ್ರಮದಲ್ಲಿ ಮೊದಲ 5 ವರ್ಷಗಳ ಮೊಸರು ಕುಡಿಕೆ ಉತ್ಸವ ಸಮಿತಿಯ ಉಳಿಕೆ ಮೊತ್ತವಾದ 1 ,73,000 ರೂಗಳನ್ನು ವಿನಯ ಕುಮಾರ್ ಕಂದಡ್ಕ ನೇತೃತ್ವದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಮತ್ತು ವಿಶ್ವ ಹಿಂದು ಪರಿಷದ್ ಗೆ ನೀಡಲಾಯಿತು.
ಮೊಸರು ಕುಡಿಕೆ ಉತ್ಸವದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ ಬಿಜೆಪಿ ಮುಖಂಡ, ಮಾಜಿ ಸಂಸದ ಖ್ಯಾತ ವಾಗ್ಮಿ ಅಂಕಣಕಾರ ಪ್ರತಾಪ್ ಸಿಂಹ ಮಾತನಾಡಿ ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ನಾಯಕತ್ವ ಬೇಕಾಗಿದೆ. ಅಂತಹ ನಾಯಕತ್ವವನ್ನು ಹಿಂದೂ ಸಂಘಟನೆಗಳು ಸೃಷ್ಠಿಸಬೇಕು ಎಂದು ಹೇಳಿದರು. ವಿಚಾರ, ಧರ್ಮಕ್ಕೆ ನಿಷ್ಠೆ ಇರುವ ಎದೆಗಾರಿಕೆ ಇರುವ ನಾಯಕತ್ವ ಬಿಜೆಪಿಗೆ ಬೇಕು , ಅಲ್ಲದೇ ಧರ್ಮದ ಬಗ್ಗೆ ಪ್ರೀತಿ, ಅಭಿಮಾನ ಇದೆಯೇ ಎಂಬುದನ್ನು ನಾವು ಆತ್ಮ ವಿಮರ್ಶೆ ಮಾಡಿಬೇಕು. ಧರ್ಮದ ಬಗ್ಗೆ ಇರುವ ಆಭಿಮಾನ ಶೂನ್ಯತೆಯಿಂದ ಹೊರ ಬರಬೇಕು ಎಂದು ಕರೆ ನೀಡಿದರು. ವಸುದೈವ ಕುಟುಂಬಕಂ ಎಂದು ಹಿಂದೂ ಸಮಾಜ ಶಾಂತಿ ಮತ್ತು ಸದ್ಭಾವನೆಯನ್ನು ಸದಾ ಬೋಧಿಸಿದೆ. ಜಗತ್ತಿನಲ್ಲಿ ಶಾಂತಿ, ಸದ್ಭಾವನೆ ನೆಲೆಯಾಗಲು ಎಲ್ಲರೂ ಅದನ್ನು ಪಾಲಿಸಬೇಕು ಎಂದರು. ಖಗೋಳ ವಿಜ್ಞಾನದ ಬಗ್ಗೆ, ಗೃಹಗಳ ಬಗ್ಗೆ, ಸೂರ್ಯನ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆ ಹಿಂದೂ ಧರ್ಮ ತಿಳಿಸಿದೆ. ನಮ್ಮ ಧರ್ಮ, ಸಂಸ್ಕೃತಿ ಯ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸುವ ಮನಸ್ಸು ಮಾಡಬೇಕು. ನಾವು ಒಟ್ಟಾಗಿದ್ದರೆ ಮಾತ್ರ ನಮ್ಮ ಧರ್ಮ, ಸಂಸ್ಕೃತಿ ಉಳಿಯಲು ಸಾಧ್ಯ. ವೈವಿಧ್ಯತೆಯಲ್ಲಿ ಏಕತೆ ಇರುವುದು ಹಿಂದೂ ಸಮಾಜದಲ್ಲಿ ಮಾತ್ರ ಎಂದು ಅವರು ಬಣ್ಣಿಸಿದರು.
ಶ್ರೀಕೃಷ್ಣನ ಪ್ರೇರಣೆಯಲ್ಲಿ ಹಿಂದೂ ಹೃದಯದಲ್ಲಿ ಜಾಗೃತಿ ಯನ್ನು ಮೂಡಿಸಿ, ಹಿಂದೂ ಸಮಾಜವನ್ನು ಒಟ್ಟಾಗಿಸುವ ಮತ್ತು ರಕ್ಷಣೆ ಮಾಡುವ ಕೆಲಸ ವಿಶ್ವ ಹಿಂದೂ ಪರಿಷತ್ ಮಾಡುತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಘಟನೆಯು ಮೈಸೂರಿನಲ್ಲಿಯೂ ಪಕ್ಷ ಸಂಘಟನೆ ಮಾಡಲು ಪ್ರೇರಣೆಯಾಗಿದೆ. ಹಿಂದೂಗಳ ಸಂರಕ್ಷಣೆಗೆ ಪಣ ತೊಟ್ಟಿರುವ ವಿಶ್ವ ಹಿಂದೂ ಪರಿಷತ್ ಭಜರಂಗದಳವು ಎಲ್ಲಾ ರೀತಿಯ ಕೆಲಸ ಕಾರ್ಯಗಳನ್ನು ಮಾಡುತ್ತಿದೆ ಅಲ್ಲದೇ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಗಳನ್ನು ಪೋಲಿಸ್ ಅಧಿಕಾರಿಗಳಿಗೆ ತಿಳಿದಾಗ ಅವರನ್ನು ಎನ್ ಕೌಂಟರ್ ಮಾಡದಂತೆ ತಡೆದ ಶಕ್ತಿ ಯಾವುದು ಆ ಸಂದರ್ಭದಲ್ಲಿ ಇದ್ದದ್ದು ಬಿಜೆಪಿ ಅಲ್ಲವೇ ಎಂದು ಹೇಳಿದರು. ಅಲ್ಲದೇ ಪ್ರಸ್ತುತ ಕಾಲಘಟ್ಟದಲ್ಲಿ ಪರಿವಾರ ಸಂಘಟನೆಯ ಹಿನ್ನಲೆಯ ನಾಯಕರು ರಾಜಕೀಯಕ್ಕೆ ಬರಬೇಕಿದೆ ಎಂದು ಅವರು ಹೇಳಿದರು. ಸಭಾ ವೇದಿಕೆಯಲ್ಲಿ ವಿಶ್ವ ಹಿಂದು ಪರಷದ್ ಸುಳ್ಯ ಪ್ರಖಂಡದ ಮಾಜಿ ಅಧ್ಯಕ್ಷರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸಭಾ ವೇದಿಕೆಯಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷರಾದ ಎ ವಿ ತೀರ್ಥರಾಮ , ಮುರಳೀಕೃಷ್ಣ ಹಸಂತಡ್ಕ , ಸೋಮಶೇಖರ್ ಪೈಕ , ನವೀನ್ ಎಲಿಮಲೆ , ಪ್ರಕಾಶ್ ಯಾದವ್ , ಬಾಲಸುಬ್ರಹ್ಮಣ್ಯ ಭಟ್ , ಪ್ರದೀಪ್ ಸರಿಪಳ್ಳ , ಶ್ರೀಧರ ತೆಂಕಿಲ , ಹರಿಪ್ರಸಾದ್ ಎಲಿಮಲೆ , ದೀನಾ ಚಂದ್ರಶೇಖರ್, ಸೀತರಾಮ ಅಜ್ಜಾವರ ,ರೂಪೇಶ್ ಪೂಜಾರಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿ ನವೀನ್ ಎಲಿಮಲೆ ವಂದಿಸಿದರು. ವಿಶಾಕ್ ಸಸಿಹಿತ್ಲು ನಿರೂಪಿಸಿ, ಸ್ಪೂರ್ತಿ ಎಂ ರೈ ವೈಯಕ್ತಿಕ ಗೀತೆ ಹಾಡಿದರು.
ಸಭೆಯಲ್ಲಿ ಶಾಸಕಿ ಕು. ಭಾಗೀರಥಿ ಮುರುಳ್ಯ , ಪ್ರಮುಖರಾದ ವೆಂಕಟ್ ದಂಬೆಕೋಡಿ , ಪಿ ಕೆ ಉಮೇಶ್ , ಶಶಿಕಲಾ ನೀರಬಿದರೆ , ನಾರಾಯಣ ಶಾಂತಿನಗರ , ಅಶೋಕ್ ಅಡ್ಕಾರ್ , ನಾರಾಯಣ ಕೇಕಡ್ಕ , ಹರೀಶ್ ಕಂಜಿಪಿಲಿ , ಬುದ್ದನಾಯ್ಕ , ಸುನಿಲ್ ಕೇರ್ಪಳ , ವರ್ಷಿತ್ ಚೊಕ್ಕಾಡಿ , ಭಾನುಪ್ರಕಾಶ್ ಪೆರುಮುಂಡ ಸೇರಿದಂತೆ ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.