Ad Widget

ಬದುಕಿಗೆ ಭರವಸೆ ನೀಡುವ ವೈದ್ಯ ನಾರಾಯಣನಿಗೆ ನಮನ

ಜುಲೈ 1, 1882ರಂದು ಭಾರತ ಕಂಡ ಮಹಾನ್ ವೈದ್ಯ, ಪ್ರಾಮಾಣಿಕ ರಾಜಕಾರಣಿ ಅಪ್ರತಿಮ ದೇಶಸೇವಕ ಮತ್ತು ಮಹಾನ್ ಸ್ವಾತಂತ್ರ ಹೋರಾಟಗಾರ, ಶಿಕ್ಷಣ ತಜ್ಞ ಡಾ| ಬಿದನ್ ಚಂದ್ರ ರಾಯ್ ಜನ್ಮವೆತ್ತ ದಿನ. ಈ ಮಹಾನ್ ಚೇತನದ ನೆನಪಿನ ಕುರುಹಾಗಿ ದೇಶದ್ಯಾಂತ ಜುಲೈ 1ರಂದು ವೈದ್ಯರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಸುಮಾರು 80 ವರ್ಷಗಳ ಕಾಲ ತುಂಬು ಜೀವನ ನಡೆಸಿದ ಡಾ| ಬಿ.ಸಿ ರಾಯ್ ಜೀವನದುದ್ದಕ್ಕೂ ಸರಳ ಮತ್ತು ಉದಾತ್ತ ಜೀವನ ನಡೆಸಿ ಬಡ ಬಗ್ಗರ, ದೀನದಲಿತರ, ನೊಂದ ಜೀವಗಳ ಸಾಂತ್ವನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.    Poor are my patients, god pays for them  ಎಂಬಂತೆ ಯಾವತ್ತೂ ಬಡವರಿಗೆ ಉಚಿತ ಚಿಕಿತ್ಸೆ ನೀಡಿ ಮಾನವೀಯತೆಯನ್ನು ಜೀವನ ಪರ್ಯಂತ ಮೆರೆದರು. ಗಾಂಧೀಜಿಯವರ ಜೀವನ ಆದರ್ಶಗಳಿಂದ  ಬಹಳಷ್ಟು ಪ್ರಭಾವಿತರಾಗಿದ್ದ ಶ್ರೀಯುತರು ಬಡವರ ಉದ್ದಾರಕ್ಕಾಗಿ ಯಾವತ್ತೂ ಶ್ರಮಿಸುತ್ತಿದ್ದರು. ಬಡವರಿಗಾಗಿ ಬಂಗಾಳದ ಕಲ್ಕತ್ತಾದಲ್ಲಿ ಆಸ್ಪತ್ರೆಯನ್ನು ತೆರೆದರು  ಕಲ್ಕತ್ತಾದಲ್ಲಿ ಪ್ರಾಥಮಿಕ ವೈದ್ಯಕೀಯ ಶಿಕ್ಷಣ ಪಡೆದು ಇಂಗ್ಲೇಡ್‍ನಲ್ಲಿ ಉನ್ನತ ಶಿಕ್ಷಣ (MRCP, FRCS)   ಕಲಿತ ಬಳಿಕ ತಾಯ್ನಾಡಿನ ಸೆಳೆತಕ್ಕೊಳಗಾಗಿ ಭಾರತಕ್ಕೆ ಹಿಂದುರುಗಿದರು. ತಾವು ನಂಬಿದ ತತ್ವ ಆದರ್ಶ ಧ್ಯೇಯಗಳನ್ನು ಬಲಿಗೊಡದೆ ವೈದ್ಯಕೀಯ ವೃತ್ತಿಯನ್ನೂ ಪ್ರಾಮಾಣಿವಾಗಿ ನಡೆಸಿ ನುಡಿದಂತೆ ನಡೆದು ಇತರರಿಗೂ ಆದರ್ಶ ಪ್ರಾಯರಾದರು. ಸ್ವಾತಂತ್ರ ನಂತರದ ದಿನಗಳಲ್ಲಿ ಗಾಂಧೀಜಿಯವರ ಆದೇಶದಂತೆ ರಾಜಕೀಯ ಪ್ರವೇಶಿಸಿ 1948ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ಮುಖ್ಯಮಂತ್ರಿಯಾದ ಬಳಿಕವೂ ಹಲವಾರು ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಉಚಿತ ಚಿಕಿತ್ಸೆಯನ್ನು ನೀಡಿದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ತೆರೆದು ಉಚಿತ ಶಿಕ್ಷಣವನ್ನು ನೀಡಿಸಿದರು. ಹೀಗೆ ರಾಜಕೀಯ, ವೈದ್ಯಕೀಯ, ಶಿಕ್ಷಣ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸಾಗಿಸಲು ಜೀವನ ಪರ್ಯಾಂತ ಶ್ರೀಗಂಧದ ಕೊರಡಿನಂತೆ ತಮ್ಮ ಜೀವನವನ್ನು ಸವೆಸಿದರು. ಹೀಗೆ 80 ವರ್ಷಗಳ   ತುಂಬು  ಜೀವನ ನಡೆಸಿ 1962ರ ಜುಲೈ ಒಂದರಂದು ವಿಧಿವಶರಾದರು. ಅವರ ಅಪ್ರತಿಮ ಸೇವೆಗಾಗಿ ಭಾರತ ಸರ್ಕಾರ 1961ರಲ್ಲಿ ಭಾರತ ರತ್ನ ನೀಡಿ ಗೌರವವಿತ್ತು. 1976ರಿಂದ  ವೈದ್ಯಕೀಯ ರಂಗದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ವೈದ್ಯರಿಗಾಗಿ ಬಿ.ಸಿ.ರಾಯ್ ಪ್ರಶಸ್ತಿಯನ್ನು ಆರಂಭಿಸಲಾಯಿತು. ಇದು ವೈದ್ಯಕೀಯ ಕ್ಷೇತ್ರದ ಪರಮೋಚ್ಛ ಪ್ರಶಸ್ತಿ ಎಂದರೂ  ತಪ್ಪಲ್ಲ. ಇಂತಹ ಮಹಾನ್ ಚೇತನದ ನೆನಪಿಗಾಗಿ ದೇಶದ್ಯಾಂತ ಜುಲೈ 1ರಂದು ವೈದರ ದಿನ ಎಂದು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಾಗೆಯೇ ದೇಶದಾದ್ಯಂತ  ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನ ಮಜಲುಗಳತ್ತ ದೃಷ್ಟಿ ಹಾಯಿಸಿಕೊಂಡು ತಪ್ಪನ್ನು ತಿದ್ದಿಕೊಂಡು ಆತ್ಮಾವಲೋಕನ ಮಾಡಿಕೊಂಡು ಮಾನವಕುಲದ ಸೇವೆಗೆ ತಮ್ಮನ್ನು ಮಗದೊಮ್ಮೆ ಸಮರ್ಪಿಸಿಕೊಳ್ಳುವ ಸುದಿನ.

. . . . .

ಶರೀರೇ ಜರ್ಜರೀ ಭೂತೇ ವ್ಯಾಧಿ ಗ್ರಸ್ಥೆ ಕಳೇಬರೇ ಔಷಧಂ ಜಾಹ್ನವೀಃ ತೋಯಂ, ವೈದ್ಯೋ ನಾರಾಯಣೋ ಹರಿಃ.

(When all  vital life  forces leave the body, when the whole being is sized by incurable diseases, what medicine is there, than river Ganga, who else but lord Narayana, Hari, would come as physician.)   

ಮನುಷ್ಯನ ದೇಹಕ್ಕೆ ರೋಗವು ತಗಲಿಕೊಂಡು, ಸರ್ವ ಕ್ರಿಯೆಗಳು ನಿಷ್ಕ್ರೀಯವಾಗಿ, ದೇಹವು ಕಳೇಬರಹದಂತಾದಾಗ ಸ್ವತಃ ನಾರಾಯಣನೇ ವೈದ್ಯನ ರೂಪದಲ್ಲಿ ಬರುತ್ತಾನೆ. ಮತ್ತು ಗಂಗಾಜಲವೇ ಅಮೃತವಾಗುತ್ತದೆ ಎಂಬುದು ಪುರಾತನ ಕಾಲದಿಂದಲೂ ನಾವು ನಂಬಿಕೊಂಡು ಬಂದ ಸಾರ್ವಕಾಲಿನ ಸತ್ಯ. ವೈದ್ಯ ಮತ್ತು ರೋಗಿಗಳ ಸಂಬಂಧದಲ್ಲಿ ನಂಬಿಕೆ ಎಂಬ ಪದಕ್ಕೆ ಬಹಳ ಅತ್ಯಮೂಲ್ಯವಾದ ಸ್ಥಾನವಿದೆ. ಹೆಚ್ಚಿನ ರೋಗಿಗಳ ಚಿಕಿತ್ಸೆ, ವೈದ್ಯ ರೋಗಿಯ ಸಂಬಂಧ ಮತ್ತು ನಂಬಿಕೆಯ ತಳಹದಿಯ ಮೇಲೆ ನಿಂತಿರುತ್ತದೆ.

 ಮೊದಲೆಲ್ಲಾ ಊರಿಗೊಬ್ಬರೇ ವೈದ್ಯ. ಆತ ಕೊಟ್ಟಿದ್ದೇ ಮದ್ದು. ಆಗ ಈಗಿನಂತೆ ಹೊಸ ಹೊಸ ಏಬೋಲಾ, ಏಡ್ಸ್, ಹೆಪಟೈಟೀಸ್, ಕೊರೋನಾ ಮುಂತಾದ ಮಾರಣಾಂತಿಕ ಖಾಯಿಲೆಗಳಿರಲಿಲ್ಲ. ಸಕಲ ರೋಗಕ್ಕೂ ಒಬ್ಬನೇ ವೈದ್ಯ. ಒಂದೇ ಮದ್ದು. ಒಂದಷ್ಟು ಕಷಾಯ, ಔಷಧಿ, ಮಾತ್ರೆ. ವೈದ್ಯರು ಆತ್ಮೀಯವಾಗಿ ತಲೆ ಸವರಿ, ಮೈ ತಡವಿ, ನಾಡಿಬಡಿತ ನೋಡಿದಾಗಲೇ  ಅರ್ಧ ರೋಗ ವಾಸಿಯಾಗುತ್ತಿತ್ತು.  ಕುಟುಂಬ ವೈದ್ಯ ಪದ್ಧತಿ ಭಾರತದಲ್ಲಿ, ಅದೂ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಪ್ರಖ್ಯಾತಿ ಪಡೆದಿದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರೆಂದರೆ ದೇವರು ಎಂಬ ಭಾವನೆ ಉಳಿದಿದೆ ಎಂಬುದಂತೂ ಸತ್ಯ. ಆದರೆ ನಗರ ಪ್ರದೇಶಗಳಲ್ಲಿ ವೈದ್ಯರು ದೇವರಾಗುವುದು ಬಿಡಿ, ಮನುಷ್ಯರೇ ಅಲ್ಲ ಎಂಬ ಸಂಧಿಗ್ಧ ಪರಿಸ್ಥಿತಿಯ ಬಂದೊದಗಿದೆ ಎನ್ನುವುದು ಬಹಳ ನೋವಿನ ಸಂಗತಿ. 

ಕಾಲಕ್ರಮೇಣ ಜೀವನಶೈಲಿ, ಆಹಾರ ಪದ್ಧತಿ, ಪಾಶ್ಚಾತ್ತೀಕರಣ, ನಗರೀಕರಣ ಮತ್ತು ಅಧುನಿಕತೆ ಬೆಳೆದಂತೆಲ್ಲಾ ಹೊಸ ಹೊಸ ರೋಗಗಳು ರೋಗಿಗಳಲ್ಲಿ ಹುಟ್ಟಿಕೊಂಡಿತು. ವೈದ್ಯರ ಸಂಖ್ಯೆಯೂ ವೃದ್ಧಿಸಿತು. ಒಂದು ರೋಗಕ್ಕೆ ಒಬ್ಬ ವೈದ್ಯ ಎಂಬ ಪರಿಸ್ಥಿತಿ ಬಂದೊದಗುವ ಪ್ರಮೇಯ ಮತ್ತು ಕಾಲಘಟ್ಟದಲ್ಲಿ ನಾವು ಬಂದು ನಿಂತಿದ್ದೇವೆ. ಅದರ ಜೊತೆಗೆ ವೈದ್ಯ ರೋಗಿಯ ಸಂಬಂಧವೂ ಬದಲಾಗುತ್ತಾ ಬಂದಿತು. ಎಲ್ಲವೂ ವ್ಯಾಪಾರೀಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ತಂದೆ-ಮಕ್ಕಳ, ಅಣ್ಣ-ತಮ್ಮಂದಿರ ಗಂಡ-ಹೆಂಡಿರ ಸಂಬಂಧಗಳಲ್ಲಿ ಮಾರ್ಪಾಡಾದಂತೆ  ವೈದ್ಯರೋಗಿಯ ಸಂಬಂಧವೂ  ವ್ಯಾಪಾರೀಕರಣವಾಗಿರುವುದು ಆಶ್ಚರ್ಯವಾದ ಸಂಗತಿಯೇನೂ ಅಲ್ಲ. ಮೊದಲೆಲ್ಲಾ ನಂಬಿಕೆ, ವಿಶ್ವಾಸದ ತಳಹದಿಯ ಮೇಲೆ ನಿಂತಿರುತ್ತಿದ್ದ ಚಿಕಿತ್ಸಾ ಪದ್ಧತಿ, ಈಗ ವ್ಯಾಪಾರೀಕರಣಗೊಂಡ ಸಮಾಜದಲ್ಲಿ ಕೇವಲ ನಂಬಿಕೆ ಮತ್ತು ವಿಶ್ವಾಸ ಎಂಬ ಪದ ಅರ್ಥ ಕಳಕೊಂಡಿದೆ ಎಂಬುದಂತೂ ಸತ್ಯ. ಆರೋಗ್ಯವೇ ಭಾಗ್ಯ ಮತ್ತು ಪ್ರತಿಯೊಬ್ಬರು ಆರೋಗ್ಯವಂತರಾಗಿ ಬಾಳಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ. ಆದರೆ ಇಂದು ಪ್ರತಿಯೊಬ್ಬರೂ ಒತ್ತಡದ ಜೀವನದಿಂದಾಗಿ ಹತ್ತಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ.

.  ಆಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೇಗೆ ಹತ್ತಾರು ವಿಧಾನಗಳ ಮೂಲಕ ನಮ್ಮೆಲ್ಲರ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಶ್ರೀಗಂಧದ ಕೊರಡಿನಂತೆ ಸವೆಸಿಕೊಂಡು ಮನುಕುಲದ ಏಳ್ಗೆಗೆ ಬದುಕನ್ನು ಸಮರ್ಪಿಸಿಕೊಂಡಿರುವ ವೈದ್ಯರನ್ನು ಅಭಿನಂದಿಸುವ ಕೃತಜ್ಞತೆ ಸೂಚಿಸುವ ದಿನ ಜುಲೈ ೧. ನಮ್ಮ ದೇಹದ ಆರೋಗ್ಯದಲ್ಲಿ ವೈಪರೀತ್ಯ ಬಂದಾಗ ಜೀವನ್ಮರಣದ ನಡುವೆ ಬದುಕಲು ಹೆಣಗಾಡುತ್ತಿರುವಾಗ ನೋವು ಶಮನಗೊಳಿಸಿ, ಧೈರ್ಯ ತುಂಬಿ, ಆತ್ಮವಿಶ್ವಾಸ ತುಂಬಿ ಬಾಳಿಗೆ ಬೆಳಕು ನೀಡಿ ಹೊಸ ಜೀವನಕ್ಕೆ ರಹದಾರಿ ಮಾಡಿ ಕೊಟ್ಟ ನಮ್ಮ ನೆಚ್ಚಿನ ವೈದ್ಯರನ್ನು ಸ್ಮರಿಸುವ ನೆನಪಿಸಿಕೊಳ್ಳುವ ಮತ್ತು ಆಧರಿಸುವ ಸ್ಮರಣೀಯವಾದ ದಿನವಿದು. 

ವ್ಯಾಪಾರಿ ಪ್ರವೃತ್ತಿಗೆ ಕಡಿವಾಣ ಅಗತ್ಯವಿದೆ.

ನಮಗೆ ಸ್ವಾತಂತ್ರ್ಯ ಲಭಿಸಿ 77ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಕಾಲ ಬದಲಾದಂತೆ ನಮ್ಮ ಜೀವನಶೈಲಿ, ಆದರ್ಶಗಳೂ ಬದಲಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಗಳು, ಅವಿಷ್ಕಾರ ನಡೆದಿದೆ. ಹೊಸ ಹೊಸ ರೋಗಗಳು ಮತ್ತು ಹೊಸ ಹೊಸ ಔಷಧಿಗಳು ಹುಟ್ಟಿಕೊಂಡಿವೆ. ಇನ್ನೊಂದೆಡೆ ರೋಗಿ ಮತ್ತು ವೈದ್ಯರ ನಡುವಿನ ಭಾವಾನಾತ್ಮಕ ಸಂಬಂಧ ಶಿಥಿಲವಾಗುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಾರಿ ಮನೋಭಾವನೆ ಹೆಚ್ಚಾಗಿ ಬೆಳೆಯುತ್ತಿರುವುದು ವಿಷಾಧನೀಯ ವಿಚಾರ. 

ವೈದ್ಯ ಶಿಕ್ಷಣ ವೈದ್ಯಕೀಯ ವೃತ್ತಿ, ಸಂಶೋಧನೆಗಳೇ ಇರಲಿ ಎಲ್ಲ ಕಡೆಯೂ ಧನಬಲವೇ ವಿಜೃಂಭಿಸುತ್ತಿದೆ. ಪ್ರತಿಭೆ, ಪ್ರಾಮಾಣಿಕ ಪರಿಶ್ರಮಗಳಿಗೆ ಕಿಂಚಿತ್ತೂ ಬೆಲೆ ಸಿಗುತ್ತಿಲ್ಲ. ಇದು ಸುಂದರ, ಸ್ವಸ್ಥ ಸಮಾಜಕ್ಕೆ ಖಂಡಿತ ಮಾರಕ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಜನತೆ  ಮತ್ತು ಸರ್ಕಾರ ತ್ವರಿತಗತಿಯಲ್ಲಿ ಸ್ಪಂದಿಸಬೇಕು. ಅರ್ಹ ಪ್ರತಿಭಾವಂತರಿಗೆ ವೈದ್ಯಕೀಯ ಶಿಕ್ಷಣ ಅವಕಾಶ ದೊರೆತು, ಆರೋಗ್ಯ ಕ್ಷೇತ್ರದಲ್ಲ್ಲೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ರೋಗಗಳಿಗೂ ಮತ್ತು ತಲೆತಲಾಂತರಗಳಿಂದ ಬಾಧಿಸುತ್ತಿರುವ ರೋಗಗಳಿಗೂ ಕಡಿವಾಣ ಹಾಕಬೇಕು. ಔಷಧ, ಶುಶ್ರೂಷೆ ಮತ್ತು ಎಲ್ಲಾ ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಬಡವರ ಮನೆ ಬಾಗಿಲಿಗೆ ತಲುಪಬೇಕು. ಈ ನಿಟ್ಟಿನಲ್ಲಿ ನಿಸ್ವಾರ್ಥದಿಂದ ಸೇವಾ ಮನೋಭಾವದಿಂದ ಹಗಲಿರುಳು ತಮ್ಮ ಜೀವನವನ್ನು ರೋಗಿಗಳ ಒಳಿತಿಗಾಗಿ ತೊಡಗಿಸಿಕೊಂಡು ವೈದ್ಯರನ್ನು ಗುರುತಿಸಿ ಕಾರ್ಯ ನಡೆಯಬೇಕು. 

ರೋಗಿಗಳಿಗೂ ಒಂದೆರಡು ಕಿವಿಮಾತು. ದಯವಿಟ್ಟು ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ವೈದ್ಯರ ಮೇಲೆ ಪೂರ್ಣ ಭರವಸೆ ಇಡಿ. ಎಲ್ಲಾ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರ ಬಳಿ ತೆರೆದಿಡಿ. ವೈದ್ಯರೂ ನಿಮ್ಮಂತೆಯೇ ಇರುವ ಇನ್ನೊಂದು ಜೀವ. ಅವರಿಗೆ ಆಸೆ, ಆಕಾಂಕ್ಷೆ, ವೈಯಕ್ತಿಕ ಸಮಸ್ಯೆ, ಭಾವನೆಗಳು ಇರುತ್ತವೆ. ಅವರ ಭಾವನೆಗಳಿಗೆ, ನೋವುಗಳಿಗೂ ರೋಗಿಗಳು ಸ್ಪಂದಿಸಬೇಕು. ಹಾಗಿದ್ದಲ್ಲಿ ಮಾತ್ರ ವೈದ್ಯ –ರೋಗಿಗಳ ನಡುವೆ ಸುಮಧುರ ಬಾಂಧವ್ಯ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ನೆನಪಿಡಿ, ಈಗಿರುವ ಕಾಲಘಟ್ಟದಲ್ಲಿ ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳು ವೈದ್ಯರಿಲ್ಲದೆ ಬದುಕಬಹುದು. ಆದರೆ ವೈದ್ಯರು ರೋಗಿಗಳಿಲ್ಲದ ಬದುಕುವುದು ಅಸಾಧ್ಯ ಎಂಬ ಮಾತು ಬಂದರೆ ಅತಿಶಯೋಕ್ತಿಯಲ್ಲ. 

ರೋಗಿಗಳು ಕೂಡ ವೈದ್ಯರಿಗೆ ರೋಗದ ಬಗ್ಗೆ ಸಂಪೂರ್ಣ ಪರಾಮರ್ಶೆ ಮಾಡಲು ಕಾಲಾವಕಾಶ ನೀಡಬೇಕು. ದಿನ ಬೆಳಗಾಗುವುದರೊಳಗೆ ಕಾಯಿಲೆ ವಾಸಿಯಾಗಬೇಕು ಎಂದು ವೈದ್ಯರ ಮೇಲೆ ಅನಗತ್ಯ ಒತ್ತಡ ಹಾಕಬೇಡಿ. ಅನಗತ್ಯ ಪ್ರಶ್ನೆ ಕೇಳಿ ಅಂತರ್ಜಾಲದ ಮಾಹಿತಿಯನ್ನು ವೈದ್ಯರ ಬಳಿ ತಿಳಿಸಿ, ತಮ್ಮ ಅಲ್ಪ ಸ್ವಲ್ಪ ಜ್ಞಾನದಿಂದ ವೈದ್ಯರ ದಾರಿ ಕೆಡಿಸಬೇಡಿ. ಪ್ರತಿಶತ ಮೂವತ್ತರಷ್ಟು ರೋಗ, ವೈದ್ಯರ ಮೇಲಿನ ನಂಬಿಕೆಯ ತಳಹದಿಯಲ್ಲೇ ಗುಣವಾಗುತ್ತದೆ. 

ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು. ಆದರೆ ಮನಸ್ಸಿನ ರೋಗ ಗುಣಪಡಿಸಲು ವೈದ್ಯರಿಂದ ಅಸಾಧ್ಯ ಎನ್ನುವುದನ್ನು ಅರಿತುಕೊಂಡರೆ, ವೈದ್ಯರ ಕೆಲಸ ಸರಳವಾಗಬಹುದು ವೈದ್ಯರೂ ಆತ್ಮವಿಮರ್ಶೆ  ಮಾಡಿಕೊಂಡು ತಮ್ಮ ವೃತ್ತಿಯನ್ನು ಪಲಿಸಿದಲ್ಲಿ ಸುಂದರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಲೂಬಹುದು. 

ಕೊನೆ ಮಾತು 

ವೈದ್ಯಕೀಯ ವೃತ್ತಿ ಎನ್ನುವುದು ಸೇವಾ ಕ್ಷೇತ್ರದ ಪರಿಧಿಯೊಳಗೆ ಬರುವ ಪವಿತ್ರವಾದ ವೃತ್ತಿ. ವೈದ್ಯರು ನೀಡುವ ಸೇವೆಗೆ ಬೆಲೆಕಟ್ಟುವುದು ಖಂಡಿತಾ ಸಾಧ್ಯವಿಲ್ಲ. ರಕ್ತನಾಳಗಳು ತುಂಡಾಗಿ ತೀವ್ರ ರಕ್ತಸ್ರಾವವಾದಾಗ, ಹೃದಯ ಸ್ತಂಬನವಾಗಿ ಎದೆ ಬಡಿತ ನಿಂತುಹೋದಾಗ, ವೈದ್ಯರು ಸಾಕ್ಷಾತ್ ದೇವರಾಗಿ ಕಾಣುತ್ತಾರೆ. ಆದರೆ ಕೆಲವೊಮ್ಮೆ ವೈದ್ಯರ ತೀವ್ರ ಪ್ರಯತ್ನದ ಬಳಿಕವೂ ಸಾವು ಸಂಭವಿಸಿದಲ್ಲಿ, ವೈದ್ಯರನ್ನೇ ಸಾವಿಗೆ ಹೊಣೆಮಾಡಿ ಆಕ್ರಮಣ ಮಾಡುವುದು, ಹಿಂಸಾಚಾರ ಮಾಡುವುದು, ಆಸ್ಪತ್ರೆಗೆ ದಾಳಿ ಮಾಡುವುದು ಮಾನವೀಯತೆಯ ಲಕ್ಷಣವಲ್ಲ. ಯಾವೊಬ್ಬ ವೈದ್ಯರೂ ತನ್ನ ರೋಗಿ ಸಾಯಬೇಕೆಂದು ಇಚ್ಛಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಎಲ್ಲಾ ವೈದ್ಯರು ಪ್ರಾಮಾಣಿಕರೆಂದು ತಿಳಿಯಬೇಕಿಲ್ಲ. ನೂರರಲ್ಲಿ ಒಬ್ಬರು ಅಪ್ರಾಮಾಣಿಕರು ಇರಲೂ ಬಹುದು. ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸಲು ವೈದ್ಯರು ನಿಡುವ ಔಷಧಿಗಳು ಎಷ್ಟು ಮುಖ್ಯವೋ ಅದೇ ರೀತಿ ವೈದ್ಯರ ಮೇಲಿನ ವಿಶ್ವಾಸ, ನಂಬಿಕೆಗಳು ಅತೀ ಅವಶ್ಯಕ. ವೈದ್ಯರು ಕೂಡಾ ನಿಮ್ಮಂತೆಯೇ ಒಬ್ಬ ಮನುಷ್ಯರು ಅವರಿಗೂ ತಮ್ಮದೇ ಆದ ಇತಿ ಮಿತಿಗಳಿವೆ, ಅವರದ್ದೇ ಆದ ವೈಯಕ್ತಿಕ ಬದುಕು ಇದೆ ಎಂಬುದನ್ನು ರೋಗಿಗಳು ಮನಗಾಣಬೇಕು. ಅಭಿವ್ಯಕ್ತಿ ಸ್ವಾತಂತ್ರ, ವೃತ್ತಿ ಗೌರವ ಮತ್ತು ರಾಜ ಧರ್ಮ ಎಲ್ಲಾ ವೃತ್ತಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದಲ್ಲಿ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಬಹುದು. ಮತ್ತು ವೈದ್ಯರೋಗಿಗಳ ನಡುವಿನ ಅನಾವಶ್ಯಕ ಸಂಘರ್ಷವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಬಲ್ಲದು. ಅದರಲ್ಲಿಯೇ ನಮ್ಮೆಲ್ಲರ ಒಳಿತು ಅಡಗಿದೆ. ಪ್ರತೀ ವರ್ಷ ಜುಲೈ 1ರಂದು ಭಾರತದಾದ್ಯಂತ  ವೈದ್ಯರ ದಿನ ಎಂದು ಆಚರಿಸಿ ಮನುಕುಲದ ಒಳಿತಿಗಾಗಿ ಹಗಲು ರಾತ್ರಿಯಲ್ಲದೆ ಶ್ರೀ ಗಂಧ ಕೊರಡಿನಂತೆ ನಮ್ಮ ಜೀವನವನ್ನು ಸವಿಸುವ ವೈದ್ಯರನ್ನು ನೆನೆಸಿ ಸ್ಮರಿಸಿ ಗೌರವ ನೀಡಲಾಗುತ್ತದೆ. ಅದೇ ರೀತಿ ವೈದ್ಯ ಬಂಧುಗಳು ತಮ್ಮ ವೃತ್ತಿ ಜೀವನದ ಏಳು ಬೀಳುಗಳನ್ನೆಲ್ಲಾ  ವಿಮರ್ಶಿಸಿಕೊಂಡು ಆತ್ಮಾವಲೋಕನ ಮಾಡಿಕೊಂಡು ರೋಗಿಗಳ ಸೇವೆಗೆ ತಮ್ಮನ್ನು ಪುನಃ ಅರ್ಪಿಸಿಕೊಳ್ಳುವ  ದಿನವೆಂದರೂ ತಪ್ಪಲ್ಲ. 

ಡಾ|| ಮುರಲೀ ಮೋಹನ್ ಚೂಂತಾರು 

         ಸುರಕ್ಷಾದಂತ ಚಿಕಿತ್ಸಾಲಯ

     ಹೊಸಂಗಡಿ – 671 323 ಮೊ : 09845135787

Related Posts

error: Content is protected !!