Ad Widget

ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳಲ್ಲಿ ಮಿಂದೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ

ಭಕ್ತಿ ಭಾವದಿಂದ ಪಾಲ್ಗೊಂಡು ಅಪೂರ್ವ ಕ್ಷಣಗಳನ್ನು ಕಣ್ತುಂಬಿಕೊಂಡ ಭಕ್ತಾದಿಗಳು

ಸುಳ್ಯ: ತಾಲೂಕಿನ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬುಧವಾರ ಬೆಳಿಗ್ಗೆ ಶೀ ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನೆರವೇರಿತು.

. . . . . . .



ಹಲವು ದಿನಗಳಿಂದ ಕಾತರ, ಕುತೂಹಲ ಹಾಗೂ ಭಕ್ತ ಭಾವದಿಂದ ಕಾಯುತ್ತಿದ್ದ ಕ್ಷಣಗಳಿಗೆ ಕೊನೆಗೂ ಮುಹೂರ್ಯ ಕೂಡಿ ಬಂದಿತು. ಬೆಳಿಗ್ಗೆ 10.18 ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಮಹಾವಿಷ್ಣುಮೂರ್ತಿ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮ ನೆರವೇರಿತು. ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳು ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತ್ರತ್ವದಲ್ಲಿ ಈ ಪ್ರತಿಷ್ಠಾ ವಿಧಿ, ವಿಧಾನಗಳು ನೆರವೇರಿದವು.



ಇದೇ ವೇಳೆ ದೇಗುಲದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾದ ಶ್ರೀ ದುರ್ಗಾ ಮಾತೆಯ ವಿಗ್ರಹದ ಪ್ರತಿಷ್ಠಾ ಕಾರ್ಯಗಳು ನೆರವೇರಿದವು. ಬಳಿಕ ಪ್ರತಿಷ್ಠಾಪಿಸಲಾದ ದೇವರ ವಿಗ್ರಹಗಳಿಗೆ ಬ್ರಹ್ಮಕಲಶಾಭಿಷೇಕ ನಡೆಸಲಾಯಿತು. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಅಸಂಖ್ಯಾತ ಭಕ್ತರು ಈ ಪ್ರತಿಷ್ಠಾ ಕಾರ್ಯಕ್ಕೆ ಸಾಕ್ಷಿಗಳಾಗಿ ಪುನೀತರಾದರು.

ಪ್ರತಿಷ್ಠಾ ಕಾರ್ಯಕ್ರಮಕ್ಕೂ ಮೊದಲು ಮುಂಜಾವು 5.30 ಕ್ಕೆ 108 ತೆಂಗಿನ ಕಾಯಿಯ ಗಣಪತಿ ಹೋಮ ನಡೆಸಲಾಯಿತು. ದೇವರ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬಳಿಕ ಪ್ರತಿಷ್ಠಾ ಬಲಿ, ಮಹಾ ಪೂಜೆ, ಮಹಾ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು. ಬಳಿಕ ನಡೆದ ಅನ್ನ ಸಂತರ್ಪಣೆಯಲ್ಲಿ ಅಸಂಖ್ಯಾತ ಭಕ್ತ ಜನರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು.

ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಪುಂಡರೀಕ ಹೆಬ್ಬಾರ್, ಅಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ  ಶಿವಪ್ರಸಾದ್ ಉಗ್ರಾಣಿಮನೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕಣೆಮರಡ್ಕ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಪೂರ್ಣಚಂದ್ರ ಕಣೆಮರಡ್ಕ, ಮಾತೃ ಸಮಿತಿಯ ಸಂಚಾಲಕಿ ವಿನುತಾ ಪಾತಿಕಲ್ಲು, ವೈದಿಕ ಸಮಿತಿಯ ಸಂಚಾಲಕ ಎ.ಕೆ ಮಣಿಯಾಣಿ ಹಾಗೂ ಎಲ್ಲಾ ಉಪ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು ಉಪಸ್ಥಿತರಿದ್ದರು.

ಎಪ್ರಿಲ್ 2 ರ ಗುರುವಾರ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ ದರ್ಶನ ಬಲಿ ಉತ್ಸವ ನಡೆಯಲಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!