Ad Widget

ಕುಕ್ಕೆ: ಜಿಲ್ಲಾ ಮಟ್ಟದ ಸಂಸ್ಕೃತೋತ್ಸವ ಮತ್ತು ಪ್ರತಿಭಾ ಪುರಸ್ಕಾರ : ಭಾರತೀಯರು ಮಾತ್ರವಲ್ಲದೆ ವಿಶ್ವವೇ ಸ್ವೀಕಾರಾರ್ಹ ಭಾಷೆ ಸಂಸ್ಕೃತ –  ಲಕ್ಷ್ಮೀಶ ಗಬ್ಲಡ್ಕ


ಸುಬ್ರಹ್ಮಣ್ಯ: ಸಂಸ್ಕೃತ ಅನ್ನುವುದು ಸಂಪ್ರದಾಯಿಕ ಭಾಷೆ. ಜಾತಿ ಧರ್ಮ ಮೀರಿದ ಈ ಭಾಷೆಯನ್ನು ಸರ್ವರೂ ಅತ್ಯಂತ ಪ್ರೀತಿಯಿಂದ ಅನುಸರಿಸುತ್ತಿರುವುದು ಸಂತಸಕರ. ಈ ಭಾಷೆಯು ಸರ್ವ ಸಮುದಾಯಗಳ ಭಾಷೆಯಾಗಿ ಪ್ರಗತಿಯಾಗಿದೆ.ಅತ್ಯಂತ ಸಂಸ್ಕರಿಸಲ್ಪಟ್ಟುದು ಸಂಸ್ಕೃತ.ನಮ್ಮ ಭಾವನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾತಿನ ಮೂಲಕ ವ್ಯಕ್ತಪಡಿಸುವ ಉತ್ಕೃಷ್ಠ ಮಾಧ್ಯಮ ಸಂಸ್ಕೃತ.ಸರ್ವ ಭಾರತೀಯರು ಮಾತ್ರವಲ್ಲದೆ ವಿಶ್ವ ಸ್ವೀಕಾರಾರ್ಹ ಭಾಷೆ ಸಂಸ್ಕೃತ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ, ದ.ಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ,ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಸುಬ್ರಹ್ಮಣ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಆದಿತ್ಯವಾರ ನಡೆದ ದ.ಕ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಂಸ್ಕೃತೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಪ್ರಭಾವಶಾಲಿಯಾದ ಸಂಸ್ಕೃತವು ಹೃದಯಕ್ಕೆ ಸಂಬಂಧಿಸಿದ ಭಾಷೆಯಾಗಿದೆ.ಸಮಸ್ತ ಜನಮನಗಳ ಭಾಷೆಯನ್ನು ಸರ್ವರೂ ಉಳಿಸಿ ಬೆಳೆಸಬೇಕು.ವಿದ್ಯಾರ್ಥಿಗಳು ಅಧಿಕ ಅಂಕ ಪಡೆಯಬೇಕೆಂದು ಮಾತ್ರ ಈ ಭಾಷೆಯನ್ನು ಕಲಿಯದೆ ತಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳುವತ್ತ ಮನ ಮಾಡಬೇಕು ಎಂದರು.
ಕಾರ್ಯಕ್ರಮವನ್ನು ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ಮುಖ್ಯಗುರು ಕೆ.ಯಶವಂತ ರೈ ಉದ್ಘಾಟಿಸಿದರು. ದ.ಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಗೌರವಾಧ್ಯಕ್ಷ ವಿದ್ವಾನ್ ಪರಮೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಪಿಯು ಕಾಲೇಜಿನ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ದ.ಕ ಜಿಲ್ಲಾ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘದ ಅಧ್ಯಕ್ಷ ವಿದ್ವಾನ್ ದಿವಸ್ಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಸತ್ಯಶಂಕರ ಭಟ್, ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲೆಯ ಸಂಸ್ಕೃತ ಶಿಕ್ಷಕ ರಘ ಬಿಜೂರು, ಕುಮಾರಸ್ವಾಮಿ ವಿದ್ಯಾಲಯದ ಸಂಸ್ಕೃತ ಅಧ್ಯಾಪಕಿ ಪ್ರಮೀಳಾ ಉಪಸ್ಥಿತರಿದ್ದರು.
ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿ ಪ್ರತೀಕ್ ದಾಮ್ಲೆ ವೇದಮಂತ್ರ ಪಠಣ ಮಾಡಿದರು.ಈ ಮೊದಲು ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ, ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಮತ್ತು ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.ದ.ಕ ಜಿಲ್ಲೆಯ ಪ್ರೌಢಶಾಲಾ ಸಂಸ್ಕೃತ ಶಿಕ್ಷಕರು, ಪ್ರತಿಭಾನ್ವಿತ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!