ಸಮಾಜ ಸೇವೆಯೇ ಸೇವಾ ಭಾರತಿಯ ಧ್ಯೇಯ. ಕೊರೋನಾ ಕಾಲದಲ್ಲಿ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸೇವಾ ಭಾರತಿ ತನ್ನ ಸೇವೆ ಏನು ಎಂಬುದನ್ನು ಸಮಾಜಕ್ಕೆ ತೋರಿಸಿ ಕೊಟ್ಟಿದೆ. ಇದೀಗ ಜಿವರಕ್ಷಕ ಆಂಬುಲೆನ್ಸ್‌ನ್ನು ನೀಡುವ ಮೂಲಕ ಸಮಾಜಕ್ಕೆ ಮಾದರಿಯಾದ ಕೊಡುಗೆ ನೀಡಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯ ಕೇರ್ಪಳದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಸುಳ್ಯ ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ವತಿಯಿಂದ ನೂತನ ಆಂಬುಲೆನ್ಸ್ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ದೇಶದ ವಿವಿಧ ಭಾಗಗಳಲ್ಲಿ ಸೇವಾ ಭಾರತಿ ನೀಡುವ ಸೇವೆ ಮಾದರಿ ಮತ್ತು ಸಮಾಜಕ್ಕೆ ದೊಡ್ಡ ಪ್ರೇರಣೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಪ್ರಾಕೃತಿಕ ವಿಕೋಪ, ಕೊರೋನಾ ಮತ್ತಿತರ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಇತರರನ್ನು ರಕ್ಷಿಸುವ ಸೇವಾ ಕಾರ್ಯ ಅತ್ಯಂತ ಮಿಗಿಲಾದುದು ಎಂದು ಅವರು ಹೇಳಿದರು.
ಸೇವಾ ಭಾರತಿ ಮಂಗಳೂರು ವಿಭಾಗ ಪ್ರಮುಖ್ ಡಾ.ನಾರಾಯಣ ಶೆಣೈ ವಿಷಯ ಮಂಡನೆ ಮಾಡಿ’ ಕೊರೋನಾ ಸಂದರ್ಭದಲ್ಲಿ ಸೇವಾ ಭಾರತಿಯ ಸೇವೆ ನೋಡಿ ಜಗತ್ತೇ ಆಶ್ಚರ್ಯಪಟ್ಟಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಯ ಶಿಕ್ಷಣ ಈ ಸೇವೆಯನ್ನು ಕಲಿಸಿದೆ. ತಾವು ಕಲಿತ ಸಿದ್ಧಾಂತ ಈ ಸೇವೆಗೆ ಪ್ರೇರಣೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಚಾಲಕರಾದ ಚಂದ್ರಶೇಖರ ತಳೂರು, ದಿ.ಪುಟ್ಟಪ್ಲ ಜೋಷಿ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ಕಾಮತ್, ಭಾಲಾವಲಿಕಾರ್ ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ಹೇಮಂತ್ ಕುಮಾರ್ ಕಂದಡ್ಕ ಭಾಗವಹಿಸಿದ್ದರು. ಸೇವಾ ಭಾರತಿ ಹೆಲ್ಪ್ ಲೈನ್ ಅಧ್ಯಕ್ಷ ಡಾ.ಮನೋಜ್ ಕುಮಾರ್ ಎ.ಡಿ.ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಮೇನಾಲ ವಂದಿಸಿದರು. ಸುಮಿತ್ ರಾಜ್ ವೈಯುಕ್ತಿಕ ಗೀತೆ ಹಾಡಿದರು. ಎ.ಟಿ.ಕುಸುಮಾಧರ ಕಾರ್ಯಕ್ರಮ ನಿರೂಪಿಸಿದರು.