Ad Widget

ಸೋರಿಯಾಸಿಸ್- ಚರ್ಮದ ಕಾಯಿಲೆ

ಸೋರಿಯಾಸಿಸ್ ಎಂಬುದು ದೀರ್ಘಕಾಲೀನ ಚರ್ಮದ ಕಾಯಿಲೆ. ತುರಿಕೆ, ಅಲ್ಲಲ್ಲಿ ಚರ್ಮದ ಪದರ ಎದ್ದು ಬರುವುದು ಇತ್ಯಾದಿ ಲಕ್ಷಣಗಳಿಂದ ಕೂಡಿರುತ್ತದೆ. ವಿಶೇಷವಾಗಿ ಮೊಣಕೈ, ಮೊಣಕಾಲು, ಎದೆ ಮತ್ತು ಹೊಟ್ಟೆಯ ಭಾಗ, ತಲೆಯ ನೆತ್ತಿಯ ಮೇಲೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದು ನೋವಿನಿಂದ ಕೂಡಿರಬಹುದು ಅಥವಾ ನೋವು ಇಲ್ಲದೇ ಇರಬಹುದು. ನಿದ್ರೆಗೆ ಅಡ್ಡಿಪಡಿಸಬಹುದು. ಕೆಲಸಕ್ಕೆ ಗಮನ ಕೊಡಲು ಕಷ್ಟ ಆಗಬಹುದು. 

ಕೆಲವು ವಾರ ಅಥವಾ ತಿಂಗಳುಗಳ ಕಾಲ ತೀವ್ರವಾದ ಲಕ್ಷಣಗಳಿದ್ದು, ಮತ್ತೆ ಸ್ವಲ್ಪ ಸಮಯ ಏನೂ ತೊಂದರೆ ಕೊಡದೇ ಇರಬಹುದು. ಸಾಮಾನ್ಯವಾಗಿ ವಂಶಪಾರಂರ‍್ಯ ಕಾರಣಗಳು, ಸೂಕ್ಷ್ಮಾಣು ಸೋಂಕು, ಸುಟ್ಟ ಗಾಯ ಅಥವಾ ಇತರ ಗಾಯಗಳು, ಹಾಗೂ ಇತರ ಕೆಲವು ಔಷಧಗಳು ಇದಕ್ಕೆ ಕಾರಣವಾಗಬಹುದು.
ಚರ್ಮದ ಸಣ್ಣಸಣ್ಣ ಪ್ರದೇಶಗಳಲ್ಲಿ ಕಜ್ಜಿ ಅಥವಾ ಗುಳ್ಳೆಗಳ ರೀತಿ ಕಾಣಿಸಿಕೊಳ್ಳುವುದು. ಇದು ಚರ್ಮದ ಮೇಲೆ ಕಾಣಿಸಿಕೊಳ್ಳುವ ರೀತಿ ಎಲ್ಲರಲ್ಲೂ ಒಂದೇ ಸಮನಾಗಿರುವುದಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದು. ತಲೆಹೊಟ್ಟು ಬಂದ ರೀತಿಯಲ್ಲಿ ಚರ್ಮದ ಸಣ್ಣ ಪ್ರದೇಶಗಳಲ್ಲಿ ಚುಕ್ಕೆಗಳಂತೆ ಕಾಣಿಸಿಕೊಂಡು, ದೊಡ್ಡ ಮಟ್ಟದ ಚರ್ಮದ ಬಿರುಕುಗಳಾಗಿ ಇಡೀ ಶರೀರಕ್ಕೆ ವ್ಯಾಪಿಸುವುದು. ಹಾಗೆಂದು ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ. ಚರ್ಮದಲ್ಲಿ ಬೀಳುವ ಸಣ್ಣ ಗಂಧೆಗಳು ಬಣ್ಣದಲ್ಲೂ ಅನೇಕ ಪ್ರಕಾರ ಇರುತ್ತದೆ. ತಿಳಿನೇರಳೆ, ಕಂದುಬಣ್ಣ, ಬೂದುಬಣ್ಣ, ಕಪ್ಪು, ಕೆಂಪು ಇರಬಹುದು. ಮಕ್ಕಳಲ್ಲಿ ಚರ್ಮದ ಮೇಲ್ಪದರ ಮಾತ್ರ ಎದ್ದು ಬಂದ ರೀತಿಯಲ್ಲಿ ಇರುತ್ತದೆ. ಒಣಗಿದ, ಬಿರುಕುಬಿಟ್ಟ ಚರ್ಮದಲ್ಲಿ ರಕ್ತಸ್ರಾವ ಕೂಡಾ ಆಗಬಹುದು. ಉರಿ, ತುರಿಕೆ ಹಾಗೂ ಕೆರೆತ ಇರಬಹುದು.
ಸೋರಿಯಾಸಿಸ್‌ನಲ್ಲಿ ಇನ್ನೂ ಅನೇಕ ವಿಧಗಳಿವೆ.

. . . . . . .
Dermatology: psoriasis. Pink, dry patches with white scale on the dorsum of the hand and across the knuckles of a 59 year old woman with psoriasis.


ಕಾಲಿನ ಬೆರಳುಗಳಲ್ಲಿನ ಉಗುರುಗಳಲ್ಲಿ ಕಾಣಬರುವಂಥದ್ದು, ಅಲ್ಲಿ ಗುಂಡಿ ಬೀಳುವುದು, ಉಗುರುಗಳ ಅಸಹಜ ಬೆಳವಣಿಗೆ, ಉಗುರು ಸಡಿಲವಾಗುವುದು, ಉಗುರು ಬೆರಳಿನ ಚರ್ಮದಿಂದ ಎದ್ದು ಬರುವುದು ಇರುತ್ತದೆ. ಗಂಟಲಿನ ಸೂಕ್ಷಾö್ಮಣುಸೋಂಕಿನ ನಂತರ ಬರುವಂಥದ್ದು ಮತ್ತೊಂದು ವಿಧ. ವಯಸ್ಕರಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ. ಸಣ್ಣ ಬಿಂದುವಿನ ಆಕಾರದಲ್ಲಿ ಎದ್ದು ಬರುವ ಹೊಟ್ಟಿನ ರೀತಿಯಲ್ಲಿ ಎದೆ, ಹೊಟ್ಟೆ, ತೋಳು, ಕಾಲುಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಇನ್ನೊಂದು ಬಗೆಯದ್ದು, ಪ್ರಮುಖವಾಗಿ ತೊಡೆಯ ಸಂದುಗಳು, ಅಂಡು ಹಾಗೂ ಎದೆಯ ಭಾಗದ ಚರ್ಮದ ಸೆರೆಗಳಲ್ಲಿ ಕಾಣಿಸಿಕೊಳ್ಳುವಂಥದ್ದು. ಉರಿಯೂತ ಹೊಂದಿರುವ ಸಣ್ಣ ಪ್ರದೇಶಗಳಾಗಿ ಕಾಣಿಸಿಕೊಂಡು, ಬೆವರು ಹಾಗೂ ಚಲನೆಗಳಿಂದ ಉಂಟಾದ ಘರ್ಷಣೆಗಳಿಂದ ಹೆಚ್ಚಾಗುತ್ತದೆ. ಫಂಗಸ್(ಶಿಲೀಂಧ್ರ ) ಸೋಂಕಿನಿಂದ ಇದು ಉಂಟಾಗಬಹುದು.
ಇನ್ನೊಂದು ಅಪರೂಪಕ್ಕೆ ಕಾಣಿಸಿಕೊಳ್ಳುವಂಥದ್ದು, ಕೀವು ತುಂಬಿದ ಗುಳ್ಳೆಗಳಿಂದ ಕೂಡಿರುವಂಥದ್ದು. ಅಂಗೈ ಮತ್ತು ಪಾದದ ಅಡಿಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಇನ್ನೊಂದು ಬಗೆಯದ್ದು, ಇಡೀ ಶರೀರ ಪೂರ್ತಿ ಹರಡಿಕೊಂಡಿರುವ ಮೇಲ್ಪದರ ಎದ್ದು ಬರುವ ಗುಳ್ಳೆಗಳಾಗಿದ್ದು, ತೀವ್ರವಾದ ತುರಿಕೆ ಮತ್ತು ಉರಿಯಿಂದ ಕೂಡಿರುವುದು.


ಈ ಸಮಸ್ಯೆಯನ್ನು ಉಲ್ಬಣಗೊಳಿಸುವ ಅಂಶಗಳು ಅನೇಕ ಇವೆ. ತೀವ್ರ ಒಣಗಿದ ಹವೆ ಅಥವಾ ಶೀತ ಹವಾಮಾನ, ಧೂಮಪಾನ, ಹೊಗೆ ತುಂಬಿದ ವಾತಾವರಣಕ್ಕೆ ತೆರೆದುಕೊಳ್ಳವುದು, ಆಲ್ಕೋಹಾಲ್ ಸೇವನೆ, ಕೆಲವು ಬ್ಲಡ್ ಪ್ರೆಶ್ಶರ್ ಔಷಧಗಳು ಇತ್ಯಾದಿ. ಈಗಾಗಲೇ ತೆಗೆದುಕೊಳ್ಳುತ್ತಿರುವ ಸ್ಟಿರಾಯ್ಡ್ ಔಷಧಗಳನ್ನು ಹಠಾತ್ತಾಗಿ
ನಿಲ್ಲಿಸುವುದು ಕೂಡ ಒಂದು ಕಾರಣ. ಆಧುನಿಕ ವೈದ್ಯಪದ್ಧತಿಯಲ್ಲಿ ಸ್ಟಿರಾಯ್ಡ್ ತುರ್ತು ಔಷಧವಾಗಿ ತೀವ್ರತೆಯನ್ನು ಕಡಿಮೆ ಮಾಡುವುದಾದರೂ, ಅದರ ದೀರ್ಘಕಾಲೀನ ಸೇವನೆಯಿಂದ ಸಕ್ಕರೆ ಕಾಯಿಲೆ, ರೋಗನಿರೋಧಕತೆ ತಗ್ಗುವುದು, ಮೂಳೆಗಳು ದುರ್ಬಲವಾಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ರೋಗಿಯು ಕೊಂಚ ತಾಳ್ಮೆ ಹೊಂದಿದ್ದಲ್ಲಿ, ಆಯುರ್ವೇದ ಪಂಚಕರ್ಮ ಚಿಕಿತ್ಸೆ, ತಕ್ರಧಾರಾ, ಕಷಾಯ, ಚೂರ್ಣ, ಮಾತ್ರೆಗಳ ಮೂಲಕ ಈ ಕಾಯಿಲೆಯನ್ನು ಯಶಸ್ವಿಯಾಗಿ ನಿಭಾಯಿಸಬಹುದು. ಆಯುರ್ವೇದದಲ್ಲಿ “ಕಿಟಿಭ ಕುಷ್ಠ” ಎಂದು ಈ ಚರ್ಮದ ಕಾಯಿಲೆಯನ್ನು ಉಲ್ಲೇಖಿಸಿ, ಚಿಕಿತ್ಸೆಗಳನ್ನು ಸೂಚಿಸಿದ್ದಾರೆ. ಚಿಕಿತ್ಸೆಯ ಆಯ್ಕೆಯಲ್ಲಿ ಆಯುರ್ವೇದ ವೈದ್ಯನ ವಿಶ್ಲೇಷಣೆ, ಕೌಶಲ್ಯಗಳು ಪಾತ್ರವಹಿಸುತ್ತವೆ. ಇಲ್ಲಿ “ಕುಷ್ಠ” ಎಂದರೆ “ಲೆಪ್ರಸಿ” ಎನ್ನುವ ಅರ್ಥ ಅಲ್ಲ. ನಮ್ಮ ದೇಹದ ಒಳಗೆ ಚರ್ಮದ ಕೋಶಗಳ ಮೇಲೆ ಧಾಳಿ ಮಾಡುವ ಕಣಗಳು ಉತ್ಪತ್ತಿಯಾಗುವ ಸ್ವರೂಪದ ಇದು ಒಂದು “ಅಟೋಇಮ್ಯೂನ್” ಕಾಯಿಲೆ. ಅತಿಯಾದ ಭೋಜನ, ಅತಿ ಉಷ್ಣಹವೆಯಲ್ಲಿ ಅತಿ ಶ್ರಮದಾಯಕ ಕೆಲಸ, ಬಾಯಾರಿಕೆ-ಮಲ-ಮೂತ್ರ-ನಿದ್ರೆಯ ವೇಗಗಳನ್ನು ತಡೆಯುವುದು, ಒಮ್ಮೆ ತೆಗೆದ ಆಹಾರ ಜೀರ್ಣವಾಗುವ ಮುಂಚೆಯೇ ಮತ್ತೆ ಆಹಾರ ಸೇವಿಸುವುದು, ಧಾನ್ಯ-ಮೊಸರು-ಮೀನು-ಉಪ್ಪು-ಹುಳಿ ಪದಾರ್ಥಗಳ ಅತಿಸೇವನೆ, ಎಳ್ಳು-ಉದ್ದು-ಹಾಲು-ಬೆಲ್ಲ-ಸಕ್ಕರೆಗಳ ಅತಿಸೇವನೆ, ಮಾನಸಿಕ ಉದ್ವೇಗ, ಕೋಪ, ದ್ವೇಷ, ಮತ್ಸರ ಇತ್ಯಾದಿ ಕಾರಣಗಳು ಉಲ್ಲೇಖವಾಗಿವೆ.
ಲೋಳೆಸರದ ಲೇಪ, ಅಮೃತಬಳ್ಳಿ ಕಷಾಯ ಸೇವನೆ ಪ್ರಶಸ್ತ. ರೋಗಿ, ರೋಗದ ಸ್ಥಿತಿಗನುಸಾರ ಕೊಡಬಹುದಾದ ಅನೇಕ ಔಷಧ ಪ್ರಯೋಗಗಳು ಆಯುರ್ವೇದದಲ್ಲಿ ಇವೆ.

https://www.prasadini.com/

ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ.ಬಿ.ಎ.ಎಂ.ಎಸ್.ಎಂ.ಎಸ್.(ಆಯು)
ಆಯುರ್ವೇದ ತಜ್ಙವೈದ್ಯರು ಹಾಗೂ ಆಡಳಿತ ನಿರ್ದೇಶಕರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಪಾದೆ,
ನರಿಮೊಗರು, ಪುತ್ತೂರು.
ಮೊ: 9740545979

 

Related Posts

error: Content is protected !!