ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲಿಗೆ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದರ ಅಂಗವಾಗಿ ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಪಾರೆಪ್ಪಾಡಿಯವರು ಸರ್ವರನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ಅಮೃತ ಇವರು 78ನೇ ಧ್ವಜಾರೋಹಣ ಮಾಡುವರೆ “ಎಸ್ ಡಿ ಎಂ ಸಿ” ಅಧ್ಯಕ್ಷರಾದ ಶ್ರೀ ಶಿವರಾಮ ಉತ್ರoಬೆ ಅವರನ್ನು ಕೇಳಿಕೊಂಡು ಧ್ವಜಾರೋಹಣವನ್ನು ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳಿಂದ ವಂದೇ ಮಾತರಂ, ಧ್ವಜಗೀತೆ, ರಾಷ್ಟ್ರಗೀತೆ, ಜೈ ಘೋಷಗಳು ಮೊಳಗಿದವು. ಇದೇ ಹೊತ್ತಿಗೆ ಶ್ರೀ ಶಿವರಾಮ ಉತ್ರಂಬೆ ಅವರ ಪುತ್ರ ಶ್ರೀ ಮೋಹನ್ ದಾಸ್ ಕೊಡಮಾಡಿದ “ಕಂಪಾಸ್ ಬಾಕ್ಸ್ ” ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಹಂಚಿದರು. ಬಳಿಕ ಶಾಲಾ ವಿದ್ಯಾರ್ಥಿಗಳು , ಹಿರಿಯ ವಿದ್ಯಾರ್ಥಿಗಳು, ಎಸ್ ಡಿ ಎಂ ಸಿ ಯವರು, ಪೋಷಕ ಬಂಧುಗಳು, ಅಡುಗೆ ಸಹಾಯಕರು, ಊರ ವಿದ್ಯಾಭಿಮಾನಿಗಳ ಸಹಭಾಗಿತ್ವದೊಂದಿಗೆ ಮೆರವಣಿಗೆ ನಡೆಯಿತು.
ಬಳಿಕ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಭಾ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಶಾಲಾ ಮುಖ್ಯ ಶಿಕ್ಷಕರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳು ಸ್ವಾತಂತ್ರ್ಯದ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ದೇಶಭಕ್ತಿಗೀತೆ ಹಾಡಿ, ಲಘು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕರ ಪರವಾಗಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವನಜಾಕ್ಷಿಯವರು ಮಾತನಾಡಿ ಸ್ವಾತಂತ್ರ್ಯ, ತ್ಯಾಗ ಮನೋಭಾವ, ದೇಶಸೇವೆ ಯ ಬಗ್ಗೆ ಅರಿವು ಮೂಡಿಸಿದರು. ಊರ ವಿದ್ಯಾಭಿಮಾನಿಗಳ ಪರವಾಗಿ ಶ್ರೀ ಚಂದ್ರಶೇಖರ್ ಬಾಳುಗೋಡು ಮಾತನಾಡಿ ಸ್ವಾತಂತ್ರ್ಯ ಪೂರ್ವದ ಸ್ಥಿತಿಗತಿ ಹಾಗೂ ನಂತರದ ಸ್ಥಿತಿಗತಿ, ದೇಶಕ್ಕಾಗಿ ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಸರ್ವರಿಗೂ ಮನದಟ್ಟು ಮಾಡಿದರು. ಶ್ರೀ ವಿನುಪ್ ಇವರು ದೇಶ ಸೇವೆ, ತ್ಯಾಗ ಬಲಿದಾನಗಳ ಬಗ್ಗೆ ಕ್ಯಾಪ್ಟನ್ ಪ್ರಾಂಜಲ್ ದೇಶಕ್ಕಾಗಿ ಸಲ್ಲಿಸಿದ ಸೇವೆ, ಅವರ ಹಾಗೂ ಅವರ ತಂದೆ ತಾಯಿಗಳು ದೇಶಕ್ಕಾಗಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನವರು ತೆರೆದ ಶಾಶ್ವತ ದತ್ತಿನಿಧಿ ಬಡ್ಡಿ ಹಣವನ್ನು 2023-24ರ ಪ್ರತಿ ತರಗತಿಯ ಓರ್ವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡಲಾಯಿತು. ವಿದ್ಯಾರ್ಥಿಗಳ ಪಟ್ಟಿಯನ್ನು ಶ್ರೀಮತಿ ಸವಿತಾ ವಾಚಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಕಿಶೋರ್ ಕುಮಾರ್ ಉತ್ರಂಬೆ ತಮ್ಮ ತಾಯಿ ದಿವಂಗತ ಶ್ರೀಮತಿ ಬಾಲಕಿ ಅವರ ಸ್ಮರಣಾರ್ಥ ₹5000/- ಶಾಶ್ವತ ದತ್ತಿನಿದಿ ಹಣವನ್ನು ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿ ಪ್ರತಿ ವರ್ಷ ತರಗತಿವಾರು ತಲಾ ಇಬ್ಬರು ಸರ್ವಾಂಗೀಣ ಪ್ರತಿಭೆಗಳನ್ನು ಗುರುತಿಸಿ ಬಡ್ಡಿ ಹಣವನ್ನು ನೀಡುವುದೆಂದು ಹೇಳಿಕೆ ನೀಡಿದರು. ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಶಾಲಾ ಎಸ್ಡಿಎಂಸಿ ಸದಸ್ಯರಾದ ಶ್ರೀ ವಿಜಯಕುಮಾರ್ ಚಾರ್ಮತ ಇಂದಿನ ಮಕ್ಕಳೇ ಮುಂದಿನ ಜನಾಂಗ, ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಶಿಸ್ತು ಸಂಯಮ, ಉತ್ತಮ ಕಲಿಕೆ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಸುಸಂಸ್ಕೃತ ವ್ಯಕ್ತಿಗಳಾಗಿ ಬಾಳಿ ಬದುಕುವುದರೊಂದಿಗೆ ತನ್ಮೂಲಕವಾಗಿ ದೇಶ ಸೇವೆ ಮಾಡಬಹುದು ಎಂದು ಕರೆ ನೀಡಿದರು. ಅಲ್ಲದೇ ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರು ಪ್ರತಿಯೊಬ್ಬರ ಜೀವನದಲ್ಲಿ ಶಿಸ್ತು ಮುಖ್ಯ, ಶಿಸ್ತುಮಯ ಜೀವನ ನಡೆಸುವುದರೊಂದಿಗೆ ಉತ್ತಮ ಪ್ರಜೆಗಳಾಗಿ ಬದುಕೋಣ ಎಂದು ಕರೆ ನೀಡಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಶ್ರೀ ಶಿವರಾಮ ಉತ್ರಂಬೆ ಯವರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನವನ್ನು ಮಾಡಿದ ಮಹಾತ್ಮರ ಹೆಸರನ್ನು ಸ್ಮರಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ದಿನದ ಕಾರ್ಯಕ್ರಮ ನಿರ್ವಹಣೆಯನ್ನು ಶ್ರೀಮತಿ ಮೋಕ್ಷ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗುತ್ತಿಗಾರು ಗ್ರಾಮ ಪಂಚಾಯತು ಹಾಗೂ ಊರಿನ ಹಲವಾರು ದಾನಿಗಳು ನೀಡಿದ ಲಡ್ಡು, ಚಾಕೊಲೇಟ್, ಪಾನಿಯವನ್ನು ಶಿಕ್ಷಕಿ ಶ್ರೀಮತಿ ಸುಮನ ಮತ್ತು ತಂಡದವರು ಹಂಚಿದರು. ಕಾರ್ಯಕ್ರಮದ ಕೊನೆಯ ಅಂಗವಾಗಿ ಶಿಕ್ಷಕ ಶ್ರೀ ಮಹೇಶ್.ಕೆಕೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಧನ್ಯವಾದ ಸಮರ್ಪಿಸಿದರು.