ಸುಳ್ಯ ಕಾಸರಗೋಡು ಅಂತರಾಜ್ಯ ಸಂಪರ್ಕಿತ ರಸ್ತೆಯಲ್ಲಿ ನೀರು ಹರಿದು ಸಂಪೂರ್ಣ ಹಾನಿಯಾಗಿ ಇದೀಗ ಸಂಪರ್ಕ ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಮುರೂರು ಎಂಬಲ್ಲಿ ಕಳೆದ ಕೆಲ ದಿನಗಳಿಂದ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆಯಲ್ಲೇ ನೀರು ಹರಿದು ಆ.01 ರಂದು ಮರ ಸಾಗಾಟದ ಲಾರಿ ಸಂಚರಿಸುವ ವೇಳೆ ಚಕ್ರಗಳು ರಸ್ತೆಯಲ್ಲಿ ಹೂತು ಹೋಗಿ ಕೆಲ ಹೊತ್ತು ರಸ್ತೆ ಬಂದ್ ಆಗಿತ್ತು. ಲಾರಿಯನ್ನು ಮೇಲಕ್ಕೆತ್ತಿದಾಗ ಮತ್ತೊಂದು ಕಡೆಯಲ್ಲಿ ಹೂತು ಹೋಗಿ ರಸ್ತೆಯಲ್ಲಿ ದ್ವಿಚಕ್ರ ,ತ್ರಿಚಕ್ರ ಮತ್ತು ಕಾರುಗಳು ಮಾತ್ರ ಸಂಚರಿಸುವುವಂತಾಗಿದ್ದು ಘನ ವಾಹನ ಸಂಚಾರ ಅಸಾಧ್ಯವಾಗಿತ್ತು.
ಕೇರಳ ರಾಜ್ಯ ಸರಕಾರದ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳು ಮತ್ತು ನೌಕರರಿಗೆ ಬರೆ:-
ದೇಲಂಬಾಡಿ , ಕೊಟ್ಯಾಡಿ , ಪರಪ್ಪೆ ಸೇರಿದಂತೆ ಇತರೆ ಕಡೆಗಳಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗದ ಹಿನ್ನಲೆಯಲ್ಲಿ ಸುಳ್ಯವನ್ನು ಆಶ್ರಯಿಸಿದ್ದು ಇದೀಗ ಮುರೂರು ಎಂಬಲ್ಲಿ ಬಸ್ಸಿನ ಸಂಪರ್ಕ ಕಡಿತಗೊಂಡ ಹಿನ್ನಲೆಯಲ್ಲಿ ಜನರ ಪಾಡು ಹೇಳತೀರದು. ಆಟೋ ರಿಕ್ಷಗಳ ಮೂಲಕ ಸಂಚಾರಕ್ಕೆ ದುಬಾರಿ ವೆಚ್ಚವಾಗುತ್ತಿದ್ದು ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ . ಇವೆಲ್ಲದರ ಮಧ್ಯೆ ಸರಕಾರಿ ಬಸ್ಸುಗಳ ಸಂಚಾರ ಮಾರ್ಗವು ಬದಲಾವಣೆ ಮಾಡಲಾಗಿದ್ದು ಇದೀಗ ಕೊಟ್ಯಾಡಿ , ದೇಲಂಬಾಡಿ , ಈಶ್ವರಮಂಗಲವಾಗಿ ಸಂಚರಿಸುತ್ತಿದೆ. ಅಡೂರು ಮಂಡೆಕೋಲು ಮೂಲಕ ಕೂಡ ಸುಳ್ಯಕ್ಕೆ ಹೋಗಬೇಕಾಗಿದೆ.
ದೇಲಂಪಾಡಿ ಅಧ್ಯಕ್ಷರ ಭೇಟಿ – ಪರಿಶೀಲನೆ :-
ಕೇರಳ ಸರಕಾರವು ಸುಳ್ಯ ಕಾಸರಗೋಡು ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಹಿನ್ನಲೆಯಲ್ಲಿ ನಾವು ಮಳೆಯ ಸಂದರ್ಭದಲ್ಲಿ ಅಭಿವೃದ್ಧಿ ಪಡಿಸಿಲ್ಲ ಅಲ್ಲದೇ ಸುಮಾರು ನೂರು ಕೋಟಿ ರೂಪಾಯಿಗಳಲ್ಲಿ ಅಭಿವೃದ್ಧಿ ಮಾಡುವುವವರಿದ್ದು ಇದೀಗ ತಾತ್ಕಾಲಿಕ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ. ಅಲ್ಲದೆ ರಾಜ್ಯದ ಪಿಡಬ್ಲ್ಯೂಡಿ ಸಚಿವರು ಮತ್ತು ಸ್ಥಳೀಯ ಶಾಸಕರ ಗಮನಕ್ಕೆ ತಂದಿದ್ದು ದುರಸ್ತಿಯ ಭರವಸೆಯನ್ನು ನೀಡಿದ್ದಾರೆ. ಅಲ್ಲದೇ ರಾತ್ರಿ ಸಂಚಾರ ಒಳಿತಲ್ಲ ಎಂದು ದೇಲಂಬಾಡಿ ಗ್ರಾ.ಪಂ ಅಧ್ಯಕ್ಷೆ ಉಷಾ ತಿಳಿಸಿದ್ದಾರೆ.
ಅಂತರ್ ರಾಜ್ಯ ಸಂಪರ್ಕಿತ ರಸ್ತೆಯನ್ನು ವಿಪರೀತ ಮಳೆಯ ಹಿನ್ನಲೆಯಲ್ಲಿ ತಾತ್ಕಾಲಿಕವಾಗಿ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ದುರಸ್ತಿಪಡಿಸುವರೇ ಎಂದು ಕಾದು ನೋಡಬೇಕಿದೆ.