ವಿಧಾನ ಪರಿಷತ್ ಚುನಾವಣೆಗೆ ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರು ಮೇ. 25 ರಂದು ಸುಳ್ಯಕ್ಕೆ ಭೇಟಿ ನೀಡಿದರು. ಸುಳ್ಯದ ಶ್ರೀ ಚೆನ್ನಕೇಶವ ದೇವರ ದರ್ಶನ ಪಡೆದು ಬೆಂಬಲಿಗರ ಜತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಎನ್.ಎ.ರಾಮಚಂದ್ರ, ಕೃಪಾಶಂಕರ ತುದಿಯಡ್ಕ, ರಾಜೇಶ್ ಅಂಬೆಕಲ್ಲು, ರಂಜಿತ್ ರೈ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಘುಪತಿ ಭಟ್‌ರವರಿಗೆ ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಲು ನಿರಾಕರಿಸಿತ್ತು. ಆ ಸಂದರ್ಭದಲ್ಲಿಯೂ ಭಟ್ ಅವರು ಬೇಸರಗೊಂಡಿದ್ದರು. ಬಳಿಕ ಪಕ್ಷದ ವರಿಷ್ಠರು ವಿಧಾನ ಪರಿಷತ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಅಭ್ಯರ್ಥಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಅಭ್ಯರ್ಥಿಯ ಪರವಾಗಿ ಉತ್ತಮವಾಗಿ ಕೆಲಸ ಮಾಡಿದ್ದರು. ಇದೀಗ ಟಿಕೇಟ್ ವಂಚಿತರಾಗಿರುವುದರಿಂದ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಧನಂಜಯ ಸರ್ಜಿ ಅವರನ್ನು ಕಣಕ್ಕೆ ಇಳಿಸಿದೆ.
ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ನೀಡಬೇಕಿತ್ತು – ರಘುಪತಿ ಭಟ್
ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೇಟ್ ಪಡೆದುಕೊಂಡಿರುವ ಧನಂಜಯ ಸರ್ಜಿ ನೇತೃತ್ವದ ಸರ್ಜಿ ಫೌಂಡೇಶನ್ ಈ ಹಿಂದೆ ಶಿವಮೊಗ್ಗದಲ್ಲಿ ಹಿಂದೂ ವಿರೋಧಿ ಸಂಘಟನೆಗಳ ಜತೆ ಕೈ ಜೋಡಿದ್ದರು. ಇಂತವರಿಗೆ ಟಿಕೇಟ್ ನೀಡುವ ಬದಲು ಸಾಮಾನ್ಯ ಕಾರ್ಯಕರ್ತರಿಗೆ ಟಿಕೇಟ್ ನೀಡಿದ್ದರೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರಲಿಲ್ಲ ಎಂದು ರಘುಪತಿ ಭಟ್ ತಿಳಿಸಿದ್ದಾರೆ.