Ad Widget

ಜು.21 : ಗುರುಪೂರ್ಣಿಮಾ (ವ್ಯಾಸ ಪೂರ್ಣಿಮಾ) – ಈ ದಿನದ ಮಹತ್ವವೇನು?

. . . . .

ಯಾಂತ್ರಿಕೃತ ಬದುಕಿನಲ್ಲಿ ನೊಂದವರ ಮನಸ್ಸಿಗೆ ಮುದ, ನೆಮ್ಮದಿ ಶಾಂತಿ ಸಂತಸ ತರುವಲ್ಲಿ ಹಬ್ಬಗಳ ಪಾತ್ರ ಬಹಳ ಹಿರಿದಾಗಿದೆ. ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಂದಲ್ಲ ಒಂದು ಹಬ್ಬ ಇರುವುದು ಬಹಳ ಸಂತಸದ ವಿಚಾರ. ಈ ಹಬ್ಬಗಳು ನಮ್ಮ ಜೀವನಕ್ಕೆ ನವಚೈತನ್ಯ, ಉಲ್ಲಾಸ, ಸಡಗರ ಮತ್ತು ಸಂಭ್ರಮವನ್ನು ತರುತ್ತದೆ. ಭಾರತದಲ್ಲಿ ನಾವು ವಿಶೇಷವಾಗಿ ನಾಲ್ಕು ಹುಣ್ಣಿಮೆಗಳನ್ನು ಆಚರಿಸಲಾಗುತ್ತದೆ. ಆಯಾ ತಿಂಗಳಲ್ಲಿ ಬರುವ ಹುಣ್ಣಿಮೆ ಅದೇ ಹೆಸರಿನಿಂದ ಕರೆಯಲ್ಪಡುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಗೌರೀ ಪೂರ್ಣಿಮೆ ಎಂದೂ, ಮಾರ್ಗಶೀರ್ಷ ಪೂರ್ಣಿಮೆಯನ್ನು ದತ್ತ ಜಯಂತಿ ಎಂದೂ ವೈಶಾಖ ಪೂರ್ಣಿಮೆಯನ್ನು ಬುದ್ಧ ಜಯಂತಿ ಎಂದೂ ಅಷಾಡ ಮಾಸದ ಪೂರ್ಣಿಮೆಯನ್ನು ಗುರುಪೂರ್ಣಿಮೆ ಎಂದೂ ಕರೆಯಲಾಗುತ್ತದೆ.
ಪ್ರತಿ ವರ್ಷ ಆಷಾಡ ಮಾಸದ ಶುಕ್ಲ ಪಕ್ಷದ ಮೊದಲ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸಲಾಗುತ್ತದೆ. ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಈ ದಿನದಂದು ವೇದವ್ಯಾಸರು ಅವತರಿಸಿದರು ಎಂಬ ಪ್ರತೀತಿ ಇದೆ. ಒಟ್ಟಿನಲ್ಲಿ ವೇದ ವ್ಯಾಸರ ನೆನಪಲ್ಲಿ, ಗುರು ಹಿರಿಯರಿಗೆ ನಮಿಸುವ, ಸ್ಮರಿಸುವ ಮತ್ತು ಸತ್ಕರಿಸುವ ಸುದಿನ ಎಂದರೂ ತಪ್ಪಲ್ಲ.
ವ್ಯಾಸರು ಪರಾಶರ ಮತ್ತು ಸತ್ಯವತಿದೇವಿಯ ಮಗನಾಗಿ ಜನಿಸಿದರು. ಹುಟ್ಟು ಕಪ್ಪು ವರ್ಣದಿಂದ ಕೂಡಿದ್ದರಿಂದ ವ್ಯಾಸ ಎಂದು ಕರೆಯಲ್ಪಟ್ಟರು. ತಂದೆಯಂತೆ ಅಪಾರ ಮೇಧಾವಿಯಾಗಿದ್ದ ವ್ಯಾಸರು, ತಂದೆಯೊಡನೆ ಹೆಚ್ಚಿನ ಜ್ಞಾನಾರ್ಜನೆಗೆಂದು ಹಿಮಾಲಯಕ್ಕೆ ತಪ್ಪಸ್ಸಿಗೆ ಹೊರಡುತ್ತಾರೆ. ಆದರೆ ಬದರಿಕ್ಷೇತ್ರದಲ್ಲಿಯೇ ನೆಲೆಸುತ್ತಾರೆ. ಆ ಕಾರಣದಿಂದಲೇ ಅವರಿಗೆ ಬಾದರಾಯಣ ಎಂಬ ಹೆಸರೂ ಬಂದಿದೆ. ಈಗಲೂ ಬದರಿ ಕ್ಷೇತ್ರದಲ್ಲಿ ವ್ಯಾಸ ಗುಹೆ ಇದೆ ಎಂಬ ಪ್ರತೀತಿ ಇದೆ. ಇಲ್ಲಿಯೇ ಭಾರತದ ಶ್ರೇಷ್ಠ ಇತಿಹಾಸ ಗ್ರಂಥವಾದ ಮಹಾಭಾರತವನ್ನು ವ್ಯಾಸಮುನಿಗಳು ಗಣೇಶನ ಸಹಾಯದಿಂದ ರಚಿಸುತ್ತಾರೆ. ಸಮಗ್ರವಾದ ವೇದರಾಶಿಯನ್ನು ವಿದ್ಯಾರ್ಥಿಗಳು ಕಲಿಯಲು ಪರದಾಡುವುದನ್ನು ಕಂಡು ಅದನ್ನು ವಿಂಗಡಿಸಿ ತಮ್ಮ ನಾಲ್ಕು ಶಿಷ್ಯರಿಗೆ ಭೋಧಿಸಿದರು ಈ ರೀತಿ ವೇದ ವಿಂಗಡಿಸಿ ವೇದ ಪರಂಪರೆಯನ್ನು ಮುಂದುವರಿಸಿದ ಕಾರಣದಿಂದಲೇ ಅವರಿಗೆ ವೇದವ್ಯಾಸ ಎಂಬ ಹೆಸರನ್ನು ಪಡೆದರು.ತಲೆತಲಾಂತರಗಳಿಂದಲೂ, ವೇದಗಳ ಕಾಲದಿಂದಲೂ ಗುರುವಿಗೆ ಒಂದು ವಿಶಿಷ್ಠ ಸ್ಥಾನವಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಯಾವುದೇ ಶುಭಕಾರ್ಯವನ್ನು ಮಾಡುವ ಮೊದಲು ಗುರುವನ್ನು ಸ್ಮರಿಸುವ ಸತ್‍ಸಂಪ್ರದಾಯ ನಮ್ಮ ಸಂಸ್ಕøತಿಯಲ್ಲಿ ಹಾಸು ಹೊಕ್ಕಾಗಿದೆ. ವೇದ ಮಂತ್ರಗಳನ್ನು ಉಚ್ಚರಿಸುವ ಮೊದಲು ಶ್ರೀಗುರು ಭ್ಯೋ ನಮಃ ಹರಿಃ ಓಂ ಎಂದು ಹೇಳಿಯೇ ಪ್ರಾರಂಭಿಸಿಸಲಾಗುತ್ತದೆ. ಇದು ವೇದಗಳನ್ನು ವಿಂಗಡಿಸಿದ ವೇದ ವ್ಯಾಸರಿಗೆ ಸಲ್ಲಿಸುವ ಗೌರವ ಎಂದರೂ ತಪ್ಪಲ್ಲ. ಮೊದಲ ವೇದ ಒಂದೇ ಆಗಿರುತ್ತಂತೆ. ಆ ವೇದವನ್ನು ಋಗ್‍ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದವರು ವ್ಯಾಸರಾಯರು. ವ್ಯಾಸ ಎನ್ನುವ ಪದಕ್ಕೆ ವಿಂಗಡಿಸುವಿಕೆ ಎಂಬ ಅರ್ಥವೂ ಇದೆ. ಈ ಕಾರಣದಿಂದಲೇ ವೇದವನ್ನು ವಿಂಗಡಿಸಿದ ವ್ಯಾಸರು, ವೇದ ವ್ಯಾಸರಾದರು ಎಂಬ ಪ್ರತೀಯೂ ಇದೆ. ಇದೇನೇ ಇರಲಿ, ನಮ್ಮ ಸಂಸ್ಕøತಿ ಮತ್ತು ಸಂಸ್ಕಾರದಲ್ಲಿ ವೇದವ್ಯಾಸರಿಗೆ ಮತ್ತು ಗುರುಗಳಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗುತ್ತದೆ. “ ಗುರುಃಬ್ರಹ್ಮಾ, ಗುರುಃವಿಷ್ಣು, ಗುರುದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮಂ, ತಸ್ಮೆ ಶ್ರೀ ಗುರುವೇ ನಮಃ ಈ ಶ್ಲೋಕ ದಿನವೂ ನಾವು ಪಠಿಸುತ್ತೇವೆ. ಇಲ್ಲಿ ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥದಿಂದ ತನ್ನ ಶಿಷ್ಯಂದಿರ ಒಳಿತಿಗೆ ಸದಾಕಾಲ ಚಿಂತಿಸುವ, ಯೋಚಿಸುವ ಮತ್ತು ಶ್ರೀಗಂಧವನ್ನು ಕೊರಡಿನಂತೆ ತನ್ನ ಜೀವನದ ಸರ್ವಸ್ವವನ್ನು ತನ್ನ ಶಿಷ್ಯರ ಒಳಿತಿಗೆ ಹಾರೈಸುವ ಗುರುಗಳನ್ನು ಬ್ರಹ್ಮವಿಷ್ಣು ಮಹೇಶ್ವರರಿಗೆ ಹೋಲಿಸಲಾಗುತ್ತದೆ. ಸರ್ವಸ್ವವೂ ಗುರುವೇ, ಎಲ್ಲವೂ ಗುರುಗಳ ಆಶೀರ್ವಾದದಿಂದಲೇ ಎಂಬ ಮಾತನ್ನು ಪುರಾಣದೆಲ್ಲೆಡೆ ಹೇಳಲಾಗಿದೆ. ಗುರು ಎಂದರೆ ನಮಗೆ ಕಲಿಸಲೇಬೇಕೆಂಬ ಅರ್ಥವಲ್ಲ. ಯಾರು ತಮ್ಮ ನಡವಳಿಕೆ, ಸಂಸ್ಕಾರ, ಆಚಾರ, ವಿಚಾರಗಳಿಂದ ಇತರರಿಗೆ ಮಾರ್ಗದರ್ಶಕರಾಗಿ, ಆದರ್ಶಪ್ರಾಯರಾಗಿ ಬದುಕುತ್ತಾರೋ ಅವರೇ ನಮ್ಮ ಜೀವನದ ನಿಜ ಗುರುಗಳಾಗುತ್ತಾರೆ. ‘ಗು’ ಎಂದರೆ ಅಜ್ಞಾನ, ರು ಎಂದರೆ ಹೋಗಲಾಡಿಸುವವನು. ಯಾರು ನಮ್ಮ ಮನಸ್ಸಿನ ಅಂಧಕಾರವನ್ನು ಅಜ್ಞಾನವನ್ನು ತೊಲಗಿಸುತ್ತಾನೆಯೋ ಅವನೇ ನಿಜವಾದ ಗುರುವಾಗಿರುತ್ತಾನೆ. ಯಾರು ತನ್ನ ನಯ ವಿನಯ ಆಚಾರ, ವಿಚಾರ ಮತ್ತು ಬದುಕಿನ ಬದುಕುವ ರೀತಿಯಿಂದ ಇತರರಿಗೆ ಬದುಕುವ ದಾರಿ ತೋರುತ್ತಾರೆಯೋ ಅವರೇ ನಿಜವಾದ ಅರ್ಥದಲ್ಲಿ ಗುರು ಎನ್ನಿಸಿಕೊಳ್ಳುತ್ತಾನೆ. ಗುರು ಎನ್ನುವ ಶಬ್ದಕ್ಕೆ ‘ಶಿಕ್ಷಕ’ ಎಂಬರ್ಥವೂ ಇದೆ. ಹೆಚ್ಚಿನವರು ‘ಗುರು’ವನ್ನು ಶಿಕ್ಷಕರ ರೂಪದಲ್ಲಿ ಕಂಡುಕೊಳ್ಳಬಹುದು. ಕೆಲವರು ಗುರುವನ್ನು ಗ್ರಂಥಗಳಲ್ಲಿ, ಪುಸ್ತಕ ಭಂಡಾರದಲ್ಲಿ ಕಂಡುಕೊಂಡಿರಬಹುದು. ಇನ್ನು ಕೆಲವರು ಧರ್ಮವನ್ನು ಬೋಧಿಸುವ ಯತಿವರ್ಯರಲ್ಲಿ ಗುರುಸಾನ್ನಿಧ್ಯವನ್ನು ಅನುಭವಿಸಿರಲೂ ಬಹುದು. ಇನ್ನೂ ಕೆಲವರು ತಮ್ಮ ಸ್ನೇಹಿತರಲ್ಲಿ ಒಡನಾಡಿಗಳಲ್ಲಿ ಗುರುವನ್ನು ಕಂಡಿರಬಹುದು. ಒಟ್ಟಿನಲ್ಲಿ ಗುರು ಎನ್ನುವ ಪದಕೇವಲ ಶಿಕ್ಷಕ ಅಥವಾ ಪಾಠ ಹೇಳಿಕೊಟ್ಟವರಿಗೂ ಮಾತ್ರ ಸೀಮಿತವಾಗುವುದಿಲ್ಲ. ನಮ್ಮ ಮನಸ್ಸಿನ ಅಜ್ಞಾನವನ್ನು ತೊಡೆದು ಹಾಕಿ ನಮ್ಮನ್ನು ನಾವು ಅರಿತು ಕೊಳ್ಳುವ ಮತ್ತು ನಮ್ಮ ಆಂತರ್ಯ ಶುದ್ಧಿಮಾಡುವ ಅಥವಾ ನಮ್ಮಲ್ಲಿರುವ ಜ್ಞಾನದ ದೀವಿಗೆಯನ್ನು ಜಾಗೃತಿಗೊಳಿಸುವ ಅಥವಾ ಸುಪ್ತವಾಗಿರುವ ಜ್ಞಾನಕೋಶವನ್ನು ಹೊರ ಜಗತ್ತಿಗೆ ಪರಿಚಯಿಸುವ ಅಗೋಚರವಾದ ಸುಪ್ತಶಕ್ತಿಯನ್ನು ಬಡಿದೆಬ್ಬಿಸುವ ಒಂದು ವಿಶೇಷ ಶಕ್ತಿಯನ್ನು ಗುರು ಎಂದು ಕರೆಯಲಾಗುತ್ತದೆ. ಆ ಗುರುವನ್ನು ನಾವು ನಮ್ಮ ಶಿಕ್ಷಕರಲ್ಲಿ, ಸ್ನೇಹಿತರಲ್ಲಿ, ಅಣ್ಣ ತವ್ಮ್ಮಂದಿರಲ್ಲಿ, ಅಕ್ಕತಂಗಿಯರಲ್ಲಿ ಒಡನಾಡಿಗಳಲ್ಲಿ ಕಂಡುಕೊಳ್ಳಲೂ ಬಹುದು. “ಅಜ್ಞಾನ” ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ| ಚಕ್ಷರುನ್ಮೀಲತಂ ಯೇನ ತಸ್ಮೈ ಶ್ರೀ ಗುರುವೇ ನಮಃ”. ನಮ್ಮಲ್ಲಿನ ಅಜ್ಞಾನವೆಂಬ ಅಂಧಕಾರವನ್ನು ತಮ್ಮ ಜ್ಞಾನ ದೀವಿಗೆಯ ಮುಖಾಂತರ ತೊಲಗಿಸಿ, ನಮ್ಮ ಕಣ್ಣುತೆರೆಸಿ ಬದುಕಲು ದಾರಿ ಮತ್ತು ಗುರಿ ತೋರಿಸಿದ ಆ ಮಹಾನ್ ಗುರುವಿಗೆ ಸಾವಿರ ಪ್ರ್ರಣಾಮಗಳು. ಈ ಅಷಾಡ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಶುಭದಿನವಾದ ಗುರುಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆಯ ಶುಭಸಂದರ್ಭದಲ್ಲಿ ಎಲ್ಲಾ ಗುರುಹಿರಿಯರಿಗೆ, ಗುರು ಸಮಾನರಿಗೆ ಸುಖ, ಶಾಂತಿ, ನೆಮ್ಮದಿ ಆರೋಗ್ಯ ದೊರಕಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

ಕೊನೆ ಮಾತು :
ವೇದವ್ಯಾಸರು ತಮ್ಮ ದೇಹವನ್ನು ತ್ಯಜಿಸುವ ಸಮಯದತ್ತ ಶಿಷ್ಯರು ಇವರನ್ನು ಇನ್ನು ಮುಂದೆ ಕಾಣಲು ಸಾಧ್ಯವಿಲ್ಲ ಎಂದು ದುಃಖಿಸುತ್ತಿರುವಾಗ ವೇದವ್ಯಾಸರು ಶಿಷ್ಯರನ್ನು ಕರೆದು ಶಿಷ್ಯರೇ, ನಾನು ಎಲ್ಲಾ ಜ್ಞಾನಿಗಳಲ್ಲಿ ನೆಲೆಸಿರುತ್ತೇನೆ. ನೀವು ಅವರನ್ನು ದರ್ಶಿಸಿ ಅರ್ಚಿಸಿದರೆ ನನ್ನನ್ನು ಪೂಜಿಸಿದಂತೆ ಆಗುತ್ತದೆ ಎಂದು ಸಮಾಧಾನಿಸಿದರು. ಈ ಕಾರಣದಿಂದಲೇ ವ್ಯಾಸಪೂರ್ಣಿಮೆಯಂದು ನಮಗೆಲ್ಲಾ ಪರಮ ಜ್ಞಾನವನ್ನು ನೀಡಿದ ಗುರುಗಳಿಗೆ ವಿಶೇಷವಾದ ಪೂಜೆ ಮಾಡುವ ವಾಡಿಕೆ ನಡೆದು ಬಂದಿದೆ. ಚುಡಾಮಣಿ ಗ್ರಂಥದಲ್ಲಿ ಗುರು ಆಚಾರ್ಯ ಪದದ ಬಗ್ಗೆ ಬಹಳ ಒಳ್ಳೆಯ ಧ್ಯಾನ ನೀಡಿದ್ದಾರೆ. ಪರಮತತ್ವವನ್ನು ಅರಿತು ನಿತ್ಯ ನಿರಂತರವಾಗಿ ಶಿಷ್ಯತನವನ್ನು ಬಯಸುವವರೇ ಗುರು ಎಂದು ವ್ಯಾಖ್ಯಾನಿಸಲಾಗಿದೆ ಸ್ವಾರ್ಥ ತ್ಯಜಿಸಿ ಪರರ ಶ್ರೇಯಸ್ಸಿಗೆ ಸದಾ ಶ್ರಮಿಸುವವನೇ ನಿಜವಾದ ಗುರು ಎಂದು ಬಹಳ ಮಾರ್ಮಿಕವಾಗಿ ಗುರುಗಳ ಬಗ್ಗೆ ತಿಳಿಸಿದ್ದಾರೆ.
ಎಲ್ಲಾ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಧಾವಂತದ, ವೇಗದ ಬದುಕಿನ ಈ ಹೊತ್ತಿನಲ್ಲಿ, ಆಧುನಿಕತೆಯ ನೆಪದಲ್ಲಿ, ತತ್ವ ಮೌಲ್ಯಗಳು ಸಂಸ್ಕಾರಗಳು ವೇಗವಾಗಿ ಬದಲಾಗುತ್ತಿವೆ. ಜೀವನ ಶೈಲಿಯೂ ಬದಲಾಗುತ್ತಿದೆ. ಗುರು ಮತ್ತು ಶಿಷ್ಯರ ಸಂಬಂಧ ಹಳಸುತ್ತಿದೆ. ಹಿಂದಿನ ಕಾಲದಲ್ಲಿ ಇದ್ದ ಗುರುಕುಲಪದ್ಧತಿಯಂತೂ ನಿರ್ಣಾಮವಾಗಿ ಹೋಗಿದೆ. ಗುರು ಶಿಷ್ಯರ ಸಂಬಂಧಕ್ಕೆ ಹೊಸ ಅರ್ಥವೇ ಬಂದಿದೆ. ಎಲ್ಲವೂ “ಮೌಲ್ಯಾಧಾರಿತ” ಸಂಬಂಧವಾಗಿ ಮಾರ್ಪಾಡಾಗಿದೆ. ಹಿಂದಿನ ಕಾಲದಲ್ಲಿ ಇರುತ್ತಿದ್ದ ಪ್ರೀತಿ, ಭಯ, ಭಕ್ತಿ, ಗೌರವಗಳು ಕೇವಲ ತೋರಿಕೆಯ ವಸ್ತುವಾಗಿ ಬದಲಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ನಮ್ಮನ್ನು ಪುನರ್ ವಿಮರ್ಷಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಆದರೆ ಒಂದಂತೂ ಸತ್ಯ. ಸತ್ಯಕ್ಕೆಂದೂ ಸಾವಿಲ್ಲ. ಸತ್ಯವೇ ಪರಮ ಚಿರಂತನ. ನಾವು ನಂಬಿದ ತತ್ವ, ಮೌಲ್ಯ ಆಚಾರ, ವಿಚಾರ ಮಂಥನಗಳನ್ನು ಯಾವತ್ತೂ ಬಲಿಕೊಡದೇ ಗುರುವೇ ಸರ್ವಸ್ವ ಎಂದು ಪರಿಗಣಿಸುವುದಲ್ಲಿಯೇ ನಮ್ಮೆಲ್ಲರ ಒಳಿತು ಇದೆ. ನಮ್ಮ ಒಳಿತಿಗಾಗಿ ಚಿಂತಿಸುವ ಮಂಥಿಸುವ ಸರ್ವ ತ್ಯಾಗ ಮಾಡುವ ಗುರುಗಳು ನಮ್ಮ ಸಮಾಜದಲ್ಲಿ ಇನ್ನೂ ಇದ್ದಾರೆ. ಅಂತಹ ಗುರುವಾರೇಣ್ಯರಿಗೆ, ಪರಮಪೂಜ್ಯಗುರುಗಳಿಗೆ ಮತ್ತು ಗುರುಪರಂಪರೆಗೆ ನಮೋ ನಮಃ.

ಡಾ|| ಮುರಲೀ ಮೋಹನ್ ಚೂಂತಾರು ಚೂಂತಾರು ಸರೋಜಿ ಭಟ್ ಪ್ರತಿಷ್ಠಾನ (ರಿ.)ಮಂಗಳೂರು

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!