ಇಡೀ ದೇಶವೇ ದಿನದಿಂದ ದಿನಕ್ಕೆ ಕೋರೋನಾ ಅಟ್ಟಹಾಸದಿಂದ ಕಂಗಲಾಗುತ್ತಿದೆ. ಜನತೆಯಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ವೃದ್ಧರು ಮಕ್ಕಳು ಎನ್ನದೆ ಕೋರೋನಾವು ಎಲ್ಲರನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದು ಹಿಂಡಿಹಿಪ್ಪೆ ಮಾಡಲು ಹೊರಟಿದೆ. ರಾಜ್ಯದಲ್ಲಿ ಕೋರೋನಾ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಹಲವಾರು ದಿನಗಳಿಂದ ಜಿಲ್ಲೆಯಲ್ಲಿ ಸೊಂಕಿತರ ಪ್ರಮಾಣವು ಹೆಚ್ಚುತ್ತಾ ಬಂದಿದೆ. ಇವೆಲ್ಲವನ್ನು ತಿಳಿದ ತಾಲೂಕಿನ ಜನತೆ ತಾಲೂಕಿನಲ್ಲಿ ಕೋರೋನಾವೈರಸ್ ಬಾರದ ಹಿನ್ನಲೆಯಲ್ಲಿ ನಿಟ್ಟುಸಿರು ಬಿಟ್ಟು ದಿನನಿತ್ಯದ ಜೀವನೋಪಾಯ ಮಾರ್ಗವನ್ನು ಕಂಡುಕೊಳ್ಳುತ್ತಿದ್ದರು.
ಆದರೆ ಜೂ.೨೮ರಂದು ಒಂದೇ ದಿನ ಸುಳ್ಯ ತಾಲೂಕಿನಲ್ಲಿ ದಿಢೀರನೇ ೪ ಪ್ರಕರಣಗಳು ಕಂಡುಬಂದಿದ್ದು ಜನತೆಯಲ್ಲಿ ಆತಂಕ ಕಂಡುಬಂದಿದೆ. ಆದರೆ ಇಂದು ಸುಳ್ಯ ತಾಲೂಕು ಕಚೇರಿಯ ವಿವಿಧ ಕೌಂಟರಿನ ಮುಂಭಾಗ ಸೇರಿದ್ದ ಜನರನ್ನು ಗಮನಿಸಿದರೆ ಕೋರೋನಾ ವೈರಸ್‌ಗೂ ಜನತೆಗೂ ಯಾವುದೇ ರೀತಿಯ ಸಂಬಂಧವಿಲ್ಲದಂತೆ ಕಂಡುಬರುತ್ತಿತ್ತು. ಜನ ಸರದಿ ಸಾಲಿನಲ್ಲಿ ನಿಂತಿದ್ದರೂ ಸಾಮಾಜಿಕ ಅಂತರ ಎಲ್ಲಿಯೂ ಕಂಡುಬರುತ್ತಿರಲಿಲ್ಲ. ಇವರನ್ನು ಎಚ್ಚರಿಸುವ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ, ಇವೆಲ್ಲವನ್ನು ಕಂಡು ಕಾಣದ ರೀತಿಯಲ್ಲಿ ತಮ್ಮ ಪಾಡಿಗೆ ಸುಮ್ಮನ್ನಿದ್ದರು. ಒಟ್ಟಿನಲ್ಲಿ ಕಾಲಬುಡಕ್ಕೆ ಕೋರೋನಾ ಬಂದಿದ್ದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಸಂಕಷ್ಟವನ್ನು ಎದುರಿಸಬೇಕಾದಿತ್ತು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದರು.