ಪ್ರತಿಭಟನೆಗೆ ಮುಂದಾದ ಗ್ರಾಮ ಪಂಚಾಯತ್ ಸದಸ್ಯ ರಾಜೇಶ್ ಎನ್.ಎಸ್ ಕರೆಗೆ ಸ್ಪಂದಿಸಿ ನಾಗರಹಾವಿನ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ ಆಡಳಿತಾಧಿಕಾರಿ ಎ.ಸಿ ಜುಬಿನ್ ಮಹಾಪಾತ್ರ
ಕುಕ್ಕೆ ಸುಬ್ರಹ್ಮಣ್ಯದ ಸಾರ್ವಜನಿಕ ಸ್ಥಳದಲ್ಲಿ ಸತ್ತ ನಾಗರಹಾವಿನ ಸಂಸ್ಕಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ನೆಪವೊಡ್ಡಿ ಹಿಂದೇಟು ಹಾಕಿದಾಗ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಪ್ರತಿಭಟನೆಗೆ ಮುಂದಾಗಿ ನಂತರ ದೇವಸ್ಥಾನದ ಆಡಳಿತಾಧಿಕಾರಿ ಎ.ಸಿ ಅವರ ಸೂಚನೆ ಮೇರೆಗೆ ನಾಗರಹಾವಿನ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ ಘಟನೆ ಜುಲೈ 11 ರಂದು ನಡೆದಿದೆ.
ಕುಕ್ಕೆ ಸುಬ್ರಹ್ಮಣ್ಯ ಆಸುಪಾಸಿನ ಸಾರ್ವಜನಿಕ ಸ್ಥಳಗಳಲ್ಲಿ ಸತ್ತ ನಾಗರಹಾವಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸರ್ಪ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ ನಿನ್ನೆ ಸುಬ್ರಹ್ಮಣ್ಯದ ಬೈಪಾಸ್ ರಸ್ತೆಯಲ್ಲಿ ಸರ್ಪವೊಂದು ವಾಹನದಡಿಗೆ ಸಿಲುಕಿ ಸತ್ತು ಹೋಗಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್.ಎನ್.ಎಸ್ ಮತ್ತಿತರರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದು ದಫನ ಕಾರ್ಯಕ್ಕೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಅಲ್ಲಿನ ಅಧಿಕಾರಿಗಳು “ನಮಗೆ ಭಟ್ರು ಸಿಗುತ್ತಿಲ್ಲ, ಆ ಸತ್ತು ಹೋದ ಸರ್ಪವನ್ನು ತಕ್ಷಣಕ್ಕೆ ದಹನ ಮಾಡಲು ಆಗುವುದಿಲ್ಲ” ಎಂದು ಉಡಾಫೆ ಉತ್ತರಗಳನ್ನು ನೀಡಿ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಹಾಗಾಗಿ ರಾಜೇಶ್.ಎನ್.ಎಸ್ ಹಾಗೂ ಇತರರು ಸತ್ತ ನಾಗರಹಾವಿನ ದೇಹವನ್ನು ಆಡಳಿತ ಕಛೇರಿ ಮುಂದೆ ಇರಿಸಿ “ದೇವಸ್ಥಾನದಲ್ಲಿ ಸರ್ಪ ಸಂಸ್ಕಾರಕ್ಕೆ ಹಣ ಕೊಟ್ಟರೆ ಭಟ್ರು ಸಿಗುತ್ತಾರೆ. ಕುಕ್ಕೆಯಲ್ಲಿ ಸತ್ತುಹೋದ ನಾಗದೇವರಿಗೆ ಸಂಸ್ಕಾರ ಮಾಡಲು ನಿಮಗೆ ಭಟ್ರು ಸಿಗುವುದಿಲ್ಲವೇ” ಎಂದು ಹೇಳಿ ಸ್ವಲ್ಪ ಸಮಯ ಪ್ರತಿಭಟನೆ ನಡೆಸಿದ್ದು, ಬಳಿಕ ಸ್ಥಳಕ್ಕೆ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಸ್ಥಳಕ್ಕೆ ಬಂದು ಹಾವಿನ ಸಂಸ್ಕಾರಕ್ಕೆ ಏರ್ಪಾಡು ಮಾಡಿದರು.
ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್.ಎನ್.ಎಸ್ ಅವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಾಗ ಪುತ್ತೂರು ಉಪವಿಭಾಗಾಧಿಕಾರಿ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಆಗಿರುವ ಜುಬಿನ್ ಮಹಾಪಾತ್ರ ಅವರನ್ನು ಸಂಪರ್ಕಿಸಿದ್ದು, ತಕ್ಷಣ ಸ್ಪಂದಿಸಿದ ಅವರು ಸತ್ತ ನಾಗರಹಾವಿನ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.